Saturday, May 18, 2024

ಪ್ರಾಯೋಗಿಕ ಆವೃತ್ತಿ

ಗದಗ : ತಾಯಿ ಮೇಲಿನ ಅಸೂಯೆಗಾಗಿ ಮಗನನ್ನು ಕೊಂದ ಶಿಕ್ಷಕ

ಶಿಕ್ಷಕಿ ಮೇಲಿನ ಅಸೂಯೆ ಕಾರಣದಿಂದಾಗಿ 4ನೇ ತರಗತಿ ವಿದ್ಯಾರ್ಥಿಯನ್ನು ಅತಿಥಿ ಶಿಕ್ಷಕ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗದಗ ಜಿಲ್ಲೆಯ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ಆರೋಪಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಕುರಿ 10 ವರ್ಷದ ವಿದ್ಯಾರ್ಥಿ ಭರತ್ ಬಾರಿಕೇರಿ ಮತ್ತು ಆತನ ತಾಯಿ, ಸಹ ಶಿಕ್ಷಕಿ ಗೀತಾ ಬಾರಿಕೇರಿ ಮೇಲೆ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಆರೋಪಿಯನ್ನು ಅಂದೇ ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ಒಳಪಡಿಸಿದ್ದಾರೆ. 

ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, “ಆರೋಪಿ ಕುರಿ ಅವರು ಗೀತಾ ಅವರೊಂದಿಗೆ ನಿಕಟ ಸ್ನೇಹ ಹೊಂದಿದ್ದರು. ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಗೀತಾ ಅವರು ಮುಖ್ಯೋಪಾಧ್ಯಾಯ ಸಂಗನಗೌಡ ಪಾಟೀಲ್ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸಿದ್ದರೆಂದು ಶಂಕಿಸಿದ್ದ ಆರೋಪಿ, ಅಸೂಯೆಯಿಂದ ದಾಳಿ ನಡೆಸಿದ್ದಾನೆ” ಎಂದು ತಿಳಿಸಿದ್ದಾರೆ. 

“ಶಾಲಾ ಪ್ರವಾಸದಿಂದ ಹಿಂತಿರುಗಿದ ನಂತರ ಗೀತಾರೊಂದಿಗೆ ಸ್ನೇಹ ಹೊಂದಿರುವವರ ಮೇಲೆ ದಾಳಿ ಮಾಡಬೇಕೆಂದು ಕುರಿ ಯೋಜಿಸಿದ್ದ. ಈ ಹಿನ್ನೆಲೆ ಶಾಲೆಯಲ್ಲಿ ದಾಂಧಲೆ ನಡೆಸಿರುವ ಆತ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿದ್ದಾನೆ. ಗೀತಾ ಮತ್ತು ಅವರ ಪುತ್ರ ಭರತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಲ್ಲಿ ಭರತ್ ಮೃತಪಟ್ಟಿದ್ದಾನೆ. ಪ್ರಕರಣದ ವಿಚಾರಣೆಗಾಗಿ ಗೀತಾ ಮತ್ತು ಪಾಟೀಲ್ ನಡುವಿನ ಚಾಟ್ ಮತ್ತು ಫೋನ್ ಕರೆಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಅಲ್ಲದೆ, ಗೀತಾ ಮತ್ತು ಆರೋಪಿ ನಡುವಿನ ಸಂಭಾಷಣೆಗಳನ್ನೂ ವಶಕ್ಕೆ ಪಡೆದಿದ್ದೇವೆ,” ಎಂದು ದೇವರಾಜು ಹೇಳಿದ್ದಾರೆ.

ಕುರಿ ಮತ್ತು ಗೀತಾ ಅವರು ಇತ್ತೀಚೆಗೆ ಜಗಳವಾಡಿಕೊಂಡಿದ್ದರು. ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದ್ದರು ಎಂದು ಹೆಸರು ಹೇಳಲಿಚ್ಚಿಸಿದ ಶಿಕ್ಷಕರೊಬ್ಬರು ಹೇಳಿದ್ದಾರೆ.

“ಭರತ್ ಬುದ್ದಿವಂತ ಹಾಗೂ ವಿದ್ಯಾಭ್ಯಾಸದಲ್ಲಿ ನಿಪುಣನಾಗಿದ್ದ. ತಮ್ಮ ಕುಟುಂಬದ ಏಕೈಕ ಆಶಾಕಿರಣವಾಗಿದ್ದ. ಅವನು ಸರ್ಕಾರಿ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೆವು. ಆದರೆ, ಅವನನ್ನೇ ಕಳೆದುಕೊಂಡೆವು” ಎಂದು ಹೇಳುತ್ತಾ ಗೀತಾ ತಾಯಿ ರತ್ನವ್ವ ಕಣ್ಣೀರು ಹಾಕಿದ್ದಾರೆ.

“ಆ ಕ್ರೂರಿ ಶಿಕ್ಷಕ ಅವನನ್ನು ಏಕೆ ಹೊಡೆದನೆಂದು ನಮಗೆ ತಿಳಿದಿಲ್ಲ. ನನ್ನ ಮಗಳೂ ನಮ್ಮೊಂದಿಗೆ ಏನನ್ನೂ ಹಂಚಿಕೊಳ್ಳಲಿಲ್ಲ. ಆರೋಪಿ ಶಿಕ್ಷಕ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆಂದು ನಮಗೆ ತಿಳಿದಿದ್ದರೆ, ನಾವು ಆನನೊಂದಿಗೆ ಮಾತನಾಡಬಹುದಿತ್ತು. ನನ್ನ ಮೊಮ್ಮಗ ಯಾವುದೇ ತಪ್ಪು ಮಾಡಿಲ್ಲ. ಆದರೆ, ಪಾಪಿ ಶಿಕ್ಷಕ ಅವನನ್ನು ಅಮಾನವೀಯವಾಗಿ ಕೊಂದಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯಭೀತರಾಗಿರುವ ಗ್ರಾಮಸ್ಥರು

ಆರೋಪಿ ಶಿಕ್ಷಕ ಬಾಲಕನನ್ನು ಹೊಡೆದು, ಬಾಲಕನ ತಲೆಯನ್ನು ಸಿಮೆಂಟ್ ಕಂಬಕ್ಕೆ ಒಡೆದು, ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದಿದ್ದಾನೆ. ಗೀತಾ ಮೇಲೂ ಸಲಿಕೆಯಿಂದ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರ ಗಾಯಗಳಾಗಿವೆ. ಪ್ರಾಂಶುಪಾಲರ ಮೇಲೂ ಹಲ್ಲೆ ನಡೆಸಿದ್ದಾನೆ.

ಘಟನೆಯಿಂದಾಗಿ ಇಡೀ ಗ್ರಾಮವೇ ಆಘಾತಕ್ಕೊಳಗಾಗಿದೆ. ಸದ್ಯ ಶಾಲೆಗೆ ರಜೆ ಘೋಷಿಸಲಾಗಿದೆ. ಆದರೂ, ಪ್ರಕರಣ ಸಂಬಂಧ ಪೊಲೀಸರು ತಮ್ಮ ಮಕ್ಕಳನ್ನು ಪ್ರಶ್ನಿಸುತ್ತಾರೆ ಎಂಬ ಭಯದಿಂದ ಹಲವಾರು ಪೋಷಕರು, ಕೆಲ ದಿನಗಳವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದಾರೆ. ಶಾಲೆಯ ಸುತ್ತಲಿನ ಪ್ರದೇಶವು ನಿರ್ಜನವಾಗಿ ಕಾಣುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!