Thursday, November 19, 2026

ಪ್ರಾಯೋಗಿಕ ಆವೃತ್ತಿ

ಗಣಿಗ ರವಿಕುಮಾರ್ ಗೆ ಮಣೆ : ಬಂಡಾಯ ಶಮನ ವರಿಷ್ಠರ ಹೊಣೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಕೀಲಾರ ರಾಧಾಕೃಷ್ಣ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಗಣಿಗ ರವಿಕುಮಾರ್ ಅವರಿಗೆ ಮಣೆ ಹಾಕಿರುವುದರಿಂದ ಬಂಡಾಯ ಶಮನಗೊಳಿಸುವ ಹೊಣೆ ವರಿಷ್ಠರ ಹೆಗಲೇರಿದೆ‌.

ಮಂಡ್ಯ‌ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ನಿನ್ನೆ ಸಂಜೆ ಮುತ್ತಿಗೆ ಹಾಕಿದ ಕೀಲಾರ ರಾಧಾಕೃಷ್ಣರ ನೂರಾರು ಅಭಿಮಾನಿಗಳು ಕಾಂಗ್ರೆಸ್ ವರಿಷ್ಠರ ವಿರುದ್ಧ ಧಿಕ್ಕಾರ ಕೂಗಿ ಕುರ್ಚಿ, ಟೇಬಲ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.ಇಂದು ಕೂಡಾ ರಾಧಾಕೃಷ್ಣ ಅವರ ನಿವಾಸದಲ್ಲಿ ಸೇರಿದ ನೂರಾರು ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಂಡಾಯವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅಭಿಮಾನಿಗಳು, ಬೆಂಬಲಿಗರ ಮಾತಿಗೆ ಮನ್ನಣೆ ನೀಡಿರುವ ಕೀಲಾರ ರಾಧಾಕೃಷ್ಣ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಗೆ ಮಂಡ್ಯ ಕ್ಷೇತ್ರದಲ್ಲಿ ಕೀಲಾರ ರಾಧಾಕೃಷ್ಣ ಒಬ್ಬರೇ ಬಂಡಾಯವೆದ್ದಿದ್ದು, ಅವರ ನಿಲುವು ಏನೆಂಬುದು ವಾರದಲ್ಲಿ ಗೊತ್ತಾಗಲಿದೆ.

ಸರಿಯಾದ ಆಯ್ಕೆ
ಮಂಡ್ಯ ಕ್ಷೇತ್ರದಿಂದ ಬಿ. ಫಾರಂ ಬಯಸಿ ಬರೋಬ್ಬರಿ 16 ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಐದಾರು ಮಂದಿ ಮಾತ್ರ ಗಂಭೀರವಾಗಿಯೇ ಪ್ರಯತ್ನ ನಡೆಸಿದ್ದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಗಣಿಗ ರವಿಕುಮಾರ್, ಕೀಲಾರ ರಾಧಾಕೃಷ್ಣ, ಅಮರಾವತಿ ಚಂದ್ರಶೇಖರ್, ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಸಿದ್ಧಾರೂಢ ಸತೀಶ್ ಗೌಡ, ಡಾ.ಕೃಷ್ಣ ಬಿ.ಫಾರಂಗಾಗಿ ನಡೆಸುತ್ತಿದ್ದ ಪೈಪೋಟಿ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ, ಅಂತಿಮಗೊಳಿಸುವುದು ವರಿಷ್ಠರಿಗೆ ಸವಾಲಿನ ವಿಷಯವಾಗಿತ್ತು. ಈ ಕಾರಣದಿಂದಲೇ ಮೊದಲ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗಿರಲಿಲ್ಲ‌.

