✍️ ಗಿರೀಶ್ ತಾಳಿಕಟ್ಟೆ
ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕೆಂದು ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ’, ’ರಾಜ್ಯದ ಬೊಕ್ಕಸಕ್ಕೆ ಹೊರೆ’ ಅಂತೆಲ್ಲ ಲೇವಡಿ ಮಾಡುತ್ತಿರೋರಿಗೆ ಅರ್ಥಶಾಸ್ತ್ರದ ಪಾಠ ಹೇಳೋದರಲ್ಲಿ ಏನೂ ಉಪಯೋಗ ಇಲ್ಲ ಕಣ್ರಿ. ಯಾಕೆಂದರೆ ಅರ್ಥಶಾಸ್ತ್ರದಂತಹ ಸಂಕೀರ್ಣ ನಾಲೆಡ್ಜ್ ಬ್ರ್ಯಾಂಚ್ ಅನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ದಿಮತ್ತೆ ಅವರದಲ್ಲ. ತುಂಬಾ ಎಲಿಮೆಂಟರಿ ಜನ. ಅವರ ಆ ಎಲಿಮೆಂಟರಿ ನಾಲೆಡ್ಜ್ ಕೂಡಾ ‘ಉರು’ಹೊಡೆದು, ಹಾಗೆ ಉರುಹೊಡೆದದ್ದನ್ನು ಯಥಾವತ್ತು ಆನ್ಸರ್ ಪೇಪರ್ ಮೇಲೆ ದಾಖಲಿಸಿ ಸಂಪಾದಿಸಿಕೊಂಡದ್ದು. ಅವರೆಲ್ಲರ ಪ್ರತಿನಿಧಿಯಂತಹ ಒಬ್ಬ ಬಾಲಿಶ ಸಂಸದನೇ ಒಪ್ಪಿಕೊಂಡಂತೆ, ಅವರ ಎದೆ ಸೀಳಿದರೆ ಅಕ್ಷರಗಳು ಸಿಗಬಹುದೇ ವಿನಾ, ಅಕ್ಷರದಾಚೆಗಿನ ಜ್ಞಾನ ಸಿಗುವುದಿಲ್ಲ. ಅಂತವರಿಗೆ ನಾವು ಜಿಡಿಪಿ, ರಾಜಸ್ವ ವರಮಾನ, ತೆರಿಗೆಯ ಸಂಗ್ರಹ, ತೆರಿಗೆ ಹಂಚಿಕೆಯ ಬಾಬತ್ತು ಅಂತ ಅಂಕಿಅಂಶಗಳನ್ನು ಬೋಧಿಸಿದರೆ, ಎಲ್ಲಾ ಕೇಳಿಸಿಕೊಂಡ ನಂತರ ಮತ್ತದೇ ಪ್ರಶ್ನೆ ಕೇಳುತ್ತಾರೆ, ’ಅದೆಲ್ಲಾ ಸರಿ, ಆದ್ರೆ ಹೀಗೆ ಬಿಟ್ಟಿಯಾಗಿ ಜನರಿಗೆ ಕೊಟ್ಟರೆ ಅವರು ಸೋಮಾರಿಗಳಾಗಲ್ವಾ? ರಾಜ್ಯದ ಬೊಕ್ಕಸ ಖಾಲಿಯಾಗಲ್ವಾ?!!’. ಬೊಕ್ಕಸ ಖಾಲಿಯಾಗುತ್ತೋ ಇಲ್ಲವೋ ನಂತರದ ಮಾತು, ಆದ್ರೆ ಅವರ ತಲೆ ಖಾಲಿಯಾಗಿದೆ ಅನ್ನೋದು ಮಾತ್ರ ಸತ್ಯ.
