Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತದ ಸಿದ್ಧತೆ : ಡಾ.ಎಚ್.ಎನ್.ಗೋಪಾಲಕೃಷ್ಣ

ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ಮೊದಲ ವಾರದಲ್ಲಿಯೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಚುನಾವಣೆ ದಿನಾಂಕ ಘೋಷಣೆ ನಂತರ ಜಿಲ್ಲೆಯಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಾರ್ವಜನಿಕರು, ಮತದಾರರು, ರಾಜಕೀಯ ಪಕ್ಷಗಳು, ಮುಖಂಡರು, ಕಾರ್ಯಕರ್ತರು ಸಹಕರಿಸಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಚುನಾವಣಾಧಿಕಾರಿಗಳ ನೇಮಕ 

ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಈಗಾಗಲೇ ಕ್ಷೇತ್ರವಾರು ಏಳು ಮಂದಿ ಚುನಾವಣಾಧಿಕಾರಿಗಳು ಹಾಗೂ ಏಳು ಮಂದಿ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 14 ಮಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಸಖಿ, ಎಥ್ನಿಕ್ ಮತ್ತು ಯುವ ಮತಗಟ್ಟೆ ಸ್ಥಾಪನೆ

ಮಂಡ್ಯ ಜಿಲ್ಲೆಯಾದ್ಯಂತ ಒಟ್ಟು 1798 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಸೂಕ್ಷ್ಮ 24 ಹಾಗೂ ಅತಿ ಸೂಕ್ಷ್ಮ 319 ಮತಗಟ್ಟೆಗಳಿವೆ. ಜೊತೆಗೆ ಮಹಿಳಾ ಮತದಾರರಿಗಾಗಿ ಪಿಂಕ್ ಬಣ್ಣದ ಸಖಿ ಮತಗಟ್ಟೆಯನ್ನು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 2ರಂತೆ ಕೇಂದ್ರ ತೆರೆಯಲಾಗಿದೆ. ಅಲ್ಲದೆ, 163 ವಿಶೇಷಚೇತನ ಸಿಬ್ಬಂದಿಗಳಿದ್ದು, ಒಂದು ಮತಗಟ್ಟೆ, 5 ಎಥ್ನಿಕ್ ಮತಗಟ್ಟೆ ಹಾಗೂ ಹೆಚ್ಚು ಯುವ ಮತದಾರರಿರುವ 2 ಯುವ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮಳವಳ್ಳಿ ತಾಲೂಕಿನ ಬಸವನಹಳ್ಳಿ ಹಾಗೂ ಮುತ್ತತ್ತಿ ಎರಡು ಶ್ಯಾಡೋ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಎರಡು ಮತಗಟ್ಟೆಗಳಿಗೆ ನಿರಂತರ ಸಂಪರ್ಕ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲ ಮತಯಂತ್ರಗಳನ್ನು ಈಗಾಗಲೇ ಪ್ರಥಮ ಹಂತದ ಪರಿಶೀಲನೆ ನಡೆದಿದೆ. ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ. 151 ಮತಯಂತ್ರಗಳನ್ನು ಪ್ರತೀ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಜಾಗೃತಿ ಮತ್ತು ಅರಿವು ಮೂಡಿಸಲು ಬಳಸಲಾಗುತ್ತಿದೆ. ಅಲ್ಲದೆ, ಈ ಬಾರಿ ಅತ್ಯಾಧುನಿಕ ಎಂ3 ಇವಿಎಂ ಬಳಕೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

16 ನೋಡಲ್ ಅಧಿಕಾರಿಗಳ ನೇಮಕ

ಜಿಲ್ಲೆಯಾದ್ಯಂತ 16 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮ್ಯಾನ್‌ಪವರ್ ಮ್ಯಾನೇಜ್‌ಮೆಂಟ್, ತರಬೇತಿ, ಸಾಮಗ್ರಿ, ಸಾರಿಗೆ, ಕಂಪ್ಯೂಟರ್, ಸ್ವೀಪ್, ಕಾನೂನು, ಆದೇಶ ಮತ್ತು ಭದ್ರತೆ, ಇವಿಎಂ, ಚುನಾವಣಾ ಖರ್ಚಿನ ಬಗ್ಗೆ ನಿಗಾವಹಿಸಲು, ಬ್ಯಾಲೆಟ್, ಅಂಚೆ ಮತದಾನ, ಮಾಧ್ಯಮ ನಿರ್ವಹಣೆ, ಸಂಪರ್ಕ, ಸಹಾಯವಾಣಿ, ವೀಕ್ಷಕರು ತಂಡಗಳನ್ನಾಗಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ನೀತಿ ಸಂಹಿತೆ ನೋಡಲ್ ಅಧಿಕಾರಿಗಳ ನೇಮಕ

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿಪಂ ಸಿಇಒ ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದು, ಇವರಿಗೆ ಏಳು ಕ್ಷೇತ್ರಗಳ ತಾಪಂ ಇಒಗಳನ್ನು ನೇಮಕ ಮಾಡಲಾಗಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲಿದ್ದಾರೆ. ಅಲ್ಲದೆ, ಚುನಾವಣಾ ವೆಚ್ಚಗಳ ಮೇಲೆ ನಿಗಾವಹಿಸಲು ಜಿಪಂ ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ.

127 ಸೆಕ್ಟರ್ ಅಧಿಕಾರಿಗಳು

ಜಿಲ್ಲೆಯಾದ್ಯಂತ 127 ಸೆಕ್ಟರ್ ಅಧಿಕಾರಿಗಳು, 34 ಚೆಕ್ ಪೋಸ್ಟ್, 35 ಫ್ಲೆöÊಯಿಂಗ್ ಸ್ಕಾ÷್ವಡ್, 21 ವಿಡಿಯೋ ಸರ್ವೆಲೆನ್ಸ್ಗಳು, 14 ತೆರಿಗೆ, 21 ಸ್ಥಿರ ಜಾಗೃತಿ ದಳ ಹಾಗೂ 70 ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ. ಎಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ಅಲ್ಲದೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮಾಲೀಕರ ಸಭೆ ನಡೆಸಿ ಮಾದರಿ ನೀತಿ ಸಂಹಿತೆ ಬಗ್ಗೆ ತಿಳಿವಳಿಕೆ ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿ.ಪಂ.ಸಿಇಓ ಶಾಂತ ಎಲ್ ಹುಲ್ಮನಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!