ಇದೀಗ ಎಲ್ಲವನ್ನು ಅಳೆದು, ತೂಗಿ ಎರಡನೇ ಪಟ್ಟಿಯಲ್ಲಿ ಗಣಿಗ ರವಿಕುಮಾರ್ ಹೆಸರು ಫೈನಲ್ ಮಾಡಿ ಪ್ರಕಟಿಸಲಾಗಿದೆ‌. ಟಿಕೆಟ್ ಪಡೆಯಲು ಹರಸಾಹಸ ಮಾಡಿದ್ದ 16 ಮಂದಿ ಆಕಾಂಕ್ಷಿತರನ್ನು ಸಮಾಧಾನ ಮಾಡಿ, ಅತೃಪ್ತಿ ಶಮನ ಗೊಳಿಸುವುದು ಸುಲಭದ ಮಾತಲ್ಲ‌‌‌. ಅದನ್ನು ಕಾಂಗ್ರೆಸ್ ವರಿಷ್ಠರು ಸರಿಯಾಗಿಯೇ ನಿಭಾಯಿಸಿ ಗಣಿಗ ರವಿಕುಮಾರ್ ಗೆ ಟಿಕೆಟ್ ನೀಡಿದ್ದಾರೆ. ಈ ಬೆಳವಣಿಗೆ ಸಹಜವಾಗಿಯೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಇತರ ಆಕಾಂಕ್ಷಿಗಳ ಕಣ್ಣು ಕೆಂಪಾಗಿಸಿದೆ‌. ಅದರಲ್ಲೂ ಕೀಲಾರ ರಾಧಾಕೃಷ್ಣ ಬೆಂಬಲಿಗರು ಸ್ವಲ್ಪ ಹೆಚ್ಚಾಗಿಯೇ ರಿಯಾಕ್ಟ್ ಮಾಡಿದ್ದರೆ, ಉಳಿದ ಆಕಾಂಕ್ಷಿಗಳ ಕೋಪ ಬಹಿರಂಗವಾಗಿಲ್ಲ ಅಷ್ಟೇ.

ನಿರೀಕ್ಷಿತವಾಗಿತ್ತು
ಮಂಡ್ಯ ಕ್ಷೇತ್ರದಿಂದ ರವಿಕುಮಾರ್ ಗಣಿಗ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದು ನಿರೀಕ್ಷಿತ ಕೂಡ ಆಗಿತ್ತು ಎನ್ನುವುದು ಬಹಿರಂಗ ಸತ್ಯ. ಇದಕ್ಕೆ ಹಲವು ಕಾರಣಗಳೂ ಇದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನ ರವಿಕುಮಾರ್ ಅವರ ಹೆಸರು ಪ್ರಕಟಿಸಲಾಗಿತ್ತು. ಆ ಚುನಾವಣೆಯಲ್ಲಿ ಅವರು 21 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಅದಾದ ನಂತರ ಗಣಿಗ ರವಿಕುಮಾರ್ ಕ್ಷೇತ್ರದಲ್ಲಿದ್ದು ಪಕ್ಷ ಸಂಘಟನೆ ಮಾಡುತ್ತಿದ್ದರು. ಜತೆಗೆ ಸ್ಥಳೀಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಕೊರೊನಾ ಸಂದರ್ಭದಲ್ಲಿ ಕ್ಷೇತ್ರದ ಜನರ ಮಧ್ಯೆ ನಿಂತು ಅವರ ದುಃಖ-ದುಮ್ಮಾನ ಆಲಿಸಿ, ದಿನಸಿ ಕಿಟ್ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ನೀಡಿ ಜನರೊಂದಿಗೆ ನಿಂತರು.

ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಸಾವಿರಾರು ಜನರನ್ನು ಕಳಿಸಿ ಮಂಜುನಾಥ ಸ್ವಾಮಿ ದರ್ಶನ ಮಾಡಿಸಿದ್ದರು. ಇದೆಲ್ಲ ಮಾಹಿತಿಯೂ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ತಿಳಿದಿತ್ತು. ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಮಾಡಿದ ಸರ್ವೆಯಲ್ಲೂ ಗಣಿಗ ರವಿಕುಮಾರ್ ಹೆಸರು ಮೊದಲಿತ್ತು. ಇವೆಲ್ಲ ಅಂಶಗಳನ್ನು ಪರಿಗಣಿಸಿ ಕಾಂಗ್ರೆಸ್ ವರಿಷ್ಠರು ಗಣಿಗ ರವಿಕುಮಾರ್ ಹೆಸರನ್ನು ಅಂತಿಮ ಗೊಳಿಸಿ ಎರಡನೇ ಪಟ್ಟಿಯಲ್ಲಿ ಬಿಡುಗಡೆ ಗೊಳಿಸಿದರು.

ದುಡಿದವರನ್ನು ಪರಿಗಣಿಸುವಂತೆ ಮನವಿ
ಕಾಂಗ್ರೆಸ್ ಟಿಕೆಟ್ ಪಡೆಯಲೆಂದೇ ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ಸೇರಿದ್ದ ಕೀಲಾರ ರಾಧಾಕೃಷ್ಣ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಡಾ.ಕೃಷ್ಣ ಅವರಿಗೆ ನಿರಾಸೆಯಾಗಿದ್ದರೆ, ಅತ್ತ ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಸಿದ್ದಾರೂಢ ಸತೀಶ್ ಗೌಡ ನೇತೃತ್ವದ ತಂಡ ವಲಸಿಗರಿಗೆ ಅವಕಾಶ ಕೊಡದೇ ಪಕ್ಷದಲ್ಲಿ ದುಡಿದವರನ್ನು ಪರಿಗಣಿಸುವಂತೆ ಹೈಕಮಾಂಡ್‌ವರೆಗೂ ಮನವಿ ಸಲ್ಲಿಸಿತ್ತು.