ನಾನು ಅವರನ್ನು ಟೀಕಿಸುವ ಕಾರಣಕ್ಕಾಗಿ, ಅಥವಾ ಅವರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಶಿಕ್ಷಣ ಮತ್ತು ಜ್ಞಾನದ ಮೂಲ ಆಶಯವೇ ವ್ಯಕ್ತಿಯೊಬ್ಬನನ್ನು ತರ್ಕಶೀಲನನ್ನಾಗಿಸುವುದು, ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆಳೆದು ಸ್ವಾಭಿಮಾನಿಯಾಗಿಸುವುದು. ಜನಕಲ್ಯಾಣ ಕಾರ್ಯಕ್ರಮಗಳನ್ನು ಬಿಟ್ಟಿ ಎಂದು ಲೇವಡಿ ಮಾಡುತ್ತಿರುವವರು ಅಥವಾ ‘ಫ್ರೀಬೀ’ ಎಂಬ ಪಾಶ್ಚಾತ್ಯ ಪದದ ಮೂಲಕ ತಮ್ಮನ್ನು ತಾವು ’ಎಂಎನ್ಸಿ’ ಜನ ಎಂದು ಕರೆದುಕೊಳ್ಳುತ್ತಿರುವವರಲ್ಲಿ ತರ್ಕವೂ ಇರುವುದಿಲ್ಲ, ಸ್ವಾಭಿಮಾನವೂ ಕಾಣುವುದಿಲ್ಲ. ಒಂದು ರಾಜಕೀಯ ಸಿದ್ಧಾಂತ ಅಥವಾ ವ್ಯಕ್ತಿಗೆ ಗುಲಾಮಗಿರಿ ಮಾಡುವುದನ್ನೇ ತಮ್ಮ ದಿಟ್ಟ ಅಸ್ತಿತ್ವ ಎಂಬ ಭ್ರಮೆಯಲ್ಲಿರುತ್ತಾರೆ. ಜ್ಞಾನದ ಮಟ್ಟದಲ್ಲಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಇವರೆಷ್ಟು ಟೊಳ್ಳು ಎಂಬುದು ಗ್ಯಾರಂಟಿ ಯೋಜನೆಗಳನ್ನು ಅವರು ಟೀಕಿಸುತ್ತಿರುವ ತೀವ್ರತೆ, ಅದಕ್ಕಾಗಿ ಅವರು ಮುಂದಿಡುತ್ತಿರುವ ಅರ್ಥಹೀನ ವಾದಗಳಿಂದಲೇ ಮನದಟ್ಟಾಗುತ್ತೆ.
ಯಾಕೆ ಈ ಮಾತು ಹೇಳ್ತಿದೀನಿ ಅಂದ್ರೆ, ಅರ್ಥಶಾಸ್ತ್ರದ ವಿಚಾರ ಬಿಟ್ಟುಬಿಡೋಣ. ಮನುಷ್ಯ ನಾಗರೀಕ ಎನಿಸಿಕೊಂಡಿದ್ದೇ ಹೊಮೆಸೆಪಿಯನ್ ಗುಣಗಳನ್ನು ರೂಢಿಸಿಕೊಂಡ ನಂತರ. ಅಂದರೆ ಒಂದು ಕಡೆ ನೆಲೆನಿಂತು, ಸಂಘಜೀವಿಯಾಗಿ ರೂಪಾಂತರಗೊಂಡ ನಂತರ. ಸಂಘಟಿತಗೊಳ್ಳುವುದರ ಮೂಲ ರೂಪವೇ ಕುಟುಂಬ. ಆ ಕುಟುಂಬದ ಪರಿಕಲ್ಪನೆ ಇವರಿಗೆ ಅರ್ಥವಾಗಿದ್ದೇ ಆದಲ್ಲಿ, ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಕಲ್ಯಾಣ ಕಾರ್ಯಕ್ರಮಗಳನ್ನು ಕೇವಲ ಟೀಕೆಯ ಕಾರಣಕ್ಕೆ ‘ಬಿಟ್ಟಿ’ ಎಂದು ಹೀಗಳೆಯುತ್ತಿರಲಿಲ್ಲ.
ಇಡೀ ಸಮಾಜದ ಮೂಲ ಘಟಕವೇ ಕುಟುಂಬ. ಒಂದು ಮಗು ತಾನು ದೊಡ್ಡವನಾದ ಮೇಲೆ ಸಮಾಜದ ಜೊತೆ ಹೇಗೆ ವ್ಯವಹರಿಸಬೇಕೆನ್ನುವ ನಾಗರೀಕತೆಯನ್ನು ಮನೆಯ ಸದಸ್ಯರ ಮೂಲಕ ಗ್ರಹಿಸುತ್ತದೆ. ಅಪ್ಪ-ಅಮ್ಮನ ಪೋಷಕ ಗುಣ, ಅಜ್ಜಿ-ತಾತನ ಮಾರ್ಗದರ್ಶನ, ಅಣ್ಣ-ಅಕ್ಕನ ಆಸರೆ, ತಮ್ಮ-ತಂಗಿಯ ಹೊಣೆಗಾರಿಕೆ ಹೀಗೆ ಬೇರೆಬೇರೆ ಸಂಬಂಧಗಳ ಮೂಲಕ ಬೇರೆಬೇರೆ ಕರ್ತವ್ಯ ಮತ್ತು ಜವಾಬ್ಧಾರಿಗಳನ್ನು ಮಗು ಕಲಿಯುತ್ತದೆ. ಆ ಕಾರಣಕ್ಕಾಗಿಯೇ ಮನೆಯನ್ನು ಮೊದಲ ಪಾಠ ಶಾಲೆ ಅಂತ ಕರೆಯುವುದು.
