Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ?

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್‌ ಸೇರಿ, ಚುನಾವಣೆಯಲ್ಲಿ ಸೋಲುಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್ ಉನ್ನತ ಸ್ಥಾನ ನೀಡುತ್ತದೆ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ.

ಆರು ಬಾರಿ ಶಾಸಕರಾಗಿದ್ದ ಶೆಟ್ಟರ್, ಅಲ್ಪಾವಧಿಗೆ ಮುಖ್ಯಮಂತ್ರಿಯೂ ಆಗಿದ್ದರು. ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ, ಕೇಸರಿ ಪಾಳಯ ತೊರೆದು ಕಾಂಗ್ರೆಸ್‌ ಸೇರಿದರು. ಹುಬ್ಬಳ್ಳಿ – ಧಾರವಾಡ ಸೆಂಟ್ರಲ್

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ 34,289 ಮತಗಳ ಅಂತರದಿಂದ ಸೋಲುಂಡರು.

ಶೆಟ್ಟರ್ ಅವರು ತಮ್ಮ ಕ್ಷೇತ್ರದಲ್ಲಿ ಮತ್ತೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ, ಉತ್ತರ ಕರ್ನಾಟಕದ ಲಿಂಗಾಯತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಲವು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲು ಅವರ ವರ್ಚಸ್ಸು ಕಾರಣವಾಯಿತು. ಅವರನ್ನು ಕಳೆದುಕೊಂಡ ಬಿಜೆಪಿ ಲಿಂಗಾಯತ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲುಂಡಿತು.

ಲಿಂಗಾಯತ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಗೆಲ್ಲಲು ನೆರವಾದ ಶೆಟ್ಟರ್‌ಗೆ ಸೂಕ್ತ ಪ್ರತಿಫಲ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಈಗಾಗಲೇ ಪಕ್ಷದ ರಾಜ್ಯ ನಾಯಕತ್ವಕ್ಕೆ ವರದಿ ಸಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶೆಟ್ಟರ್‌ಗೆ ಸ್ಥಾನ ಕಲ್ಪಿಸಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಕಾಂಗ್ರೆಸ್‌ ನಾಯಕರು ಶೆಟ್ಟರ್‌ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಶೆಟ್ಟರ್ ಸದ್ಯ ಬೆಂಗಳೂರಿನಲ್ಲೇ ತಂಗಿದ್ದಾರೆ. ಅಲ್ಲದೆ, “ನಾನು ಬೇಷರತ್ತಾಗಿ ಕಾಂಗ್ರೆಸ್‌ ಸೇರಿದ್ದೇನೆ. ಪಕ್ಷದಲ್ಲಿ ಹುದ್ದೆ ಪಡೆಯುವ ಬಗ್ಗೆ ನಾನು ಏನನ್ನೂ ಹೇಳಲಾರೆ” ಎಂದು ಶೆಟ್ಟರ್ ಹೇಳಿದ್ದಾರೆ.

ಆದಾಗ್ಯೂ, ಶೆಟ್ಟರ್‌ಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಅಥವಾ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಗೆ ಅವರನ್ನು ಪರಿಗಣಿಸಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಟಿಎನ್‌ಐಇ ವರದಿ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಪಕ್ಷದಲ್ಲಿ ಕಗ್ಗಂಟಾಗಿ ಉಳಿದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇಬ್ಬರನ್ನೂ ಕಾಂಗ್ರೆಸ್‌ ಹೈಕಮಾಂಡ್‌ ದೆಹಲಿಗೆ ಕರೆಸಿಕೊಂಡಿದೆ. ಸದ್ಯದಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾರು ಎಂಬುದು ಘೋಷಣೆಯಾಗುವ ಸಾಧ್ಯತೆ ಇದೆ. ಪ್ರಮಾಣ ವಚನ ಸ್ವೀಕಾರದ ಬಳಿಕ, ಸಚಿವ ಸಂಪುಟ ರಚನೆಯಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!