Tuesday, October 22, 2024

ಪ್ರಾಯೋಗಿಕ ಆವೃತ್ತಿ

ಯಾರು ಸಿಎಂ ಆಗಬೇಕೆಂಬುದು ಬೀದಿ ಜಗಳವಾಗಿ ಮಾರ್ಪಾಡಾಗುವುದು ಸರಿಯೇ ?

✍️ ಹರ್ಶಕುಮಾರ್ ಕುಗ್ವೆ, ಪತ್ರಕರ್ತರು

ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಇರುವ ಮುಕ್ಯ ಕಾರಣಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಒಂದಾಗಿ, ಯಾವುದೇ ಸಣ್ಣ ಬಿರುಕು ಬಿನ್ನಾಬಿಪ್ರಾಯ ತೋರಗೊಡದೇ, ಜಂಟಿಯಾಗಿ ಉತ್ಸಾಹದಿಂದ ಪ್ರಚಾರ ನಡೆಸಿದ್ದು ಬಹಳ ಮುಕ್ಯವಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ಸಹ ಈ ವಿಶಯದಲ್ಲಿ ಬಿಗಿಯಾಗಿ ವರ್ತಿಸಿತ್ತೆನ್ನಬಹುದು.‌

ಈ ಸಲದ ಚುನಾವಣೆ ಗೆಲುವಿನಲ್ಲಿ ಯಾರ ಪಾಲು ಹೆಚ್ಚು ಎನ್ನಲು ಬರುವುದಿಲ್ಲ. ಇಬ್ಬರೂ ಅಗೋಶಿತ ಸಿಎಂ ಕ್ಯಾಂಡೇಟುಗಳಾಗಿಯೇ ಜನರು ಗುರುತಿಸಿದ್ದಾರೆ. ಹಾಗೆ ನೋಡಿದರೆ ಡಿಕೆಶಿ ಇಡೀ ರಾಜ್ಯದ ದೃಷ್ಟಿಯಿಂದ ಮಾಸ್ ಲೀಡರ್ ಅಲ್ಲ. ಆದರೆ ಸಿದ್ದರಾಮಯ್ಯ ಮಾಸ್ ಲೀಡರ್. ಅದೇ ಹೊತ್ತಿಗೆ ಸಿದ್ದರಾಮಯ್ಯ ಪಕ್ಷ ಸಂಗಟನೆ ವಿಶಯದಲ್ಲಿ ಬಹಳ ದುರ್ಬಲರು. ಅವರಿಗೆ ಕಾರ್ಯಕರ್ತರ ಮೇಲೆ ಯಾವುದೇ ಹಿಡಿತ ಇಟ್ಟುಕೊಳ್ಳಲು ಆಗದು. ಆದರೆ ಈ ಕೆಲಸದಲ್ಲಿ ಡಿಕೆಶಿ ನಿಷ್ಣಾತರು. ಕಾರ್ಯಕರ್ತರ ನೈತಿಕತೆಯನ್ಜು ಹುರಿದುಂಬಿಸಿ ಎಲ್ಲಾ ಸಮಸ್ಯೆಗಳನ್ನು ಅಟೆಂಡ್ ಮಾಡುತ್ತಾ ಪಕ್ಷದ ಒಳಗೆ ಜೋಶ್ ತರುವಲ್ಲಿ ಡಿಕೆಶಿ ಪಾತ್ರ ದೊಡ್ಡದು. ನಿಜವಾಗಿ ಕಾಂಗ್ರೆಸ್ ಗೆ ಬಲತುಂಬಿದ್ದು ಈ ಎರಡೂ ಅಂಶಗಳು. ಪಕ್ಷದ ಒಳಗೆ ಡಿಕೆಶಿಯ ಕೇಡರ್ ಪುಲ್ಲಿಂಗ್ ಮತ್ತು ಪಕ್ಷದ ಹೊರಗೆ ಸಿದ್ದರಾಮಯ್ಯ ಅವರ ಮಾಸ್ ಪುಲ್ಲಿಂಗ್. ಈ ಜೋಡೆತ್ತು ಕೆಲಸವೇ ಅವರನ್ನು ಯಶಸ್ಸಿಗೆ ಕೊಂಡೊಯ್ದಿರುವುದು.‌ ಚುನಾವಣೆಯಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಬಹುದಾಗಿದ್ದ ಸಂಗತಿಯನ್ನು ಇಬ್ಬರೂ ಮೆಚ್ಚುಗೆ ಉಂಟಾಗುವ ರೀತಿ ನಿಬಾಯಿಸಿದರು.‌

