Friday, September 20, 2024

ಪ್ರಾಯೋಗಿಕ ಆವೃತ್ತಿ

ಸಪ್ತ ಸಹೋದರಿಯರು ಬೇಸರಗೊಂಡಿದ್ದಾರೆ, ಸ್ವಲ್ಪ ಸಮಾಧಾನ ಮಾಡಿ ಪ್ಲೀಸ್….

✍️ ವಿವೇಕಾನಂದ ಹೆಚ್.ಕೆ

ಭಾರತದ ಪೂರ್ವ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂ ಎಂಬ ಸಹೋದರ ಎಲ್ಲರೂ ಆಗಾಗ ಜ್ವಾಲಾಮುಖಿಯಾಗುತ್ತಾ, ಕೆಲವೊಮ್ಮೆ ದುಃಖತಪ್ತರಾಗಿ‌ ರೋಧಿಸುತ್ತಾ‌ ಅಸಹನೆಯ ಭಾವದಲ್ಲೇ ಇರುತ್ತಾರೆ.

ಅನೇಕ ಬುಡಕಟ್ಟುಗಳ ಗಿರಿಜನ ಸಮುದಾಯಗಳ, ಮನಮೋಹಕ ಪ್ರಾಕೃತಿಕ ಸೌಂದರ್ಯದ, ಅತ್ಯಂತ ಶ್ರೀಮಂತ ಕಲೆ ಸಂಸ್ಕೃತಿಗಳ ಸುಂದರ ರಾಜ್ಯಗಳು ಈ ಸಪ್ತ ಸೋದರಿಯರು. ಆದರೆ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದ ಇತರ ಭಾಗಗಳಿಗೆ ಹೋಲಿಸಿದಾಗ ಹೆಚ್ಚು ಅತೃಪ್ತ ಮತ್ತು ಹಿಂಸಾತ್ಮಕ ವಾತಾವರಣದಲ್ಲಿ ಈ ಪ್ರದೇಶಗಳು ನಲುಗುತ್ತಿವೆ.

ಅನೇಕ ಬುಡಕಟ್ಟು ಜನಾಂಗದವರ ಶಸ್ತ್ರಾಸ್ತ್ರ ಹೋರಾಟಗಳು, ಮತಾಂತರಗಳು, ಪ್ರತ್ಯೇಕತಾ ಚಳುವಳಿಗಳು, ವಲಸೆಗಾರರ ಸಮಸ್ಯೆಗಳು, ಅಕ್ರಮ ನುಸುಳುವಿಕೆ, ಸೈನ್ಯಕ್ಕೆ ನೀಡಿರುವ ವಿಶೇಷ ಪರಮಾಧಿಕಾರದ ಕಾರಣದಿಂದಾಗಿ ಆಗುತ್ತಿರುವ ಹತ್ಯೆಗಳು, ಅದರಿಂದಾಗಿ ಕಾಡುತ್ತಿರುವ ಅಭದ್ರತೆ, ರಾಜಕೀಯ ಅಸ್ಥಿರತೆಗಳು ಈ ಪ್ರದೇಶಗಳು ಸದಾ ಕೆಂಡದ ಕುಲುಮೆಯಲ್ಲಿ ಇರುವಂತೆ ಮಾಡಿವೆ.

ಶರ್ಮಿಳಾ ಇರೋಮ್ ಎಂಬ ಆ ಭಾಗದ ಹೆಣ್ಣು ಮಗಳು ಕೇಂದ್ರ ಸೈನ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಲು ಸತತ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ ಹೋರಾಟದ ನೆಲ ಈ ಪೂರ್ವಾಂಚಲ ಪ್ರದೇಶ.

ಈಗ ಮಣಿಪುರದಲ್ಲಿ ಅಸಮರ್ಪಕ ಮೀಸಲಾತಿ ಕಾನೂನಿನ ವಿರುದ್ಧ ಹಿಂಸೆ ಭುಗಿಲೆದ್ದಿದೆ. ಅದು ಈಗಲೂ ವ್ಯಾಪಕವಾಗಿ ಮುಂದುವರೆದಿದೆ ಮತ್ತು ಸೈನ್ಯದ ನಿಯಂತ್ರಣಕ್ಕೂ ಸಿಗುತ್ತಿಲ್ಲ. ನೂರಾರು ಹತ್ಯೆಗಳು ಆಗಿವೆ. ಇದು‌ ಮೇಲ್ನೋಟದ ಕಾರಣ ಮಾತ್ರ. ಪ್ರತ್ಯೇಕ ರಾಜ್ಯ, ಸ್ವಾಯುತ್ತದೆ, ಸೈನಿಕ ದೌರ್ಜನ್ಯ, ಕೇಂದ್ರದ ನಿರ್ಲಕ್ಷ್ಯ ಮುಂತಾದ ಅನೇಕ ಕಾರಣಗಳು ಬಹಳ ಹಿಂದಿನಿಂದಲೂ ಮಡುಗಟ್ಟಿದ ಆಕ್ರೋಶ ಆಗಾಗ ಈ ರೀತಿಯಲ್ಲಿ ಪ್ರಕಟವಾಗುತ್ತದೆ.

