Saturday, May 18, 2024

ಪ್ರಾಯೋಗಿಕ ಆವೃತ್ತಿ

ಗ್ಯಾರಂಟಿಗಳು ಹಕ್ಕುಗಳೋ? ಆರ್ಥಿಕ ಹೊರೆಯೋ? ಉಳ್ಳವರು ಹೇಳುತ್ತಿರುವ ಬಿಟ್ಟಿಗಳೋ?

✍️ ರಜನಿಕಾಂತ್ ಚಟ್ಟೇನಹಳ್ಳಿ

ಕರ್ನಾಟಕದಲ್ಲಿ ಜನರು ಆಯ್ಕೆ ಮಾಡಿದ ಕಾಂಗ್ರೆಸ್‌ ಪಕ್ಷ ಅಧಿಕ್ಕಾರಕ್ಕೇರಿದೆ. ಚುನಾವಣಾ ಪೂರ್ವ ಭರವಸೆಗಳಾದ ತನ್ನ ಮುಖ್ಯ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ದಿನಾಂಕ ಗೊತ್ತು ಮಾಡಿದೆ. ಆದರೆ ಚುನಾವಣೆಯ ನಂತರ ವಿರೋಧ ಪಕ್ಷಗಳು ಮಾಡುತ್ತಿರುವ ವಾದಗಳು ಅತ್ಯಂತ ಮುಟ್ಟಾಳುತನದಿಂದ ಕೂಡಿವೆ. ಇದಕ್ಕೆ ತಕ್ಕಂತೆ ಬಿಜೆಪಿ ಪರವಾಗಿನ ಕೆಲವು ಮಾಧ್ಯಮಗಳು ಸಹ, ಅವೈಜ್ಞಾನಿಕ ಹೇಳಿಕೆಗಳನ್ನು ಮುಂದಿಟ್ಟು ಜನರನ್ನು ಗೊಂದಲಕ್ಕೆ ತಳ್ಳುತ್ತಿವೆ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಜಾರಿಯಾದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಒಂದು ಕಡೆ ಹೇಳುವ ಬಿಜೆಪಿ ಮತ್ತೊಂದು ಗ್ಯಾರಂಟಿಗಳನ್ನು ಇನ್ನು ಏಕೆ ಜಾರಿಯಾಗಿಲ್ಲ? ಅವುಗಳಿಗೆ ಕಂಡಿಷನ್ ಏಕೆ ಎಂಬ ವಿರೋಧಭಾಸದ ಹೇಳಿಕೆಗಳನ್ನು ನೀಡುತ್ತಿದೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಜೂನ್ ಒಂದರಿಂದ ಉಗ್ರ ಹೋರಾಟ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸೋತಿರುವ ರೇಣುಕಾಚಾರ್ಯ ಮನೆ ಮನೆಗೆ ಹೋಗಿ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಪ್ರಚೋದನೆ ನೀಡುತ್ತಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿಯವರು ಮಾತ್ರ ಗ್ಯಾರಂಟಿ ಯೋಜನೆಗಳು ಜಾರಿಯಾದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ. ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಯಾವುದೇ ಕಂಡಿಷನ್ ಇಲ್ಲದೇ ಬಡವ ಶ್ರೀಮಂತ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವಾಗ ಏಕೆ ಕಂಡಿಷನ್‌ಗಳನ್ನು ಹಾಕಿದ್ದರು? ಇವರುಗಳ ದ್ವಿಮುಖ ನೀತಿಗೆ ಏನು ಹೇಳುವುದು?

ಗ್ಯಾರಂಟಿಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯೇ?

ಈ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ 50,000 ಕೋಟಿ ರೂಗಳು ತಗುಲುತ್ತದೆ. ಪಕ್ಕದ ಆಂಧ್ರ ಪ್ರದೇಶ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿನ ಬಡಜನರ ಕಲ್ಯಾಣ ಯೋಜನೆಗಳಿಗಾಗಿ ಸುಮಾರು 2.12 ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಅಲ್ಲಿಯೂ ವಾರ್ಷಿಕ ಸರಾಸರಿ 53,000 ಕೋಟಿ ವೆಚ್ಚ ಮಾಡಿದೆ. ಅಂದ ಮಾತ್ರಕ್ಕೆ ಆಂಧ್ರ ಪ್ರದೇಶ ರಾಜ್ಯ ದಿವಾಳಿಯಾಗಿದೆಯೇ? ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಹ ಇದೇ ಮಾದರಿಯ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದರೂ ಅವು ಸದೃಢವಾಗಿವೆ ಎಂಬುದನ್ನು ಮರೆಯಬಾರದು.

