ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದಂತೆಯೇ 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ತಲುಪಿಸಲು ವಾರ್ಷಿಕ ₹ 59,000 ಕೋಟಿ ವೆಚ್ಚ ಮಾಡಲು ಉದ್ಧೇಶಿಸಿದೆ, ಇಡೀ ದೇಶದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ನೀಡಿದ ಇತಿಹಾಸ ಕರ್ನಾಟಕಲ್ಲದೇ ಬೇರೆ ಯಾರ ರಾಜ್ಯಕ್ಕೂ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಶನಿವಾರ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ಹೊರಡಿಸಿರುವಂತೆ ಗ್ಯಾರಂಟಿಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೂರು ದಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊನೆಗೆ ಶುಕ್ರವಾರ ಮೂರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ನಮ್ಮ ಜೀವನ ಸಾರ್ಥಕ ಆಗಿದೆ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ವಿಪಕ್ಷಗಳಿಂದ ಜನರನ್ನು ಎತ್ತಿಕಟ್ಟುವ ಕೆಲಸ
ಗ್ಯಾರಂಟಿಗಳನ್ನು ಈಡೇರಿಸುತ್ತಾರೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದ ವಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳದ ನಾಯಕರು ಇಂತಹ ಘೋಷಣೆಯನ್ನು ಊಹಿಸಿರಲಿಲ್ಲ. ನಮ್ಮ ಪಕ್ಷ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಮತ್ತು ಜಾ.ದಳದವರು ಪ್ರಶಂಸೆ ಮಾಡುವುದನ್ನು ಬಿಟ್ಟು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವೇ ಉತ್ತರ ಕೊಡಿ ಎಂದು ಜನತೆ ಕರೆ ನೀಡಿದರು.
5 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಜಾ.ದಳ ಮತ್ತು ಬಿಜೆಪಿಯವರು ಕಾಂಗ್ರೆಸ್ ಜಾರಿಗೆ ತಂದಿದ್ದ ಕೃಷಿ, ಕ್ಷೀರ ಭಾಗ್ಯ ಸೇರಿದಂತೆ ಇಂದಿರಾ ಕ್ಯಾಂಟಿನ್ಗಳು ಹಾಗೂ ಹಲವು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದರು. ಸುಳ್ಳು, ವಂಚನೆ ಮಾಡಿರುವ ಪಕ್ಷಗಳ ಮಧ್ಯೆ ನಮ್ಮನ್ನು ಗೆಲ್ಲಿಸಿರುವ ಜನತೆಗೆ ಕೃತಜ್ಞರಾಗಿರಬೇಕೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೆ ಹತ್ತು ಕೆ.ಜಿ.ಅಕ್ಕಿ
ಮುಂದಿನ ಜುಲೈ ತಿಂಗಳಿನಿಂದ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು. ಜೂ. 11ರಿಂದ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ,200 ಯೂನಿಟ್ವರೆಗೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದರು.
ಆ. 15ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ
ಯೋಜನೆಗಳಲ್ಲ ಬಹುಮುಖ್ಯವಾದ ಗೃಹಲಕ್ಷ್ಮಿ ಯೋಜನೆ ಆ. 15ರಿಂದ ಜಾರಿಗೆ ಬರಲಿದೆ. ಯಾರು ಮನೆಯ ಒಡತಿ ಆಗಿರುತ್ತಾರೋ ಅವರಿಗೆ ತಿಂಗಳಿಗೆ 2ಸಾವಿರ ರೂ. ಬರಲಿದೆ. ಇದಕ್ಕಾಗಿ 15 ರಿಂದ 20 ಸಾವಿರ ಕೋಟಿ ಖರ್ಚಾಗಲಿದೆ ಎಂದು ತಿಳಿಸಿದರು.
ಇಂತಹ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ
2018ರಲ್ಲಿ ಜಿಲ್ಲೆಯಲ್ಲಿ ಪಕ್ಷವು ಸೋಲನುಭವಿಸಿದ್ದನ್ನು ನೋಡಿದರೆ ನಾವ್ಯಾರು ಸಾರ್ವಜನಿಕರ ಮಧ್ಯೆ ಹೋಗಿ ನಿಲ್ಲಲು ಆಗುತ್ತಿರಲಿಲ್ಲ. ಆ ಸೋಲು ಜೀವನದಲ್ಲಿ ಅತ್ಯಂತ ಕೆಟ್ಟ ಕ್ಷಣ. ನಮ್ಮ ನಾಯಕರ ಬಳಿಯೂ ಹೋಗಲು ಹಿಂಜರಿಕೆ ಆಗುತ್ತಿತ್ತು. ನಮ್ಮನ್ನು ಮತ್ತೆ ಗೆಲ್ಲಿಸ್ತೀರಾ ಎಂದು ಕೊಂಡಿರಲಿಲ್ಲ. ಅಜ್ಜಯ್ಯ ಅವರು ನೀನು ಕಣ್ಣೀರು ಹಾಕಬೇಡ, ಜಿಲ್ಲೆಯ ಜನ ಮತ್ತೆ ನಿನ್ನನ್ನು ಗೆಲ್ಲಿಸುತ್ತಾರೆ ಎಂದು ಕಳೆದ 3 ವರ್ಷಗಳ ಹಿಂದೆ ಹೇಳಿದ್ದರು. ಅದರಂತೆ ಅದು ನಿಜವಾಗಿದೆ. ಈ ಬಾರಿ ಏನಾದರೂ ನಮ್ಮನ್ನು ಕೈಬಿಟ್ಟಿದ್ದರೆ ನಾವೆಲ್ಲ ಪಾತಾಳಕ್ಕೆ ಹೋಗುತ್ತಿದ್ದೆವು ಎಂದು ನುಡಿದರು.
ಪಕ್ಷವನ್ನು ಅಧಿಕಾರಕ್ಕೆ ತರಲು ಭಾರತ್ ಜೋಡೋ, ಮೇಕೆದಾಟು, ಪ್ರಜಾಧ್ವನಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದೆವು. ಆದರೂ ಗೆಲುವಿನ ಬಗ್ಗೆ ನಂಬಿಕೆ ಇರಲಿಲ್ಲ. ಚುನಾವಣೆಯಲ್ಲಿ ಈರೀತಿಯ ಫಲಿತಾಂಶ ಕೊಡುತ್ತೀರಿ ಎಂದು ನಂಬಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಮತ್ತು ಜಾ.ದಳದವರು ಗೆದ್ದು ಅಧಿಕಾರ ನಡೆಸಿದರೂ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಯಾವುದೇ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ವಿಶ್ವಾಸ ಘಾತುಕರು ಯಾರು ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಬಿಜೆಪಿ ಮತ್ತು ಜಾ.ದಳದ ನಾಯಕರನ್ನು ಛೇಡಿಸಿದರು.
ವೇದಿಕೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್ಗೌಡ ಗಣಿಗ, ರಮೇಶ್ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಎಸ್. ಆತ್ಮಾನಂದ, ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ದಡದಪುರ ಶಿವಣ್ಣ, ಡಾ. ಎಚ್.ಕೃಷ್ಣ, ಎಂ.ಎಸ್. ಚಿದಂಬರ್, ಅಸಾದುಲ್ಲಾಖಾನ್, ಸಿದ್ದಾರೂಢ ಸತೀಶ್ಗೌಡ, ರುದ್ರಪ್ಪ, ಮನ್ಮುಲ್ ನಿರ್ದೇಶಕ ಯು.ಎಸ್. ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಇತರರು ಉಪಸ್ಥಿತರಿದ್ದರು.