ಈಗ ಕಾಂಗ್ರೆಸ್ ಸರ್ಕಾರ ರಚಿಸುವ ಹೊತ್ತಿನಲ್ಲಿ ಸಿಎಂ ಯಾರಾಗಬೇಕು ಎಂಬ ಚರ್ಚೆ ನಡೆದಿದೆ. ಕಾಂಗ್ರೆಸ್ ನ ಒಳಗೇ ಬಗೆ ಹರಿಯಬೇಕಾಗಿದ್ದ ಸಮಸ್ಯೆ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಅದಕ್ಕಿಂತ ಅಪಾಯಕಾರಿ ಬೆಳವಣಿಗೆ ಎಂದರೆ ಜಾತಿ ಜಗಳವಾಗಿ ಮಾರ್ಪಡುತ್ತಿದೆ. ಇದಕ್ಕೆ ಮುಕ್ಯವಾಗಿ ಒಕ್ಕಲಿಗ ಮಟಾದೀಶರು ಕಾರಣರಾಗಿದ್ದರೆ ಇದಕ್ಕೆ ಪ್ರತಿಕ್ರಿಯಿಸಿರುವ ಕುರುಬ ಜಾತಿ ಮುಕಂಡರೂ ಕಾರಣರಾಗಿದ್ದಾರೆ. ಪ್ರಬುದ್ದತೆಯಿಂದ ಪಕ್ಷದ ಚೌಕಟ್ಟಿನಲ್ಲಿ ನಿಬಾಯಿಸಿಕೊಳ್ಳಬೇಕಾದ ವಿಶಯ ಹೀಗೆ ಜಾತಿ ಸಂಗರ್ಶವಾಗಿ ಬೆಳೆಯುವಾಗ ಈ ಇಬ್ಬರೂ ನಾಯಕರು ಮೌನವಾಗಿರುವುದು ವಿಶಾದಕರ. ಡಿಕೆಶಿ ಒಕ್ಕಲಿಗ ಜಾತಿಯ ಮಟಾದೀಶರಿಗೆ ಸೌಜನ್ಯದಿಂದಲೇ ಮನವರಿಕೆ ಮಾಡಬೇಕಿತ್ತು. ‘ನಾವು ಬಗೆಹರಿಸಿಕೊಳ್ಳುತ್ತೇವೆ ನೀವು ಸುಮ್ಮನಿರಿ’ ಎಂದು. ಹಾಗೆಯೇ ಸಿದ್ದರಾಮಯ್ಯ ಕೂಡಾ ಕುರುಬ ಹಿತಾಸಕ್ತಿಗಳಿಗೆ ಬುದ್ದಿಹೇಳಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ.

ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಜಾತಿ ಮೀರಿದ ನಾಯಕರು ಎಂದು ರಾಜ್ಯಕ್ಕೆ ತೋರಬೇಕಾದ ಸಂದರ್ಬ ಇದು. ಸಿಎಂ ಹುದ್ದೆಗಾಗಿ ಅವರ ನಡುವಿನ ಸ್ಪರ್ದೆ ಒಂದು ಸಾಮಾಜಿಕ ಸಂಕ್ಷೋಬೆಯಾಗಲಿ, ಜಾತಿ ಸಂಗರ್ಶವಾಗಲಿ ಎಂದು ಕಾಯುತ್ತಾ ಅದಕ್ಕಾಗಿ ಕುತಂತ್ರಗಳನ್ಜು ಮಾಡುತ್ತಿರುವುದು ಸಂಗಪರಿವಾರ. ಬಿಜೆಪೀಪಿಗಳಾಗಿರುವ ಮೀಡಿಯಾಗಳು ಇದನ್ನೇ ಬಯಸುತ್ತಿವೆ. ಇಶ್ಟು ದಿನ ಪ್ರಬುದ್ದತೆ ತೋರಿದ ನಾಯಕರು ಈಗ ಈ ಆರೆಸ್ಸೆಸ್ ಸಂಗಪರಿವಾರದ ಹುನ್ನಾರಕ್ಕೆ ಬಲಿಯಾಗಬೇಕೆ?

ಸಿ ಎಂ ಯಾರಾಗಬೇಕೆಂಬುದನ್ನು ವಾಸ್ತವವಾಗಿ ಇಬ್ಬರೇ ತೀರ್ಮಾನ ಮಾಡಬಹುದಿತ್ತು. ಇಬ್ಬರಿಗೂ ಒಪ್ಪಿಗೆಯಾಗುವ ಒಂದು ಸೂತ್ರವನ್ನು ಇಬ್ಬರೂ ತೆರೆದ ಮನಸಿನಿಂದ ಒಪ್ಪಿಕೊಳ್ಳಬಹುದಿತ್ತು. ಯಾರೇ ಸಿಎಂ ಆದರೂ ಮತ್ತೊಬ್ಬರು ಬಲವಾಗಿ ಬೆಂಬಲಿಸುವ ಬದ್ದತೆ ತೋರಬಹುದಿತ್ತು. ಆದರೆ ಈಗ ಶಾಸಕರ ಬೆಂಬಲ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ಹಲವು ತರದ ಮೇಲಾಟಗಳಿಗೆ ಕಾರಣವಾಗಿದೆ. CLP ಯಲ್ಲೇ ತೀರ್ಮಾನ ಆಗಬೇಕು ಎಂದು ಸಿದ್ದರಾಮಯ್ಯ ಅವರೂ ಹೈಕಮಾಂಡ್ ತೀರ್ಮಾನಿಸಲಿ ಎಂದು ಡಿಕೆಶಿಯೂ ಹಟ ಹಿಡಿದಿದ್ದೇ ಅಸಂಬದ್ದ ಅನಿಸುತ್ತದೆ. ಇಬ್ಬರೂ 50-50 ಅದಿಕಾರದ ಚುಕ್ಕಾಣಿ ಹಿಡಿದು ಯಾರು ಮೊದಲು ಸಿಎಂ ಆಗಬೇಕೆಂದು ತೀರ್ಮಾನಿಸಿಕೊಳ್ಳುವುದು ಸೂಕ್ತ. ಇದರ ಸಾದಕ ಬಾದಕಗಳನ್ನು ಪರಿಗಣಿಸಬೇಕು.

