-
EWS ಮೀಸಲಾತಿ, ಅದಕ್ಕಾಗಿ ಮೀಸಲಾತಿ ಶೇ.50ರ ಮಿತಿ ಮೀರಿರುವುದನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ
- ಬಹುಹುಮತದ ತೀರ್ಪಿನಲ್ಲಿ(3-2); ಕೆಳಜಾತಿ ಬಡವರಿಗೆ EWS ಮೀಸಲಾತಿಯಲ್ಲಿ ಅವಕಾಶವಿಲ್ಲದಿರುವುದನ್ನೂ ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ
ಸಾಮಾಜಿಕ ನ್ಯಾಯದ ಆಶಯಗಳನ್ನು ಗಾಳಿಗೆ ತೂರಿ ಮೇಲ್ಜಾತಿ ಬಡವರಿಗೆ ಮಾತ್ರ ಆರ್ಥಿಕ ಆಧಾರದ ಮೀಸಲಾತಿಯನ್ನು ಕಲ್ಪಿಸಲು ಮೋದಿ ಸರ್ಕಾರ (ಇತರ ಎಲ್ಲಾ ಪಕ್ಷಗಳ ಬೆಂಬಲದೊಂದಿಗೆ) 103 ನೇ ಸಂವಿಧಾನ ತಿದ್ದುಪಡಿಯ ಮೂಲಕ ಜಾರಿಗೆ ತಂದಿದ್ದ ಸಾಮಾಜಿಕ ನ್ಯಾಯ ವಿರೋಧಿ EWS ಮೀಸಲಾತಿ ತಿದ್ದುಪಡಿಯು ಸಂವಿಧಾನದ ಉಲ್ಲಂಘನೆಯಲ್ಲವೆಂದು, EWS ಮೀಸಲಾತಿ ಸಂವಿಧಾನ ಬದ್ಧವೆಂದು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಮಾನವಿತ್ತಿದೆ. ಅದಕ್ಕಾಗಿ ಶೇ. 50 ರ ಮೀಸಲಾತಿ ಮೇಲ್ಮಿತಿಯನ್ನು ಮೀರಿದ್ದು, ಸಂವಿಧಾನ ಬಾಹಿರವಲ್ಲವೆಂದು ಆದೇಶ ನೀಡಿದೆ.
ಇದರ ಜೊತೆಗೆ ಮುಖ್ಯ ನ್ಯಾಯಾಧೀಶ ಯು.ಯು ಲಲಿತ್ ಮತ್ತು ಜಸ್ಟಿಸ್ ರವೀಂದ್ರ ಭಟ್ ಅವರನ್ನು ಹೊರತು ಪಡಿಸಿ ಮಿಕ್ಕ ಮೂವರು ನ್ಯಾಯಾಧೀಶರು ಆರ್ಥಿಕ ಆಧಾರದ ಮೀಸಲಾತಿಯಲ್ಲಿ ದಲಿತ ಹಾಗೂ ಹಿಂದುಳಿದ ಜಾತಿಗಳ ಬಡವರನ್ನು ಪರಿಗಣಿಸದಿರುವುದು ತಪ್ಪಲ್ಲವೆಂದು ತೀರ್ಮಾನಿಸಿ, ಆರ್ಥಿಕ ಮೀಸಲಾತಿ ಕೋಟಾವು ಕೇವಲ ಮೇಲ್ಜಾತಿ ಬಡವರಿಗೆ ಮಾತ್ರ ಸೀಮಿತವಾಗಿರುವುದನ್ನು ಎತ್ತಿ ಹಿಡಿದಿದ್ದಾರೆ.
ಹೀಗಾಗಿ ಬಹುಮತದ ಆದೇಶ (3-2) EWS ಮೀಸಲಾತಿ ಕೇವಲ ಮೇಲ್ಜಾತಿ ಬಡವರಿಗೆ ಮಾತ್ರ ಸೀಮಿತವಾಗಿರುವುದನ್ನು ಎತ್ತಿಹಿಡಿದಂತಾಗಿದೆ, ಇದೇ ಕಾನೂನಾಗಲಿದೆ. ಇದರ ಜೊತೆಗೆ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ತ್ರಿವೇದಿ ಅವರು 75 ವರ್ಷಗಳು ಕಳೆದರೂ ಮೀಸಲಾತಿ ವ್ಯವಸ್ಥೆ ಮುಂದುವರೆದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಸಾಮಾಜಿಕ ನ್ಯಾಯದ ಹೋರಾಟ ಮುಂದಿನ ಹೆಜ್ಜೆಯನ್ನು ಶೋಷಿತ ಜನತೆ ತೀರ್ಮಾನಿಸಬೇಕಿದೆ.




