ವರದಿ : ಕಾಮನಹಳ್ಳಿ ಮಂಜುನಾಥ್
ನಮ್ಮ ನಾಡು ಉಳಿಯಬೇಕಾದರೆ ಪ್ರಾದೇಶಿಕ ಪಕ್ಷದ ಜಾತ್ಯಾತೀತ ಜನತಾದಳ ಪಕ್ಷವನ್ನು ನೀವೆಲ್ಲರೂ ಬೆಂಬಲಿಸಬೇಕು. ನಮ್ಮ ಪಕ್ಷದ ವರಿಷ್ಠರು ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಮಂಜಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ತಳಮಟ್ಟದಿಂದ ಮೇಲ್ಮಟ್ಟಕ್ಕೆ ಸಾಕಷ್ಟು ಪರಿಶ್ರಮದಿಂದ ಬಂದಿದ್ದಾರೆ. ಅವರನ್ನು ಬೆಂಬಲಿಸಬೇಕೆಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.
ಕೃಷ್ಣರಾಜಪೇಟೆ ಪಟ್ಟಣದ ಟಿಎಪಿಸಿಎಂಎಸ್ ಎಸ್ ಎಂ ಲಿಂಗಪ್ಪ ಸಮುದಾಯ ಭವನದ ಆವರಣದಲ್ಲಿ ನಡೆದ ಮನ್ಮುಲ್ ನಿರ್ದೇಶಕ ಡಾಲು ರವಿ ಹಾಗೂ ಅವರ ಅಭಿಮಾನಿಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರೈತರ ಕಷ್ಟ ಸುಖಗಳನ್ನು ಅರಿತಿರುವ ಮಂಜು ಅವರನ್ನು ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುವುದರ ಮೂಲಕ ಮಾಜಿ ಪ್ರಧಾನ ಮಂತ್ರಿ ದೇವೇಗೌಡ್ರು ಅವರಿಗೆ ಶಕ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರ ಕೈಯನ್ನು ಬಲಪಡಿಸುವಂತೆ ಮನವಿ ಮಾಡಿದರು.
ದೇಶದಲ್ಲಿ ನುಡಿದಂತೆ ನಡೆಯುವ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅವರೇ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಕುಮಾರಣ್ಣ ಮುಖ್ಯಮಂತ್ರಿ ಆಡಳಿತದ ಅವಧಿಯಲ್ಲಿ ಕೊಟ್ಟಂತಹ ಜನಪರ ಕಾರ್ಯಕ್ರಮಗಳನ್ನು ಜನತೆ ಇಂದಿಗೂ ಮರೆತಿಲ್ಲ. ರೈತರ ಸಾಲ ಮನ್ನಾ,ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ರೈತರ ಬಗ್ಗೆ ಅತಿ ಹೆಚ್ಚಿನ ರೀತಿಯಲ್ಲಿ ಚಿಂತನೆಯನ್ನು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರಾದ ಹೆಚ್ ಡಿ ದೇವೇಗೌಡ್ರು ಮಾಡುವರು ಎಂದರು.
ಚನ್ನರಾಯಪಟ್ಟಣ ಶಾಸಕ ಸಿ. ಎನ್ .ಬಾಲಕೃಷ್ಣ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಕ್ಷವು ಈ ಬಾರಿ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಿಧಾನ ಚುನಾವಣೆಯಲ್ಲಿ ಸ್ವಂತ ಬಲದಿಂದ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಆಗುವುದರಲ್ಲಿ ಸಂಶಯವಿಲ್ಲ. ಹಗಲಿರುಳು ಎನ್ನದೇ ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರೈತರು ಮಹಿಳೆಯರು, ಯುವಕರು ಉಳಿಯಬೇಕಾದರೆ ರೈತರ ಪಕ್ಷ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.
ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ದೇವೇಗೌಡ್ರು ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರ ಆಡಳಿತ ವೈಖರಿಯನ್ನು ನೋಡಿ ಒಪ್ಪಿ ಯಾವುದೇ ಷರತ್ತುಗಳಿಲ್ಲದೇ ಜೆಡಿಎಸ್ ತತ್ವ ಸಿದ್ದಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಅಭ್ಯರ್ಥಿ ಹೆಚ್ ಟಿ ಮಂಜು ಅವರ ಜೊತೆ ಮನ್ಮುಲ್ ನಲ್ಲಿ ಒಡನಾಡಿಯಾಗಿ ಸಹಾಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಮಂಜು ಅವರ ಉತ್ತಮ ನಡೆವಳಿಕೆಯನ್ನು ಒಪ್ಪಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಶಾಸಕ ಸಿ ಎನ್ ಬಾಲಕೃಷ್ಣ, ಜೆಡಿಎಸ್ ಅಭ್ಯರ್ಥಿ ಹೆಚ್. ಟಿ.ಮಂಜು, , ತಾಲೂಕು ಘಟಕದ ಅಧ್ಯಕ್ಷ ಜಾನಕೀರಾಂ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಧನಂಜಯಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಶೀಳನೆರೆ ಮೋಹನ್, ರೈತ ಸಂಘದ ಕಾರಿಗನಹಳ್ಳಿ ಕುಮಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಕಿರಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




