ಕಷ್ಟಪಟ್ಟು ದ್ವಿತೀಯ ಪರೀಕ್ಷೆ ಬರೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರು ಸರಿಯಾದ ರೀತಿಯಲ್ಲಿ ಮೌಲ್ಯಮಾಪನ ಮಾಡದೇ ಲೋಪವೆಸಗಿದ್ದರಿಂದ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾಗಬೇಕಾದ ವಿದ್ಯಾರ್ಥಿಯೊಬ್ಬ ಕನಿಷ್ಠ ಅಂಕಗಳಿಗೆ ಸಿಮೀತವಾಗಿ ತೇರ್ಗಡೆಯಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ವಿಶ್ವಮಾನವ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೂತನ್ ಹೆಚ್.ಎನ್ ಮಾಲ್ಯಮಾಪಕರ ನಿರ್ಲಕ್ಷ್ಯದಿಂದಾಗಿ ರ್ಯಾಂಕ್ ನಿಂದ ವಂಚಿತನಾಗಿ, ಮಾನಸಿಕ ತೊಳಲಾಟ ಅನುಭವಿಸುವಂತಾಗಿದೆ. ನೂತನ್ ಕನ್ನಡದಲ್ಲಿ 78 ಅಂಕಗಳು, ಭೌತವಿಜ್ಞಾನದಲ್ಲಿ 99, ರಸಾಯನಶಾಸ್ತ್ರದಲ್ಲಿ 100, ಗಣಿತದಲ್ಲಿ 97, ಜೀವಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿ ನೂತನ್ ಇಂಗ್ಲೀಷ್ ಭಾಷಾ ವಿಷಯದಲ್ಲಿ ಒಟ್ಟು 22 ಪುಟಗಳಲ್ಲಿ ಉತ್ತರಗಳನ್ನು ಬರೆದಿದ್ದು, ಆ ಪೈಕಿ ಮೌಲ್ಯಮಾಪನ ಮಾಡಿದ ಶಿಕ್ಷಕರು ಕೇವಲ 13 ಪುಟಗಳನಷ್ಟೆ ಮೌಲ್ಯಮಾಪನ ಮಾಡಿ, ಉಳಿದ 9 ಪುಟಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿಯು ಪಡೆದುಕೊಂಡ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಫಿಯಲ್ಲಿ ಕಂಡು ಬಂದಿದೆ.
ಅಲ್ಲದೇ ಕನ್ನಡ ಭಾಷಾ ವಿಷಯದಲ್ಲೂ ಕೇವಲ 78 ಅಂಕಗಳನ್ನು ನೀಡಿದ್ದು, ಈ ವಿಷಯದಲ್ಲೂ ಮೌಲ್ಯಮಾಪನ ಲೋಪವಾಗಿರುವ ಸಾಧ್ಯತೆ ಇದೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೌಲ್ಯಮಾಪಕರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಯ ವ್ಯಾಸಂಗ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದ್ದು, ಇವರೊಂದಿಗೆ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಪೋಷಕರಾದ ಹೆಚ್.ಆರ್.ನಾಗರಾಜು ಅವರು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಮರು ಮೌಲ್ಯಮಾಪನ ನಡೆಸುವಂತೆ ಅರ್ಜಿ ಸಲ್ಲಿಸಿದ್ದು, ಸೂಕ್ತ ರೀತಿಯಲ್ಲಿ ಮರು ಮೌಲ್ಯಮಾಪನ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಕೆಲವು ಮೌಲ್ಯಮಾಪಕರ ನಿರ್ಲಕ್ಷದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಮುಂದಿನ ಉನ್ನತ ವ್ಯಾಸಂಗದಲ್ಲಿ ದ್ವಿತೀಯ ಪಿಯುಸಿ ಅಂಕಗಳನ್ನೆ ಪರಿಗಣಿಸುವುದರಿಂದ ಇಂತಹ ವಿದ್ಯಾರ್ಥಿಗಳು ಜೆಇಇ, ನೀಟ್ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯವಾಗದೇ ಇರುವ ಅಂತಕವು ಇರುತ್ತದೆ. ಅಲ್ಲದೇ ಇಂತಹ ಘಟನೆಗಳಿಂದ ವಿದ್ಯಾರ್ಥಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.




