Wednesday, October 23, 2024

ಪ್ರಾಯೋಗಿಕ ಆವೃತ್ತಿ

ದುರಾಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಲಿತ – ರೈತ ವಿರೋಧಿ : ಬಿ.ಸೋಮಶೇಖರ್

ವರದಿ : ಪ್ರಭು ವಿ.ಎಸ್.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ದಲಿತ ಮತ್ತು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದಾಗಿ ಮಾಜಿ ಸಚಿವ ಬಿ.ಸೋಮಶೇಖರ್ ಆರೋಪಿಸಿದರು.

ಮದ್ದೂರು ಪಟ್ಟಣದ ಶಿವಪುರದ ವೆಂಕಟೇಶ್ವರ ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಠ ಜಾತಿ, ಪಂಗಡದ ಕಾರ್ಯಕರ್ತರ ಸಭೆ ವೇಳೆ ಮಾತನಾಡಿದ ಅವರು ಸರ್ಕಾರದ ಕಾರ್ಯವೈಖರಿ ಮತ್ತು ಹಲವಾರು ಪ್ರತಿಭಾನ್ವಿತ ದಲಿತ ಮುಖಂಡರನ್ನು ಬೆಳೆಯಲು ಸಹಿಸದ ಬಿಜೆಪಿ ಪಕ್ಷದ ವಿರುದ್ಧ ಸಿಡಿದೆದ್ದು ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವುದಾಗಿ ಹೇಳಿದರು.

ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದವರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಉದಾಹರಣೆಗಳು ಸಾಕಷ್ಟಿದ್ದು ಅದರಲ್ಲೂ ದಲಿತ ನಾಯಕನೊಬ್ಬನಿಗೆ ಎಐಸಿಸಿ ಹುದ್ದೆಯನ್ನು ನೀಡಿದ್ದು ಇದನ್ನು ಮನಗಂಡು ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಪಣತೊಡಬೇಕೆಂದರು.

ಎಸ್‌ಸಿ/ಎಸ್‌ಟಿ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್‌ಕಂಠಿ ಮಾತನಾಡಿ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದ್ದು ಸಮುದಾಯದ ಲಕ್ಷಾಂತರ ಮಕ್ಕಳಿಗೆ ಪ್ರೋತ್ಸಾಹಧನ ಬಿಡುಗಡೆಗೊಳಿಸದೆ ಬಿಜೆಪಿ ಪಕ್ಷವು ತಾರತಮ್ಯ ವೆಸಗಿರುವುದಾಗಿ ದೂರಿದರು.

ಸಮುದಾಯದ ಪ್ರತಿಯೊಬ್ಬ ಮತದಾರರ ಮತವು ಅತ್ಯಮೂಲ್ಯವಾಗಿದ್ದು ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳಿಗೆ ಮತವನ್ನು ನೀಡದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯನ್ನಾಗಿಸಬೇಕೆಂದು ಕೋರಿದರು.

ಅಭ್ಯರ್ಥಿ ಕದಲೂರು ಉದಯ್ ಮಾತನಾಡಿ, ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿದ್ದು ಎಲ್ಲೆಡೆ ಉತ್ತಮ ಸ್ಪಂಧನೆ ದೊರೆತಿದ್ದು ಬಡವರ ಮತ್ತು ದಲಿತರ ಉದ್ದಾರಕ್ಕಾಗಿ ಮತದಾರರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಮನವಿ ಮಾಡಿದರು.

ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಲ್ಲಿ 10 ಕೆ.ಜಿ. ಅಕ್ಕಿ, 200 ಯುನಿಟ್ ವಿದ್ಯುತ್, ಪ್ರತಿ ಮನೆಗೆ 2 ಸಾವಿರ ಮತ್ತು ಪದವೀಧರರಿಗೆ ಪ್ರತಿ ತಿಂಗಳು ಮಾಸಿಕ 3 ಸಾವಿರ ವಿತರಿಸಲು ಮುಂದಾಗಿದ್ದು ಇದನ್ನರಿತು ಕಾರ್ಯಕರ್ತರು ಪ್ರತಿ ಮನೆ ಮನೆ ಬಾಗಿಲಿಗೆ ತೆರಳಿ ತಮ್ಮ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಬೇಕೆಂದು ಕೋರಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆ
ಪಟ್ಟಣದ ಕಾವೇರಿ ನಗರ ಬಡಾವಣೆಯ ಸುಮಾರು 25ಕ್ಕೂ ಹೆಚ್ಚು ಯುವಕರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತಿನಗರ ಅಧ್ಯಕ್ಷ ತಿಮ್ಮಯ್ಯ, ಮುಖಂಡರಾದ ದೊರೆಸ್ವಾಮಿ, ನಾಗಭೂಷಣ್, ಚಿದಂಬರ್, ಶಶಾಂಕ್, ಶೇಖರ್, ನಟೇಶ್, ಅಂಬರೀಷ್, ಬೋರಯ್ಯ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!