ಅಭಿವೃದ್ಧಿ ಎಂದರೆ ಕೇವಲ ಕೆಲವೇ ಭಾಗಕ್ಕೆ ಸೀಮಿತವಾಗಿರಬಾರದು. ಜನಸಂಖ್ಯೆ ಕಡಿಮೆ ಇರಬಹುದು. ಆದರೆ ಪೂರ್ವಾಂಚಲ ರಾಜ್ಯಗಳ ನಿರ್ಲಕ್ಷ್ಯ ಅಥವಾ ಅವರನ್ನು ರಾಜಕೀಯ ಕಾರಣಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುವ ರಾಜನೀತಿ ಒಳ್ಳೆಯದಲ್ಲ.

ಈಗಲೂ ‌ಈ ರಾಜ್ಯಗಳಿಂದ ಭಾರತದ ವಿವಿಧ ರಾಜ್ಯಗಳಿಗೆ ವಲಸೆ ನಿರಂತರವಾಗಿ ನಡೆಯುತ್ತಿದೆ. ಬೆಂಗಳೂರಿನ ಬಹುತೇಕ ಮಸಾಜ್ ಮತ್ತು ಬ್ಯೂಟಿ ಪಾರ್ಲರ್, ಹೋಟೆಲ್,
ಸೆಕ್ಯುರಿಟಿ ಮುಂತಾದ ಕೆಲಸಗಳಲ್ಲಿ ಪೂರ್ವಾಂಚಲದ ಅನೇಕ ಯುವಕ ಯುವತಿಯರನ್ನು ಕಾಣಬಹುದು. ಒಂದು ಪ್ರದೇಶದಿಂದ ಇಷ್ಟು ದೊಡ್ಡ ಪ್ರಮಾಣದ ವಲಸೆ ನಡೆಯುತ್ತಿದೆ ಎಂದರೆ ಆ ಪ್ರದೇಶ ನೆಮ್ಮದಿಯಾಗಿ ಇಲ್ಲ ಎಂದೇ ಅರ್ಥ. ಆ ಭಾಗದ ಆಡಳಿತ ಕುಸಿದಿದೆ ಎಂದೂ ಭಾವಿಸಬಹುದು.

ಕೇವಲ ಚುನಾವಣಾ ರಾಜಕೀಯ, ಅಧಿಕಾರದಾಹ, ಆಧುನಿಕ ಅಭಿವೃದ್ಧಿ
ಈ ವಿಷಯಗಳನ್ನೇ ಮುಖ್ಯವಾಗಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಿದರೆ ದೇಶದ ಪ್ರಗತಿ ಸಾಧ್ಯವಿಲ್ಲ. ಇದೊಂದು ವೈವಿಧ್ಯಮಯ ದೇಶ – ವಿಶಾಲವಾದ ದೇಶ. ಅನೇಕ ಸಂಸ್ಕೃತಿಗಳ ತವರೂರು.
ಅದನ್ನು ಸಂಪೂರ್ಣ ಅರ್ಥಮಾಡಿಕೊಂಡು ಆಯಾ ಪ್ರದೇಶಗಳ ಜನಜೀವನಕ್ಕೆ ಯಾವುದೇ ತೊಂದರೆಯಾಗದಂತೆ ಅವರ ಸ್ವಾಯತ್ತ ಸ್ವಾತಂತ್ರ್ಯ ರಕ್ಷಿಸಿ ಆಡಳಿತ ನಡೆಸಬೇಕು. ಕೇವಲ ರಾಜಕೀಯ ಉದ್ದೇಶದಿಂದ ಯೋಜನೆಗಳನ್ನು ರೂಪಿಸಿದರೆ ಈ ರೀತಿಯ ಹಿಂಸೆಗಳು ಹೆಚ್ಚಾಗುತ್ತದೆ.

ಒಮ್ಮೆ ಅಸಮಾಧಾನ ಮತ್ತು ಹಿಂಸೆ ಹೆಚ್ಚಾದರೆ ಅದರ ಪ್ರಭಾವ ಅನೇಕ ವರ್ಷಗಳವರೆಗೂ ಇರುತ್ತದೆ ಮತ್ತು ಇತರ ಪ್ರದೇಶಗಳಿಗೂ ಹಬ್ಬುತ್ತದೆ. ಆದ್ದರಿಂದ ದಯವಿಟ್ಟು ಆಡಳಿತಗಾರರೇ ನಮ್ಮ ಪ್ರೀತಿಯ ಸಪ್ತ ಸಹೋದರಿಯರನ್ನು , ಅಲ್ಲಿನ ಮೂಲ ಸಂಸ್ಕೃತಿಯನ್ನು ಯಥಾವತ್ತಾಗಿ ಕಾಪಾಡಿ. ಅದರ ಬಗ್ಗೆ ಆಸಕ್ತಿ ವಹಿಸಿ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸಿ. ಪ್ಲೀಸ್…. ಪ್ಲೀಸ್…….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!