Friday, September 20, 2024

ಪ್ರಾಯೋಗಿಕ ಆವೃತ್ತಿ

ನಿವೇಶನ ರಹಿತರ ತೊಡಕು ನಿವಾರಣೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನಿವೇಶನರಹಿತರಿಗೆ ಸುಳ್ಳು ಕಾನೂನು ತೊಡಕು ಉಂಟು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಏ.13ರಂದು ಬೂದನೂರು ಗ್ರಾ.ಪಂ.ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಹಳೇ ಬೂದನೂರು ಗ್ರಾ.ಪಂ.ವ್ಯಾಪ್ತಿಯ ವಸತಿ ರಹಿತರ ಸಂಘಟನೆಯ ಮುಖಂಡ ಬೂದನೂರು ಸತೀಶ್ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ರಹಿತರ ಭೂಮಿಗೆ ಸುಳ್ಳು ಕಾನೂನು ತೊಡಕು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ನಿವೇಶನರಹಿತರಿಗೆ ನಿಗದಿಯಾಗಿರುವ ಭೂಮಿಗೆ ಸ್ಥಳೀಯ ಗ್ರಾ.ಪಂ. ಗ್ರಾಮಸಭೆ ಮೂಲಕ ಹಂಚಿಕೆ ಮಾಡಲಾಗಿದ್ದು, ಈ ಸರ್ಕಾರಿ ಭೂಮಿಗಳ ಕುರಿತು ಕೆಲವು ಭೂ ಒತ್ತುವರಿದಾರರು, ಭೂ ಕಬಳಿಕೆದಾರರು ನ್ಯಾಯಾಲಯಗಳಲ್ಲಿ ಸುಳ್ಳು ವ್ಯಾಜ್ಯಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಗ್ರಾಪಂ ಆಡಳಿತ, ಪಿಡಿಒ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆಂದು ದೂರಿದರು.

ಈ ವ್ಯಾಜ್ಯಗಳ ಕುರಿತು ವಾದ ಮಂಡಿಸಲು ತಮ್ಮ ತಹಶೀಲ್ದಾರ್ ಕಚೇರಿ ಸರ್ಕಾರಿ ವಕೀಲರಿಗೆ ದಾಖಲೆ ನೀಡಿದರೂ ಕ್ರಮ ವಹಿಸದೇ ವಕೀಲರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಕುರಿತು ಗ್ರಾಮ ಪಂಚಾಯಿತಿಯೂ ಕ್ರಮ ವಹಿಸದಿದ್ದಲ್ಲಿ ಜ.13 ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ. ಅಲ್ಲದೇ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ- 2023ರ ಮತದಾನವನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ತಡೆಯಾಜ್ಞೆ ತರಲು ಕಾರಣರಾದ ಸರ್ಕಾರಿ ವಕೀಲರನ್ನು ಬದಲಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು. ಗರೀಬಿ ಹಠಾವೋ ಭೂಮಿಯ ತಡೆಯಾಜ್ಞೆ ತೆರವು ಹಾಗೂ ಭೂಮಿ ಪಕ್ಕದಲ್ಲಿರುವ 108 ಅಡಿ ರಸ್ತೆ ಉಳಿಸಿ ಅದೇಶ ನೀಡಬೇಕು.  ಗ್ರಾಪಂ ನಡೆಸಿರುವ ಗ್ರಾಮಸಭೆ ಹಾಗೂ ಭೂಮಿ ಹಸ್ತಾಂತರದಲ್ಲಿ ಮಾಡಿರುವ ಲೋಪದ ಕುರಿತು ತನಿಖೆ ನಡೆಸಬೇಕು. ಬೂದನೂರು ಸರ್ವೇ 190 ರ ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕಿ ತಿಂಗಳಾದರೂ ಕ್ರಮವಾಗಿಲ್ಲ. ಈ ಕುರಿತು ಖುದ್ದು ಉಪ ವಿಭಾಗಾಧಿಕಾರಿಗಳು ವರದಿ ಮಾಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸವಿತ, ಪದ್ಮ‌, ನಾಗರತ್ನ ಹಾಗೂ ಮಂಗಳ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!