ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ನಟ ಶರತ್ ಬಾಬು ಅವರು ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ಶರತ್ ಬಾಬು ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆಗ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಚೇತರಿಕೆ ಕಾಣುತ್ತಲೇ ಹೈದರಾಬಾದ್‌ನ ʼಎಐಜಿʼ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ 71 ವರ್ಷದ ಹಿರಿಯ ನಟ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
1973ರಲ್ಲಿ ತೆರೆಕಂಡ ತೆಲುಗಿನ ʼರಾಮ ರಾಜ್ಯಂʼ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಶರತ್ ಬಾಬು, 4 ದಶಕಗಳ ಸಿನಿ ಪಯಣದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ತೆಲುಗು ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲೂ ಅವರು ಗುರುತಿಸಿಕೊಂಡಿದ್ದರು. ʼಶಕ್ತಿʼ, ʼರಣಚಂಡಿʼ, ʼಕಂಪನʼ, ʼಗಾಯʼ, ʼತುಳಸಿ ದಳʼ, ʼಹೃದಯ-ಹೃದಯʼ, ʼನೀಲʼ, ʼನಮ್ಮೆಜಮಾನ್ರುʼ, ʼಅಮೃತ ವರ್ಷಿಣಿʼ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡದಲ್ಲೂ ಭಾರೀ ಜನಪ್ರಿಯತೆ ಗಳಿಸಿದ್ದರು.