ಕನ್ನಡ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸುವ ಉದ್ದೇಶದಿಂದ ‘ಬನ್ನಿ ಮಕ್ಕಳೇ ಸರ್ಕಾರಿ ಶಾಲೆಗೆ ಸೇರಿ, ಸರ್ಕಾರಿ ಶಾಲೆಯನ್ನು ಉಳಿಸೋಣ’ ಎಂಬ ಬೃಹತ್ ಬೈಕ್ ಜಾಥಾ ಕಾರ್ಯಕ್ರಮವನ್ನು ಕನ್ನಡ ಸೇನೆ ಕಾರ್ಯಕರ್ತರು ಮದ್ದೂರಿನಲ್ಲಿ ನಡೆಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಕೆ.ಎಂ ದೊಡ್ಡಿಯಿಂದ ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಉಪಪಾರದೊಡ್ಡಿ, ನಗರಕೆರೆ, ಮಾರ್ಗವಾಗಿ ಮದ್ದೂರಿನವರೆಗೆ ಬೃಹತ್ ಬೈಕ್ ಜಾಥ ಮದ್ದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ತಲುಪಿತು.

ಈ ಸಂದರ್ಭದಲ್ಲಿ ಹೆಚ್.ಸಿ.ಮಂಜುನಾಥ್ ಮಾತನಾಡಿ, ಕನ್ನಡ ಭಾಷೆಗೆ 3000 ವರ್ಷದ ಇತಿಹಾಸವಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ, ನಾಡಿನ ಶ್ರೇಷ್ಠ ಸಾಹಿತಿಗಳು ಎಂಟು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಒಬ್ಬ ರೈತ ಮಕ್ಕಳಿಗೆ ಶಿಕ್ಷಣ ಕೊಡಲು ಹಗಲು ಇರುಳು ದುಡಿಯುವ ಸ್ಥಿತಿ ಬಂದೊದಗಿದೆ ಎಂದರು.
ನಮ್ಮ ರಾಜ್ಯದಲ್ಲಿ ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದ ಹಾಗೆ ಶಿಕ್ಷಣವನ್ನು ನೀಡುತ್ತಿರುವ ಎಷ್ಟೋ ಮಾದರಿ ಶಾಲೆಗಳನ್ನ ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕನ್ನಡವನ್ನ ಶ್ರೀಮಂತಗೊಳಿಸಲು ರಾಜ್ಯ ಸರ್ಕಾರ ಸಮರ್ಪಕವಾಗಿ ನೀಡುತ್ತಿರುವ ಸರ್ಕಾರಿ ಶಾಲೆಯ ಶಿಕ್ಷಣವನ್ನು ರಾಜ್ಯದ ಎಲ್ಲಾ ಮಕ್ಕಳಿಗೆ ತಲುಪಿಸುವ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ನೂತನ ಸರ್ಕಾರವು ರಾಜ್ಯದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಷ್ಟು ಶಾಲೆಗಳಿಗೆ ಮೂಲಭೂತ ಸೌಕರ್ಯ ಇಲ್ಲದಂತಾಗಿದೆ. ಕಟ್ಟಡ ಸಹ ಬಹಳ ದುರಸ್ತಿಯಲ್ಲಿವೆ. ಇತ್ತ ಶಿಕ್ಷಣ ಮಂತ್ರಿಗಳು ಸಮರ್ಥವಾಗಿ ಕನ್ನಡ ಶಾಲೆ ಅಭಿವೃದ್ಧಿಗಳನ್ನು ಮಾಡಬೇಕು ಎಂದು ಆಗ್ರಹಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆಯ ರಾಮಯ್ಯ, ನಂದೀಶ್, ಅಭಿಷೇಕ್, ಮಹೇಶ್, ಅಂದಾನಿ ಹಾಗೂ ನಾಗೇಂದ್ರಸ್ವಾಮಿ ಸೇರಿದಂತೆ ಮತ್ತಿತರರಿದ್ದರು.




