Friday, October 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರದಿಂದ 1.50 ಲಕ್ಷ ಕೋಟಿ ಹಣ ಲೂಟಿ : ಪ್ರಿಯಾಂಕ ಗಾಂಧಿ

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಜನರ 1.50 ಲಕ್ಷ ಕೋಟಿಯಷ್ಟು ಹಣವನ್ನು ಲೂಟಿ ಮಾಡಿದ್ದು, ರಾಜ್ಯದ ಜನರು ಈ ಲೂಟಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮನವಿ ಮಾಡಿದರು.

ಮಂಡ್ಯ ನಗರದ ಸರ್ಕಾರಿ ಬಾಲಕಿಯರ ಕಾಲೇಜು (ಕಲ್ಲು ಕಟ್ಟಡ)ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕರ್ನಾಟಕ ರಾಜ್ಯ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಜನರು ಕಷ್ಟಪಟ್ಟು ಬದುಕು ಸಾಗಿಸುತ್ತಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ 40 ಪರ್ಸೆಂಟ್ ಕಮಿಷನ್ ಹೊಡೆದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ಈ ಸರ್ಕಾರ ನ್ಯಾಯಯುತವಾಗಿ ರಚನೆಯಾಗಿಲ್ಲ. ಹಣ ಕೊಟ್ಟು ಕೆಲವು ಶಾಸಕರನ್ನು ಖರೀದಿಸಿ ಈ ಕೆಟ್ಟ ಸರ್ಕಾರ ರಚನೆ ಮಾಡಲಾಗಿದೆ. ಈ ಸರ್ಕಾರ ರಚನೆ ಮಾಡಿದ್ದೆ ಲೂಟಿ ಹೊಡೆಯುವ ಏಕೈಕ ಉದ್ದೇಶದಿಂದ ಎಂದು ವಾಗ್ದಾಳಿ ನಡೆಸಿದರು.

ಬೆಲೆಗಳು ಗಗನಕ್ಕೆ
ಜನರು ಕಷ್ಟಪಟ್ಟು ದುಡಿಮೆ ಮಾಡುತ್ತಾರೆ.ಆ ಹಣದಲ್ಲಿ ತಮ್ಮ ಜೀವನ ಸಾಗಿಸಲು ಹೋದರೆ ಎಲ್ಲಾ ಬೆಲೆಗಳು ಗಗನಕ್ಕೆ ಏರಿದೆ. ಗ್ಯಾಸ್ ಸಿಲಿಂಡರ್, ಬೇಳೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯೂ ಏರಿದೆ. ಕಷ್ಟಪಟ್ಟು ದುಡಿಯುವ ನಮ್ಮ ಜನರ ದುಡಿಮೆ ಹಣವನ್ನು ಬಿಜೆಪಿ ಲೂಟಿ ಮಾಡುತ್ತಿದೆ. ಶೇ. 40 ರಷ್ಟು ಕಮಿಷನ್ ಹೊಡೆಯುತ್ತಿದೆ ಎಂದು ಗುತ್ತಿಗೆದಾರರೇ ಪ್ರಧಾನಿಗೆ ಪತ್ರ ಬರೆದರೂ ಅದಕ್ಕೆ ಉತ್ತರಿಸುವ ಗೋಜಿಗೆ ಪ್ರಧಾನಿಯವರು ಹೋಗಿಲ್ಲ. ಈ ಸರ್ಕಾರದ ಶಾಸಕನೊಬ್ಬ ಎಂಟು ಕೋಟಿ ರೂಪಾಯಿಯನ್ನು ಅಕ್ರಮವಾಗಿ ಗಳಿಸಿದ್ದ. ಆದರೆ ಅವನ ವಿರುದ್ಧವು ಯಾವ ಕ್ರಮ ಆಗಿಲ್ಲ. ರೈತರು, ಜನಸಾಮಾನ್ಯರು ಯುವಕರು ನೋವಿನಿಂದ ನರಳುತ್ತಿದ್ದಾರೆ ಎಂದರು.