ಅವರೆಲ್ಲರಿಗೂ ರವಿಕುಮಾರ್ ಗಣಿಗ ಅವರಿಗೆ ಅವಕಾಶ ನೀಡುವ ವಿಚಾರದಲ್ಲಿ ಟಿಕೆಟ್ ಆಕಾಂಕ್ಷಿತರಲ್ಲಿ ಹೆಚ್ಚಿನ ವಿರೋಧವಿರಲಿಲ್ಲ. ಮಾತ್ರವಲ್ಲದೆ ವಲಸಿಗರೆಂದೇ ಬ್ರಾಂಡ್ ಆಗಿದ್ದ ಕೆ.ಕೆ.ರಾಧಾಕೃಷ್ಣ ಮತ್ತು ಡಾ.ಕೃಷ್ಣಗೆ ಅವಕಾಶ ಕೊಟ್ಟರೆ ಬಂಡಾಯ ಸ್ಫೋಟಗೊಳ್ಳುವ ಹಾಗೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುವ ಸಾಧ್ಯತೆಗಳು ಗೋಚರಿಸಿದ್ದವು. ಮೂಲ ಕಾರ್ಯಕರ್ತರನ್ನು ಕಡೆಗಣಿಸಿದರೆ, ವಲಸಿಗರಿಂದ ಲಾಭ ಪಡೆದಿದ್ದಾರೆನ್ನುವ ಗಂಭೀರ ಆರೋಪ ಪಕ್ಷದ ವರಿಷ್ಠರ ಮೇಲೆ ಬರುವುದರ ಜೊತೆಗೆ ಚುನಾವಣೆಯಲ್ಲಿ ಅನಾನುಕೂಲಕರ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿತ್ತು.

ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಿದಾಗ ರವಿಕುಮಾರ್ ಅವರಿಗೆ ಅವಕಾಶ ಕೊಡುವ ಸಂಬಂಧ ಸಕಾರಾತ್ಮಕ ಸ್ಪಂದನೆಯನ್ನು ಉಳಿದ ಆಕಾಂಕ್ಷಿಗಳು ನೀಡಿದ್ದರು.

ಅಲ್ಲದೆ ಪ್ರಮುಖವಾಗಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಗಣಿಗ ರವಿಕುಮಾರ್ ಬಗ್ಗೆ ಜನರಲ್ಲಿ ಅನುಕಂಪವಿದೆ. ಜೊತೆಗೆ ಜೆಡಿಎಸ್‌ನ ಬಂಡಾಯ ಫ್ಲಸ್ ಆಗುವ ಸಾಧ್ಯತೆ ಇರುವುದರಿಂದ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎನ್ನುವ ಅಂಶ ಖಾತ್ರಿಯಾಗಿತ್ತು. ಈ ಎಲ್ಲ ಮಾನದಂಡ ಪರಿಗಣಿಸಿ ರವಿಕುಮಾರ್‌ಗೆ ಮತ್ತೆ ಮಣೆ ಹಾಕಲಾಗಿದೆ. ಇದರಿಂದಾಗಿ ಪಕ್ಷದ ಹಿರಿಯ ಮುಖಂಡರಿಗೂ ಕೊಂಚ ಸಮಾಧಾನ ತಂದಿದೆ.

ಹಾಗೆಯೇ ಡಾ.ಕೃಷ್ಣಗೆ ಟಿಕೆಟ್ ಕೈ ತಪ್ಪಿದ್ದು, ಅವರು ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಹಲವು ತಿಂಗಳ ಹಿಂದೆಯೇ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟು ಸ್ಪರ್ಧೆ ವಿಚಾರದಿಂದ ದೂರ ಉಳಿಸುವ ಕೆಲಸವನ್ನು ಮೊದಲೇ ಮಾಡಿದ್ದರು.

ಒಟ್ಟಾರೆ ಮಂಡ್ಯ ಕ್ಷೇತ್ರದಲ್ಲಿ ಬಿ.ಫಾರಂ ಸಿಗದೆ ಕೀಲಾರ ರಾಧಾಕೃಷ್ಣ ಬಂಡಾಯ ಎದ್ದಿದ್ದು, ಅವರನ್ನು ಸಮಾಧಾನ ಮಾಡಿದರೆ ಉಳಿದ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಒಂದು ಗೂಡಿಸುವುದು ಕಷ್ಟವೇನಲ್ಲ ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಮಾತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