ಆದರೆ ಸರ್ಕಾರ ಈ ಯೋಜನೆಗಳ ಜಾರಿಗಾಗಿ ಮತ್ತೆ ರಾಜ್ಯದ ಜನರ ಮೇಲೆ ತೆರಿಗೆ ಹಾಕುವುದು, ಕೆಲ ಇಲಾಖೆಗಳ ವೆಚ್ಚ ಕಡಿತ ಮಾಡುವುದನ್ನು ಮಾಡಬಾರದು. ಬದಲಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುವಾದ, ಜಿಎಸ್‌ಟಿ ಪಾಲನ್ನು ಗಟ್ಟಿಯಾಗಿ ಕೇಳಿ ಪಡೆದುಕೊಳ್ಳಬೇಕು. ಜೊತೆಗೆ ದೇಶದ ಅತಿ ಶ್ರೀಮಂತರ, ಕ್ರೋನಿ ಬಂಡವಾಳಶಾಹಿಗಳ ಮೇಲೆ ಸಂಪತ್ತಿನ ತೆರಿಗೆ ವಿಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಮತ್ತು ಸೋರಿಕೆಯಾಗದಂತೆ ತಡೆಯಬೇಕಿದೆ.

ಅನೇಕ ಆರ್ಥಿಕ ತಜ್ಞರು ರಾಜ್ಯ ಸರ್ಕಾರ ಜಾರಿಮಾಡುವ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಜಿಎಸ್‌ಟಿ, ನೋಟು ರದ್ಧತಿ, ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಜನರ ಆರ್ಥಿಕ ಸ್ಥಿತಿ ಕುಸಿದಿದ್ದು, ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹಾಗಾಗಿ ಈ ಯೋಜನೆಗಳಿಂದ ಜನರ ಕೈಗೆ ನೇರವಾಗಿ ಹಣ ಸಿಕ್ಕರೆ ಅಥವಾ ಉಚಿತ ವಿದ್ಯುತ್, ಅಕ್ಕಿ, ಬಸ್‌ಪಾಸ್‌ನಿಂದ ಅವರ ಹಣ ಉಳಿದರೆ ಅದನ್ನು ಬೇರೆ ವಸ್ತುಗಳನ್ನು ಕೊಳ್ಳಲು ಬಳಸುತ್ತಾರೆ. ಅವರ ಅಗತ್ಯ ವಸ್ತುಗಳನ್ನು ಕೊಳ್ಳಲು ಮುಂದಾಗುತ್ತಾರೆ. ಆಗ ಹಣದ ವಹಿವಾಟು ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆ ಹೆಚ್ಚಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಸಿಕ್ಕಲ್ಲಿ ಜನ ಮತ್ತೆ ಖರ್ಚು ಮಾಡುತ್ತಾರೆ. ಜಿಡಿಪಿ – ತೆರಿಗೆ ಸಂಗ್ರಹ ಹೆಚ್ಚಳವಾಗುತ್ತದೆ.. ಹೀಗೆ ಆರ್ಥಿಕ ಸರಪಳಿ ಚೇತರಿಸಿಕೊಳ್ಳುತ್ತದೆ ಎಂಬುದು ಒಂದು ವಾದ.

ಉಳ್ಳವರು ಹೇಳುವಂತೆ ಇವು ಬಿಟ್ಟಿ ಭಾಗ್ಯಗಳೇ?

2021-22ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯಾಗಿ ಭಾರತೀಯರು ಪಾವತಿಸಿದ 6.73 ಲಕ್ಷ ಕೋಟಿ ರೂಗಳಿಗೆ ಹೋಲಿಸಿದರೆ, ಪರೋಕ್ಷ ತೆರಿಗೆಯಿಂದ 20.73 ಲಕ್ಷ ಕೋಟಿ ರೂ ಸಂಗ್ರಹಿಸಲಾಗಿದೆ. ಅಂದರೆ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದವರು ಕಟ್ಟುವ ಪರೋಕ್ಷ ತೆರಿಗೆಯ ಪಾಲು ಬೃಹತ್ ಪ್ರಮಾಣದಲ್ಲಿದೆ. ಈ ದೇಶದ ಶೇ.50 ರಷ್ಟು ಬಡವರು ಶೇ.64.3% ರಷ್ಟು ಜಿಎಸ್‌ಟಿ ಕಟ್ಟುತ್ತಿದ್ದಾರೆ ಎಂದು ಆಕ್ಸ್‌ಫಾಮ್ ವರದಿ ಹೇಳಿದೆ.

