ವರದಿ : ಪ್ರಭು ವಿ.ಎಸ್.
ಮುಂಬರುವ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮವಾಗಿದ್ದು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲವೆಂದು ಎಐಸಿಸಿ ಸದಸ್ಯ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಗುರುವಾರ ಸುದ್ಧಿಗೋಷ್ಠಿ ವೇಳೆ ಮಾತನಾಡಿದ ಅವರು ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ವಿರೋಧಿ ಅಲೆ ಕಂಡು ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿರುವುದಾಗಿ ಹೇಳಿದರು.
ಮೇ.10ರಂದು ನಿಗಧಿಯಾಗಿರುವ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ವರೀಷ್ಠರು, ಮುಖಂಡರು ಅನುಸರಿಸಿದ ಮಾನದಂಡ ಸ್ವಾಗತಾರ್ಹವೆಂದ ಅವರು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದ ಮತ್ತು ಆಯಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಜನಮನ್ನಣೆ ಗಳಿಸಿರುವ ವ್ಯಕ್ತಿಗಳನ್ನು ಗುರುತಿಸಿ ಕಣಕ್ಕಿಳಿಸಿರುವುದು ಸ್ವಾಗತಾರ್ಹವೆಂದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಳಂಭ ಕುರಿತಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ ಶುಕ್ರವಾರ ಸಂಜೆಯೊಳಗೆ ಇಡೀ ಮಂಡ್ಯ ಜಿಲ್ಲೆಯಲ್ಲೇ ಬಾಕಿ ಉಳಿದಿರುವ ಮದ್ದೂರು ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಪ್ರಕಟಣೆಗೊಳ್ಳಲಿರುವುದಾಗಿ ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ನೀಡುತ್ತಿರುವ ಪೊಳ್ಳು ಭರವಸೆಗಳಿಗೆ ಮತದಾರರ ತಿರಸ್ಕಾರವಿದ್ದು ಅಧಿಕಾರದಲ್ಲಿದ್ದ ವೇಳೆ ಸದರಿ ಭರವಸೆಗಳನ್ನು ಈಡೇರಿಸುವ ಯತ್ನಕ್ಕೆ ಮುಂದಾಗದೆ ಚುನಾವಣೆ ಘೋಷಣೆಯಾದ ಬಳಿಕ ಭರವಸೆಯ ಮಾತನಾಡನುತ್ತಿರುವುದು ತರವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯ 167 ಭರವಸೆಗಳ ಪೈಕಿ 164ನ್ನು ಈಡೇರಿಸಿದ ಕೀರ್ತಿಯೊಟ್ಟಿಗೆ ಎಲ್ಲಾ ವರ್ಗದವರನ್ನು ಸಮಾನವಾಗಿ ಪರಿಗಣಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದ ಬಗ್ಗೆ ಉದಾಹರಿಸಿದರು.
ಈ ವೇಳೆ ಹಿರಿಯ ಸಹಕಾರಿ ಧುರೀಣ ಕೌಡ್ಲೆ ಚನ್ನಪ್ಪ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ಮದ್ದೂರು ತಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ್, ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರಕೊಪ್ಪ, ಮಂಡ್ಯ ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು ಇತರರಿದ್ದರು