ಲಂಚ ಲಂಚ ಲಂಚ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲದಕ್ಕೂ ಲಂಚ ನೀಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು,ಸರ್ಕಾರ ಯುವಜನರಿಗೆ ಉದ್ಯೋಗ ನೀಡುತ್ತಿಲ್ಲ. ಪೋಷಕರು ಕಷ್ಟಪಟ್ಟು ಒಂದೊಂದೇ ರುಪಾಯಿಯನ್ನು ಕೂಡಿಟ್ಟು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ, ಆ ಮಕ್ಕಳಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಎಲ್ಲಾ ಉದ್ಯೋಗಗಳಿಗೂ ಲಂಚ ಫಿಕ್ಸ್ ಮಾಡಿ ಮಾರುತ್ತಿದ್ದಾರೆ ಎಂದು ಕಿಡಿಕಾರಿದರು.

ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿ, ಸಹಾಯಕ ಇಂಜಿನಿಯರ್ ಗಳ ನೇಮಕಾತಿ, ಬ್ಯಾಂಕ್ ಉದ್ಯೋಗಿಗಳ ನೇಮಕಾತಿಯಲ್ಲೂ ಲಂಚ ಪಡೆಯಲಾಗಿದೆ.ಎಲ್ಲಾ ಇಲಾಖೆಗಳಲ್ಲೂ ಲಂಚ ಲಂಚ ಲಂಚ ಎನ್ನುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಂಕಷ್ಟದಲ್ಲಿ ರೈತರು
ಇಂದು ರಾಜ್ಯದ ರೈತರ ಬದುಕು ಶೋಚನೀಯವಾಗಿದೆ ಪ್ರತಿ ಎಕರೆಗೆ 25,000 ರೂ.ಗಳಷ್ಟು ತೆರಿಗೆಯನ್ನು ಆತ ಕಟ್ಟಬೇಕಿದೆ.ಟ್ರಾಕ್ಟರ್ ಗೆ 12% ಜಿ ಎಸ್ ಟಿ, ರಸಗೊಬ್ಬರ, ಕ್ರಿಮಿನಾಶಕ, ಡೀಸೆಲ್, ಪ್ರತಿಯೊಂದು ಬೆಲೆಯೂ ಹೆಚ್ಚಳವಾಗಿದ್ದು, ಜಿಎಸ್‌ಟಿ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ರೈತರ ಆದಾಯ ಡಬಲ್ ಮಾಡುತ್ತೀವಿ ಎಂದು ಹೇಳಿದ ಡಬಲ್ ಇಂಜಿನ್ ಸರ್ಕಾರದಲ್ಲಿ ಲೂಟಿ ಬಿಟ್ಟು ಬೇರೇನೂ ನಡೆಯುತ್ತಿಲ್ಲ. ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ಖಾಸಗೀಕರಣ ತಡೆದು ಸರ್ಕಾರಿ ಸ್ವಾಮ್ಯದಲ್ಲಿ ಮುಂದುವರಿಸಲಿದೆ ಎಂದರು.

ಮುಚ್ಚಿದ ಕೈಗಾರಿಕೆಗಳು
ರಾಜ್ಯದಲ್ಲಿರುವ ಸಣ್ಣ, ಮಧ್ಯಮ ಕೈಗಾರಿಕೆಗಳು ಸಾವಿರಾರು ಸಂಖ್ಯೆಯಲ್ಲಿ ಮುಚ್ಚಿವೆ. ಒಂದೆರಡು ದೊಡ್ಡ ಕಂಪನಿಗಳಿಗೆ ಲಾಭ ಮಾಡಿ ಕೊವುದನ್ನು ಬಿಟ್ಟರೆ ಮೋದಿಯವರಿಗೆ ಬೇರೆ ಯಾವುದೂ ಕಾಣುತ್ತಿಲ್ಲ. ಯುವಕರ ಭವಿಷ್ಯ ಕ್ಷೀಣವಾಗಿದ್ದು,ಕರ್ನಾಟಕದಲ್ಲಿರುವ ಹಲವು ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ಹೋಗಿವೆ. ಯುವಕರು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸುತ್ತಿದ್ದು, ಅವರ ಭವಿಷ್ಯ ಕ್ಷೀಣವಾಗಿದೆ. ಉದ್ಯೋಗ ಸೃಷ್ಟಿ, ಶಿಕ್ಷಣ, ತಂತ್ರಜ್ಞಾನದಲ್ಲಿ ಮೊದಲ ಸ್ಥಾನದಲ್ಲಿದ್ದ ನಮ್ಮ ರಾಜ್ಯ 40% ಸರ್ಕಾರದಿಂದ ಕೊನೆಯ ಸ್ಥಾನ ತಲುಪಿದೆ ಎಂದರು.

