Thursday, April 25, 2024

ಪ್ರಾಯೋಗಿಕ ಆವೃತ್ತಿ

ದ್ವೇಷ ಮರೆತು, ಜಿಲ್ಲೆಯ ಅಭಿವೃದ್ಧಿ ಮಾಡೋಣ – ಶಾಸಕ ಪಿ.ಎಂ.ನರೇಂದ್ರಸ್ವಾಮಿ

2018ರ ಚುನಾವಣೆಯ ಸೋಲಿನ ನಂತರ ಅಜ್ಞಾತವಾಸ ಮುಗಿಸಿದ್ದೇವೆ. ರೋಷಾವೇಷ, ವೀರಾವೇಷದ ಮಾತುಗಳ ಮೂಲಕ ಏನು ಪ್ರಯೋಜನವಿಲ್ಲ. ಚುನಾವಣೆ ಮುಗಿದಿದ್ದು, ಇನ್ನೆನ್ನಿದ್ದರೂ ಮಂಡ್ಯ ಜಿಲ್ಲೆಯ  ಅಭಿವೃದ್ಧಿ ಕಡೆಗೆ ಗಮನಹರಿಸೋಣ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು.

nudikarnataka.com

ಜಿಲ್ಲೆಯ ರೈತರ ಬದುಕನ್ನು ಬದಲಾಯಿಸಲು ನಾವೆಲ್ಲ ಶ್ರಮಿಸಬೇಕಾಗಿದೆ, ಅವರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಹೊರಗಿನಿಂದ ಕಾಣುವಷ್ಟು ಮಂಡ್ಯ ಜಿಲ್ಲೆಯ ಜನರ ಬದುಕು ಹಸಿರಾಗಿಲ್ಲ. ಐದು ವರ್ಷ ಅಭಿವೃದ್ಧಿ ಕೆಲಸಕ್ಕಷ್ಟೇ ಆದ್ಯತೆ ಕೊಡೋಣ. ಇದಕ್ಕಾಗಿ ಪಕ್ಷಾತೀತವಾಗಿ ಹಾಗೂ ಸಂಘಟನೆಗಳ ಸಲಹೆ ಪಡೆದು ಕೊಳ್ಳುತ್ತೇವೆ. ಜಿಲ್ಲಾ ಕೇಂದ್ರವಾದ ಮಂಡ್ಯ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಇನ್ನು ಒಂದೂವರೆ ವರ್ಷದಲ್ಲಿ ಬದಲಾವಣೆಯಾಗಬೇಕು. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಮನಹರಿಸಬೇಕು ಎಂದರು.

ಕಳೆದ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಮತ್ತೆ ಗೆಲುವು ಕಾಣಲು ಕಾರ್ಯಕರ್ತರ ಬೆವರಿನ ಹನಿಯೇ ಕಾರಣ. ಅವರೆಲ್ಲರ ಶ್ರಮದಿಂದಾಗಿ ಎರಡು ಎಂಎಲ್‌ಸಿ, ವಿಧಾನಸಭಾ ಚುನಾವಣೆ ಗೆಲುವು ಕಾಣುವಂತಾಗಿದೆ. ಇಂದು ಹಲವರು ಹಾರ ಹಾಕಲು ಮುಂದೆ ಬರುತ್ತಾರೆ. ಆದರೆ ಪಕ್ಷಕ್ಕೆ ದುಡಿದವರು ಯಾರೆಂದು ಗೊತ್ತಿದೆ. ಪಕ್ಷಕ್ಕಾಗಿ ನಾನು ಕೊನೆ ಉಸಿರುವವರೆಗೂ ದುಡಿಯುತ್ತೇನೆ. ಈ ಮೂಲಕ ರಾಹುಲ್‌ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವವರೆಗೂ ಶ್ರಮಿಸೋಣ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಸಲ್ಲಿಸಿದ ಮನವಿಗೆ ಸಿಎಂ ಕೂಡಲೇ ಸ್ಪಂದಿಸಿದ್ದಾರೆ. ಅದರಂತೆ ಮೈಷುಗರ್‌ಗೆ 50 ಕೋಟಿ ರೂ ಮಂಜೂರು ಮಾಡಿದ್ದಾರೆ. ಮೂರ‌್ನಾಲ್ಕು ದಿನದಲ್ಲಿ ಹಣ ಬಿಡುಗಡೆಯಾಗಬಹುದು. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ಹಲವು ಬದಲಾವಣೆ ಅನಿವಾರ್ಯವಾಗಿದೆ. ಅದರಂತೆ ಚಲುವರಾಯಸ್ವಾಮಿ ಮುಂದಾಳತ್ವಕ್ಕೆ ಬೆಂಬಲವಾಗಿ ಶಾಸಕರು ನಿಲ್ಲಲಿದ್ದೇವೆ ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದಾಗಿ ನಾನು ಗೆದ್ದಿದ್ದೇನೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮಂಡ್ಯ ದೊಡ್ಡ ಹಳ್ಳಿಯಂತಿದೆ. ಅದನ್ನು ನಗರವನ್ನಾಗಿ ಬದಲಾವಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ 250 ಕೋಟಿ ರೂ ಅನುದಾನ ಕೊಡಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ದಡದಪುರ ಶಿವಣ್ಣ ಮಾತನಾಡಿ, ಹೋರಾಟದ ಬದುಕು ನಡೆಸಿಕೊಂಡು ಬಂದಿರುವ ನರೇಂದ್ರಸ್ವಾಮಿ ಅವರನ್ನು ಸಮಾಜಕಲ್ಯಾಣ ಇಲಾಖೆ ಸಚಿವರನ್ನಾಗಿ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದರು.

ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಎಂಎಲ್‌ಸಿ ಮಧು ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ರವಿ ಭೋಜೇಗೌಡ, ವಿಜಯರಾಮೇಗೌಡ, ಬಿ.ಎಲ್.ದೇವರಾಜು, ಎಂ.ಎಸ್.ಚಿದಂಬರ್, ಡಾ.ಕೃಷ್ಣ, ವಿಜಯ್‌ಕುಮಾರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!