ಪೋಷಣೆಯ ಹೊಣೆ ಹೊತ್ತ ತಂದೆ-ತಾಯಿ, ತಮ್ಮ ಮಕ್ಕಳ ಸುಸ್ಥಿರ ಭವಿಷ್ಯಕ್ಕಾಗಿ ಅವರ ಶಿಕ್ಷಣ, ಆರೋಗ್ಯಕ್ಕಾಗಿ ಖರ್ಚು ಮಾಡುವುದನ್ನು ಯಾರಾದರೂ ‘ಬಿಟ್ಟಿ ಕೊಡುಗೆ’ ಎಂದು ಲೇವಡಿ ಮಾಡುವುದಾದರೆ, ಅದೇ ಸ್ಥಾನದಲ್ಲಿ ನಿಂತು ತನ್ನ ನಾಗರೀಕರನ್ನು ಪೊರೆಯಬೇಕಾದ ಸರ್ಕಾರವು ಜನರ ಸುಸ್ಥಿರ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳನ್ನು ‘ಬಿಟ್ಟಿ ಕೊಡುಗೆ’ ಅಂತನ್ನಬಹುದಿತ್ತೇನೊ. ಆದರೆ ಎಂಥಾ ಮುಠ್ಠಾಳನು ಸಹಾ, ತಂದೆತಾಯಿಗಳು ಮಕ್ಕಳಿಗಾಗಿ ಮಾಡುವ ಖರ್ಚನ್ನು ಬಿಟ್ಟಿ ಕೊಡುಗೆ ಎಂದು ಹೀಗಳೆಯುವುದಿಲ್ಲ; ಅದರಿಂದಾಗಿ ಮಕ್ಕಳು ಸೋಮಾರಿಗಳಾಗುತ್ತಾರೆ ಎಂದು ಆರ್ಥಹೀನ ತರ್ಕ ಮುಂದಿಡುವುದಿಲ್ಲ. ಬದಲಿಗೆ, ಅದು ತಂದೆತಾಯಿಗಳಾದವರ ಕರ್ತವ್ಯ ಎಂದು ಪರಿಗಣಿಸುತ್ತೇವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಆ ಕರ್ತವ್ಯ ಬಹುಮುಖ್ಯ ಎಂದು ಮನ್ನಣೆ ನೀಡುತ್ತೇವೆ. ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳು ಸಹಾ ಅಂತದ್ದೇ ಕರ್ತವ್ಯವಾಗಿರುತ್ತವೆ ಮತ್ತು ಆ ಕರ್ತವ್ಯದ ಗುರಿ ಜನರ ಸುಸ್ಥಿರ ಅಭಿವೃದ್ಧಿಯೇ ಆಗಿರುತ್ತದೆ.
ಇರಬಹುದು, ಬೆರಳೆಣಿಕೆಯ ಪ್ರಕರಣಗಳಲ್ಲಿ ಪೋಷಕರ ಕೊಡುಗೆಯನ್ನು ದುರಪಯೋಗಪಡಿಸಿಕೊಂಡು, ಭವಿಷ್ಯವನ್ನು ಹಾಳು ಮಾಡಿಕೊಂಡ ಮಕ್ಕಳ ಉದಾಹರಣೆಗಳು ಇರಬಹುದು. ಅದನ್ನೇ ಮುಂದು ಮಾಡಿ, ಯಾವ ತಂದೆತಾಯಿಯೂ ಇನ್ಮುಂದೆ ಮಕ್ಕಳ ಭವಿಷ್ಯಕ್ಕಾಗಿ ಖರ್ಚು ಮಾಡಬಾರದು ಎಂಬ ಸಾರ್ವತ್ರಿಕ ತರ್ಕವನ್ನು ತೇಲಿಬಿಡುವ ಮೇಧಾವಿಗಳು ಇದುವರೆಗೆ ಅವತರಿಸಿಲ್ಲ. ಆದರೆ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಕೊಡುಗೆ’ ಎಂದು ಲೇವಡಿ ಮಾಡುತ್ತಿರುವವರು ಅಂತಹ ಮೇಧಾವಿಗಳ ಸಾಲಿಗೆ ಸೇರಬಲ್ಲಂತವರು. ಹಾಗಾಗಿ ಕುಟುಂಬದ ಪರಿಕಲ್ಪನೆಯೇ ಅವರಿಗೆ ಅರ್ಥವಾಗಿಲ್ಲ; ಅಷ್ಟು ಎಲಿಮೆಂಟರಿ ಜನ ಅವರು ಅಂತ ಹೇಳಿದ್ದು. ಅವರ ಪ್ರಕಾರ ಸರ್ಕಾರವೆಂದರೆ, ನಮ್ಮಿಂದ ದುಬಾರಿ ತೆರಿಗೆಯ ರೂಪದಲ್ಲಿ ಕಿತ್ತು ತಿನ್ನುವ ಯಂತ್ರ! ಆ ಯಂತ್ರ ಎಷ್ಟು ಭೀಕರವಾಗಿ ನಮ್ಮ ಸುಲಿಗೆ ಮಾಡುತ್ತದೋ, ಅಷ್ಟು