ಭಾರತದ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯಗಳ ತೆರಿಗೆ ಆದಾಯದಲ್ಲಿ ಶೇ.67 ರಷ್ಟು ಭಾಗ ಪರೋಕ್ಷ ಭಾಗದಿಂದ ಬರುತ್ತದೆ.  ಕಾರ್ಪೋರೇಟ್ ಮತ್ತು ನೇರ ಆದಾಯ ತೆರಿಗೆ 33% ಬರುತ್ತದೆ. ಅದರಲ್ಲಿಯೂ ಈ 33% ತೆರಿಗೆಯನ್ನು ಕೇವಲ ಶ್ರೀಮಂತ ಉದ್ಯಮಿಗಳು ಮಾತ್ರ ಕಟ್ಟುವುದಿಲ್ಲ. ಬದಲಿಗೆ ಸಂಬಳ ಪಡೆಯುವ ಮಧ್ಯಮ ವರ್ಗದ ಜನರು ಸಹ ಆದಾಯ ತೆರಿಗೆಯ ಮೂಲಕ ಪ್ರತ್ಯಕ್ಷ ತೆರಿಗೆ ಕಟ್ಟುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಈ ದೇಶದಲ್ಲಿ ಹೆಚ್ಚಿನ ತೆರಿಗೆ ಕಟ್ಟುವವರು ಬಡವರೆ ಹೊರತು ಶ್ರೀಮಂತರಲ್ಲ. ಹಾಗಾಗಿ ಬಡವರ ಹಣದಿಂದಲೇ ಈ ದೇಶ ನಡೆಯುತ್ತಿರುವಾಗ ಅವರಿಗೆ ಸರ್ಕಾರ ನೀಡುವ ಯೋಜನೆಗಳು ಉಚಿತವಲ್ಲ, ಬದಲಿಗೆ ಅವರ ಹಕ್ಕು ಎಂಬುದನ್ನು ಮರೆಯಬಾರದು.

ಯಾವುದೇ ಪ್ರದೇಶದ ಆರ್ಥಿಕ ಸ್ಥಿತಿಗತಿಗಳು ಸುಧಾರಿಸಬೇಕಾದರೆ, ಅವರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ಇಂದು ಮೂಲಭೂತ ಹಕ್ಕುಗಳಾದ ಉಚಿತ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರ ಆಗಿರುವುದು ದುರಂತ. ಹಾಗಾಗಿಯೇ ಜನರು ತಮ್ಮ ದುಡಿಮೆಯ ಬಹುತೇಕ ಪಾಲನ್ನು ತಮ್ಮ ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಆರೋಗ್ಯಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಹಾಗಾಗಿ ಅವು ಸದಾ ಬಡತನದಲ್ಲಿಯೇ ಉಳಿಯಬೇಕಾಗಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಷ್ಟೇ ಸಾಲುವುದಿಲ್ಲ. ಬದಲಿಗೆ ಉಚಿತ ಶಿಕ್ಷಣ, ಸುಭದ್ರ ಉದ್ಯೋಗ, ಉಚಿತ ಆರೋಗ್ಯದಂತಹ ಮೂಲಭೂತ ಬದಲಾವಣೆಗಳನ್ನು ತರುವ ಯೋಜನೆಗಳು ಜಾರಿಯಾಗಬೇಕಿದೆ. ಅವುಗಳು ಜಾರಿಯಾಗುವಂತೆ ವಿರೋಧ ಪಕ್ಷಗಳು ದನಿಯೆತ್ತಬೇಕೆ ಹೊರತು ಬಡವರಿಗೆ ನೀಡುವ ಯೋಜನೆಗಳನ್ನು ವಿರೋಧಿಸುತ್ತಾ, ಗೊಂದಲ ಮೂಡಿಸಬಾರದು.

ಇನ್ನು ಈ ಐದು ಗ್ಯಾರಂಟಿಗಳನ್ನು ವಿರೋಧಿಸುವವರು ನಮ್ಮ ದೇಶದ ಹಸಿವಿನ ಸೂಚ್ಯಾಂಕವನ್ನು ಗಮನಿಸಿದ್ದಾರೆಯೇ? ಅಪೌಷ್ಟಿಕ ಮಕ್ಕಳನ್ನು ನೋಡಿದ್ದಾರೆಯೇ? ಹೋಗಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಯಾವತ್ತಾದರೂ ದನಿ ಎತ್ತಿದ್ದಾರೆಯೇ? ಇವು ಯಾವುದನ್ನು ಗಮನಿಸದೇ ಬಿಟ್ಟಿ ಭಾಗ್ಯ ಎಂದು ಕರೆಯುವುದು ಹೊಟ್ಟೆ ತುಂಬಿದವರ ಅಹಂಕಾರವಲ್ಲವೇ? ಇನ್ನು ಈ ಯೋಜನೆಗಳ ಹೆಚ್ಚಿನ ಅನುಕೂಲ ಮಹಿಳೆಯರಿಗೆ ಸಿಗುತ್ತಿದೆ. ಆದರೆ ಮಹಿಳೆಯರು ಮನೆಯ ಹೊಸ್ತಿಲು ದಾಟಬಾರದು ಎಂಬು ಪುರುಷಾಧಿಪತ್ಯ ತುಂಬಿಕೊಂಡ ಮನಸ್ಥಿತಿಗಳು ಈ ಯೋಜನೆಗಳನ್ನು ವಿರೋಧಿಸುತ್ತಿವೆ. ಇದು ಸಾಮಾಜಿಕ ಚಲನೆಗೆ ಮಾಡುವ ದ್ರೋಹ. ಮುಖ್ಯವಾಗಿ ಸ್ತ್ರೀ ವಿರೋಧದ ವಿಕೃತ ರೂಪಕ ಅನ್ನುವುದನ್ನು ರಾಜ್ಯವು ಮರೆಯುವುದಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!