ಯಾರೇ ಮೊದಲು ಸಿಎಂ ಆದರೂ ಆರೆಸ್ಸೆಸ್-ಬಿಜೆಪಿಗಳು ಮಾಡುವ ದುರಾಕ್ರಮಣ ಬಿನ್ನವಾಗಿರುವುದಿಲ್ಲ. ಡಿಕೆಶಿ ಸಿಎಂ ಆದರೆ ಸಿಬಿಐ ಬಳಸಿಕೊಂಡು ಇಡೀ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಅದರ ಪ್ರಯತ್ನ ನಿಚ್ಚಳವಾಗಿದೆ. ಕಾಂಗ್ರೆಸ್ ಮೇಲೆ 25ಕ್ಕೂ ಹೆಚ್ಚು ಪ್ರಕರಣ ದಾಕಲಿಸಿದ್ದ ಡಿಐಜಿ ಪ್ರವೀಣ್ ಸೂದ್ ರನ್ನೇ ಸಿಬಿಐ ನಿರ್ದೇಶಕರಾಗಿ ನರೇಂದ್ರ ಮೋದಿ‌ ನೆನ್ನೆಯಶ್ಟೆ ನೇಮಕ ಮಾಡಿದ್ದಾರೆ. ಒಟ್ಟಿನಲ್ಲಿ ಮುಂದಿನ ಸರ್ಕಾರದ ಮೇಲೆ ಒಂದಲ್ಲಾ ಒಂದು ಕಳಂಕ ಹೊರಿಸಿ ಜನರ ವಿಶ್ವಾಸ ಕೆಡಿಸುವುದು ಈ ಆರೆಸ್ಸೆಸ್-ಬಿಜೆಪಿ ಅಜೆಂಡಾ. ಇನ್ನು ಸಿದ್ದರಾಮಯ್ಯ ಸಿಎಂ ಆದರೆ ಅವರ ಕ್ರಿಮಿನಲ್ ಗಳಿಗೂ ಉದಾರತೆ ತೋರುವ ಅತಿಪ್ರಜಾತಂತ್ರದ ನೀತಿಯನ್ನು ದುರ್ಬಳಕೆ ಮಾಡಿಕೊಂಡು ಅವರ ಮೇಲೆ ವಿಷ ಕಾರಲು ಈಗಲೇ ಆರೆಸ್ಸೆಸ್ ಬಿಜೆಪಿ ಐಟಿ ಸೆಲ್ ನ ಹೈನಾಗಳು ಸರ್ವಸನ್ನದ್ದರಾಗಿವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳ ಮೇಲೆ ಈಗಾಗಲೇ ದಾಳಿ ಶುರುವಾಗಿದೆ. ಜೊತೆಗೆ ಸಿದ್ದರಾಮಯ್ಯ = ಮುಸ್ಲಿಂ = ಹಿಂದುವಿರೋದಿ ಎಂಬ ಎಂದಿನ ಸಮೀಕರಣವನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಅಜೆಂಡಾ ಹೇಗೂ ಇದೆ. ಇದಕ್ಕೆ ಕಾನೂನು ಸುವ್ಯವಸ್ತೆ ಕಟಿಣ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಸಿದ್ದರಾಮಯ್ಯ ಇದನ್ನು ಮಾಡುತ್ತಾರಾ ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಹಿಂದಿನ ಅವದಿಯಲ್ಲಿ ಈ ವಿಶಯದಲ್ಲಿ ಅವರು ಸೋತಿದ್ದರು.‌

ಒಟ್ಟಿನಲ್ಲಿ ಮೊದಲು ಯಾರು ಸಿಎಂ ಆಗುತ್ತಾರೆ ಎಂಬುದಕ್ಕಿಂತ ಯಾರೇ ಸಿಎಂ ಆದರೂ ಮತ್ತೊಬ್ಬರು ಹೇಗೆ ನೆರವು ನೀಡುತ್ತಾರೆ, ಆ ಮೂಲಕ ತಮ್ಮ ಪಕ್ಷದ ಒಗ್ಗಟ್ಟನ್ನು ಕಾಪಾಡುತ್ತಾರೆ ಎಂಬುದೇ ಮುಂದಿನ ಸರ್ಕಾರದ ಯಶಸ್ಸಿನಲ್ಲಿ ನಿರ್ಣಾಯಕವಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!