ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ 50 ಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಮಕ್ಕಳ ಲಾಲನೆ ಪಾಲನೆಗೂ ಹೆಚ್ಚು ಒತ್ತು ನೀಡಬೇಕಾಗಿರುವುದರಿಂದ ಶಿಶು ಪಾಲನ ಕೇಂದ್ರ ತೆರೆಯುವಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಹೆಚ್ ಎನ್ ಗೋಪಾಲಕೃಷ್ಣ ರವರು ತಿಳಿಸಿದರು.
ಮಂಡ್ಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶಿಶು ಪಾಲನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ ಮಹಿಳೆಯರಿಗೆ ಆರು ತಿಂಗಳ ಮಾತೃತ್ವ ರಜೆ ಸಿಗುತ್ತದೆ ತದನಂತರ ಒಂದು ವರ್ಷದಿಂದ ಒಂದುವರೆ ವರ್ಷದವರೆಗೆ ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ತಾಯಂದಿರ ಮೇಲಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶಿಶು ಪಾಲನೆ ಕೇಂದ್ರ ತೆರೆಯುವುದರಿಂದ ಹೆಣ್ಣು ಮಕ್ಕಳಿಗೆ ಉಪಯುಕ್ತವಾಗುತ್ತದೆ ಎಂದರು.

ಸರ್ಕಾರ ಮತ್ತು ಮಹಿಳಾ ಆಯೋಗದ ನಿರ್ದೇಶನದಂತೆ ಸ್ಥಳಾವಕಾಶ ಇದ್ದರೆ ಶಿಶು ಪಾಲನೆ ಕೇಂದ್ರದ ವ್ಯವಸ್ಥೆ ಮಾಡಬಹುದಾಗಿದೆ, ಸರ್ಕಾರಕ್ಕೆ ಯಾವುದೇ ವೆಚ್ಚ ಬಾರದಂತೆ ದಾನಿಗಳಿಂದ ಹಾಗೂ ಬ್ಯಾಂಕ್ ಆಫ್ ಬರೋಡ ಸಿ ಎಸ್ ಆರ್ ನೆರವಿನಿಂದ ಈ ಶಿಶು ಪಾಲನ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ರೈತರಿಗೆ ಮತ್ತು ಬಡ ಜನರಿಗೆ ಕಂದಾಯ ಇಲಾಖೆ ಹಲವಾರು ಯೋಜನೆಗಳನ್ನು ಒದಗಿಸುವ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತದೆ. ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕೆಲಸ ಸಮನ್ವಯವಾಗಿ ನಿರ್ವಹಿಸಬೇಕು ಎಂದರು.
ರೈತರು ಮತ್ತು ಸಾರ್ವಜನಿಕರಿಗೆ ತಹಶೀಲ್ದಾರ್ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಕೃಷಿ ಹಾಗೂ ಕೃಷಿ ಭೂಮಿಗೆ ಸಂಬಂಧಿಸಿದ ಆನೇಕ ಕೆಲಸಗಳಿರುತ್ತದೆ. ಕೆಲಸಗಳಿಗೆ ಸಂಬಂಧಿಸಿದಂತೆ ಯಾವ ಯಾವ ದಾಖಲೆಗಳು ಬೇಕು, ಖಾತೆ, ಆರ್ಟಿಸಿ, ಎಸಿ ಕೋರ್ಟ್ ನಲ್ಲಿ ಅಫೀಲು ಹಾಕಲು ಬೇಕಿರುವ ದಾಖಲೆ ಕುರಿತು ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಕಂದಾಯ ಸಲಹೆ -1 ಖಾತೆದಾರರ ಕೈಪಿಡಿಯನ್ನು ಹೊರತರಲಾಗಿದ್ದು. ಜಿಲ್ಲಾಧಿಕಾರಿಗಳು ಪುಸ್ತಕವನ್ನು ಬಿಡುಗಡೆ ಮಾಡಿದರು.
ಉಪವಿಭಾಗಾಧಿಕಾರಿ ಕೀರ್ತನ ಹೆಚ್. ಎಸ್ ಮಾತನಾಡಿ, ಮಂಡ್ಯ ಎಸಿ ನ್ಯಾಯಾಲಯದಲ್ಲಿ 5,000ಕ್ಕೂ ಹೆಚ್ಚು ಪ್ರಕರಣಗಳಿವೆ ಪರಿಶೀಲಿಸಿದಾಗ ಕೆಲವು ಪ್ರಕರಣಗಳನ್ನು ತಾಲೂಕು ಮಟ್ಟದಲ್ಲೇ ಬಗೆಹರಿಸಿಕೊಳ್ಳಬಹುದು. ಮಾಹಿತಿಯ ಕೊರತೆಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಜನರು ಅಲೆದಾಟ ಮಾಡಿ, ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ.
ಇದರಿಂದ ಮಧ್ಯಮ ವರ್ಗದ ರೈತರಿಗೆ ತೊಂದರೆ ಆಗುತ್ತದೆ. ಅದನ್ನು ತಡೆಯಲು ಕಂದಾಯ ಸಲಹೆ ಭಾಗ-1 ಖಾತೆದಾರರ ಕೈಪಿಡಿ ಎಂಬ ಒಂದು ಸಣ್ಣ ಹೆಜ್ಜೆ ಇಡಲಾಗಿದೆ ಇದರಿಂದ ರೈತರಿಗೆ ಬೇಕಾಗುವ ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ.
ಈ ಪುಸ್ತಕ ತಹಶೀಲ್ದಾರ್ ಕಚೇರಿಗಳಲ್ಲಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿರುತ್ತದೆ ಇದರ ಸದುಪಯೋಗ ಮಾಡಿಕೊಳ್ಳುವುದು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್, ಪಾಂಡವಪುರ ಉಪವಿಭಾಗಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಮಂಡ್ಯ ತಹಶೀಲ್ದಾರ್ ವಿಜಯ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.




