ಜೆಡಿಎಸ್ ನಾಯಕರ ಸ್ವಯಂಕೃತ ತಪ್ಪಿನಿಂದಾಗಿ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸೋಲು ಅನುಭವಿಸಲಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂ.ಜೆ.ಚಿಕ್ಕಣ್ಣ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, 3 ತಿಂಗಳ ಹಿಂದೆ ಬಂದ ವ್ಯಕ್ತಿ ಮಂಡ್ಯ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಬಿ.ಫಾರಂ ನೀಡಲಾಗಿದೆ. ಪಕ್ಷದ ವರಿಷ್ಠರು ವ್ಯಕ್ತಿಗಿಂತ ಹೆಚ್ಚು ಹಣಕ್ಕೆ ಮಾನ್ಯತೆ ನೀಡಿದ್ದಾರೆ. ಇದರಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿಯವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಕಡೆಗಣನೆ
ಜೆಡಿಎಸ್ ನಾಯಕರು ಹಾಸನ ಒಂದು ಕಣ್ಣಾದರೆ, ಮಂಡ್ಯ ನಮಗೆ ಒಂದು ಕಣ್ಣು ಎಂದು ಹೇಳಿಕೊಳ್ಳುತ್ತಾರೆ. ಇದೇ ಮಾತನ್ನು ರಾಮನಗರ, ಚನ್ನಪಟ್ಟಣಕ್ಕೂ ಹೋದಾಗಲೂ ಹೇಳುತ್ತಾರೆ, ಒಬ್ಬ ಮನುಷ್ಯನಿಗೆ ಇರುವುದು ಒಂದೇ ಕಣ್ಣಲ್ಲವೇ ನಾಲ್ಕು ಕಣ್ಣುಗಳು ಇರಲು ಸಾಧ್ಯವೇ ಎಂದು ವ್ಯಂಗವಾಡಿದದರು.
ಹಾಸನವನ್ನು ಅಭಿವೃದ್ದಿ ಮಾಡಿದಷ್ಟು ಮಂಡ್ಯವನ್ನು ಅಭಿವೃದ್ದಿ ಮಾಡಲಿಲ್ಲ, ಮಂಡ್ಯ ದೊಡ್ಡ ಹಳ್ಳಿಯಾಗಿಯೇ ಹಿಂದುಳಿದಿದೆ. ಅಭಿವೃದ್ದಿ ಮಾಡಿದ್ದೇವೆ ಎನ್ನುವವರು ನನ್ನೊಂದಿಗೆ ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಟಿಕೆಟ್ ಮಾರಾಟ
ಮಂಡ್ಯ ವಿಧಾನಸಭಾ ಕ್ಷೇತ್ರ ಟಿಕೆಟ್ ಮಾರಾಟವಾಗಿದೆ ಎಂಬ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ, ಇದು ನಿಜವು ಇರಬಹುದು, ಏಕೆಂದರೆ ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯವಿಲ್ಲ ಎಂದರು.
ಇಲ್ಲಿಯವರೆಗೆ ಎಂ.ಶ್ರೀನಿವಾಸ್ ಬಣದಲ್ಲಿ ಗುರುತಿಸಿಕೊಂಡಿದ್ದ ನಗರಸಭಾ ಅಧ್ಯಕ್ಷ ಹೆಚ್.ಎಸ್.ಮಂಜು ಒಂದು ರಾತ್ರಿಗೆ ಬದಲಾಗಿ, ಎಂ.ಶ್ರೀನಿವಾಸ್ ವಿರುದ್ಧ ಮಾತನಾಡುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದ ಯಾರು ಖರೀದಿಯಾಗಿದ್ದಾರೆಂಬುದು ಜನತೆಗೆ ತಿಳಿಯುತ್ತದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆಗಿದ್ದರೂ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ. ಬೇಕಾದರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿ, ಡಿ.ರಮೇಶ್ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ, ಒಂದು ವೇಳೆ ಆತನಿಗಿಂತ ನಾನು ಒಂದೇ ಒಂದು ಮತ ಕಡಿಮೆ ತೆಗೆದುಕೊಂಡರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಮುಖಂಡರಾದ ದಿವಾಕರ್ ಮತ್ತು ಬೋರೇಗೌಡ ಉಪಸ್ಥಿತರಿದ್ದರು.




