ಮದ್ದೂರು ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಅವರ ಗೆಲುವಿಗಾಗಿ ಕಾರ್ಯಕರ್ತರು ಹಾಗೂ ಮುಖಂಡರು ಬೈಕ್ ರ್ಯಾಲಿ ಮೂಲಕ ಮಲೈ ಮಹದೇಶ್ವರ ಬೆಟ್ಟಕ್ಕೆ
ತೆರಳುವುದಾಗಿ ಬೂತ್ ಘಟಕದ ಅಧ್ಯಕ್ಷ ಗೆಜ್ಜಲಗೆರೆ ಯೋಗೇಶ್ ತಿಳಿಸಿದರು.
ಮದ್ದೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಏ.9 ಭಾನುವಾರ ಬೆಳಿಗ್ಗೆ 9 ಗಂಟೆಗೆ ಗೆಜ್ಜಲಗೆರೆ ಗ್ರಾಮದ ಶ್ರೀರಾಮಮಂದಿರ ದೇವಾಲಯದಿಂದ ಮಲೈ
ಮಹದೇಶ್ವರ ಬೆಟ್ಟದವರೆವಿಗೆ ಬೈಕ್ ರ್ಯಾಲಿ ಮೂಲಕ ತೆರಳಿ ಎಸ್.ಪಿ. ಸ್ವಾಮಿ ಗೆಲುವಿಗೆ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲೆಂಬ ಸದುದ್ದೇಶದಿಂದ ದೇವರಿಗೆ ಹರಕೆ ಹೊತ್ತಿರುವುದಾಗಿ
ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲಾ ವರ್ಗದ ಅಭ್ಯುದಯಕ್ಕೆ ಶ್ರಮಿಸುವ ಜತೆಗೆ ಕಳೆದ ಹಲವಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಜಾರಿಗೊಳಿಸುವ
ಜತೆಗೆ ಇತರೆ ದೇಶಗಳು ಭಾರತದತ್ತ ಮುಖ ಮಾಡಲು ಪ್ರಧಾನಿ ನರೇಂದ್ರಮೋದಿ ಅವರ ಆಡಳಿತವೇ ಕಾರಣವಾಗಿದ್ದು ಮತದಾರರು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ರ್ಯಾಲಿ ವೇಳೆ ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿ ವೇಳೆ ಗೆಜ್ಜಲಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಲಿಂಗಯ್ಯ ಇತರರಿದ್ದರು.