ನಂದಿನಿ ಉಳಿಸುತ್ತೇವೆ
ಬಿಜೆಪಿ ಸರ್ಕಾರ ರೈತರ ಜೀವನಾಡಿಯಾಗಿರುವ ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನ ಮಾಡಲು ನಿಂತಿದೆ. ನಂದಿನಿ ಹಾಲಿನ ಅಭಾವವಿದೆಯೆಂದು ಸೃಷ್ಟಿಸಿ ಅಮೂಲ್ ಒಳಗೆ ಮಿಕ್ಸ್ ಮಾಡಲು ಹೊರಟಿರುವುದನ್ನು ನಮ್ಮ ಸರ್ಕಾರ ಖಂಡಿಸುತ್ತದೆ. ರೈತರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ನಮ್ಮ ಸರ್ಕಾರ ಸರಿಯಾದ ಉತ್ತರ ನೀಡಲಿದೆ. ಜನರ ಶ್ರಮದಿಂದ ಕಟ್ಟಿರುವ ನಂದಿನಿಯನ್ನು ಕಾಂಗ್ರೆಸ್ ಸರ್ಕಾರ ಉಳಿಸುತ್ತದೆ ಎಂದರು.

ಅಧಿಕಾರ ಕೊಡಿ
ಕಾಂಗ್ರೆಸ್ ಪಕ್ಷ ಅನ್ನ ಭಾಗ್ಯ ಕ್ಷೀರಭಾಗ್ಯ, ಕೃಷಿಭಾಗ್ಯ, ಆರೋಗ್ಯ, ಭಾಗ್ಯ, ವಿದ್ಯಾ ಭಾಗ್ಯ, ಇಂದಿರಾ ಕ್ಯಾಂಟೀನ್ ಕ್ಷೀರಧಾರೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಿತ್ತು. ಆದರೆ ಬಿಜೆಪಿ ಸರ್ಕಾರ ಇವೆಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿದೆ‌ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಒಡತಿಗೆ 2000 ರೂ., 200 ಯೂನಿಟ್ ಉಚಿತ ವಿದ್ಯುತ್,10 ಕೆಜಿ ಅಕ್ಕಿ, ಯುವ ಜನತೆಗೆ ಯುವನಿಧಿ, ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತೆಯರ ಸಂಬಳವನ್ನು ಹೆಚ್ಚಿಸುತ್ತದೆ. ರಾಜ್ಯದ ಹಾಗೂ ಜನರ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಮಾಜಿ ಸಂಸದೆ,ಚಿತ್ರನಟಿ ರಮ್ಯಾ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಸಲೀಂ ಅಹ್ಮದ್,ಮೊಹಮದ್ ನಲ್ ಪಾಡ್, ನೆಟ್ಟಾ ಡಿಸೋಜ, ಪುಷ್ಪ ಅಮರ್ ನಾಥ್, ಅಭ್ಯರ್ಥಿಗಳಾದ ಎನ್‌‌.ಚಲುವರಾಯಸ್ವಾಮಿ ಪಿ.ಎಂ. ನರೇಂದ್ರಸ್ವಾಮಿ, ಗಣಿಗ ರವಿಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ದಡದಪುರ ಶಿವಣ್ಣ, ಹೆಚ್.ಬಿ‌.ರಾಮು,ಅಮರಾವತಿ ಚಂದ್ರಶೇಖರ್,ಉಮ್ಮಡಹಳ್ಳಿ ಶಿವಕುಮಾರ್,ಸಿದ್ಧಾರೂಢ ಸತೀಶ್ ಗೌಡ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!