ದೇಶ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ನಾವು ಕಟ್ಟುವ ತೆರಿಗೆಯ ಹಣವೆಲ್ಲ, ನಮ್ಮ ಅನುಕೂಲಕ್ಕಲ್ಲದ, ನಮ್ಮ ಕಣ್ಣಿಗೂ ಕಾಣಿಸದ ಅಭಿವೃದ್ಧಿಗೆ ವಿನಿಯೋಗವಾಗುತ್ತಿರುತ್ತದೆ ಎಂಬ ಕಲ್ಪನೆ ಅವರದು. ಇಂತವರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡ ಇವತ್ತಿನ ಸರ್ಕಾರಗಳು, ತೆರಿಗೆಯ ಹೆಸರಲ್ಲಿ ಜನರ ಸುಲಿಗೆ ಮಾಡಿ ಅಭಿವೃದ್ಧಿಯ ಫೋಜು ಕೊಡುತ್ತಿವೆ. ಆ ಫೋಜಿಗೆ ಇಂಥಾ ಮುಠ್ಠಾಳರು ಕೇಕೆ ಹಾಕುತ್ತಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಯಾವುದಾದರೂ ಸರ್ಕಾರ, ಜನರ ತೆರಿಗೆ ಹಣವನ್ನು ಜನರ ಕಲ್ಯಾಣದ ಸುಸ್ಥಿರ ದೂರಗಾಮಿ ಅಭಿವೃದ್ಧಿಯ ಯೋಜನೆಗಳಿಗೆ ವಿನಿಯೋಗಿಸಿದರೆ, ತಮ್ಮ ತಿಳಿವಳಿಕೆಯ ಮಟ್ಟಕ್ಕೆ ತಕ್ಕಂತೆ ಹೀಗೆ ಬೊಬ್ಬಿರಿದು ತಮ್ಮ ತಲೆಯೊಳಗಿನ ಖಾಲಿತನವನ್ನು ಜಾಹೀರು ಮಾಡಿಕೊಳ್ಳುತ್ತಾರೆ.
ನಿಜ ಹೇಳಬೇಕೆಂದರೆ, ಕನಿಷ್ಠ ಕೌಟುಂಬಿಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳದ ಇಂತವರಿಂದಲೇ ಇವತ್ತು ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರೋದು. ತಮಗಾಗಿ ಜೀವ ಸವೆಸಿದ ತಂದೆತಾಯಿಗಳನ್ನು ಇಳಿವಯಸ್ಸಿನಲ್ಲಿ ಜತನ ಮಾಡದಷ್ಟು ಮನುಷ್ಯತ್ವಹೀನ ಮನಸ್ಸುಗಳು ‘ಹಣ’ದ ಮೂಲಕವೇ ಎಲ್ಲವನ್ನೂ ತೂಗಲು ನೋಡುತ್ತಾರೆ; ತಮ್ಮ ವೃದ್ಧ ತಂದೆತಾಯಿಗಳನ್ನೂ ಸಹಾ! ಅವರ ಪ್ರಕಾರ ಅವರು ವೃದ್ಧಾಶ್ರಮಕ್ಕೆ ಪ್ರತಿ ತಿಂಗಳು ಕಟ್ಟುವ ಫೀಜೇ ತಮ್ಮ ತಂದೆತಾಯಿಗಳ ಋಣ ಸಂದಾಯ ಮಾಡಿದಂತೆ. ಮುಪ್ಪಿನ ಸಮಯದಲ್ಲಿ ಆ ಹಿರಿ ಜೀವಗಳು ತಮ್ಮ ಮಕ್ಕಳು, ಮೊಮ್ಮಕ್ಕಳ ಸಾಂಗತ್ಯಕ್ಕಾಗಿ ಎಷ್ಟು ಹಾತೊರೆಯುತ್ತಿರುತ್ತವೆ ಅನ್ನೋದು ಈ ಮನುಷ್ಯತ್ವಗೇಡಿ ಖಾಲಿ ತಲೆಗಳಿಗೆ ಎಲ್ಲಿ ಅರ್ಥವಾಗಬೇಕು. ಅವರಿಗೆ ಹಣವಷ್ಟೇ ಮಾನದಂಡ! ಇಂತವರೇ ಇವತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸುತ್ತಿರೋದು. ಅಂತವರಿಗೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಉತ್ತರ ಕೊಟ್ಟು ಏನು ಪ್ರಯೋಜನ!? ಒನ್ಸ್ ಎಗೇನ್, ಅರ್ಥ ಮಾಡಿಕೊಳ್ಳುವಷ್ಟು ಬುದ್ದಿಮತ್ತೆ ಅವರದಲ್ಲ ಬಿಡಿ….




