ವರದಿ : ಪ್ರಭು ವಿ.ಎಸ್
ಸ್ಮಶಾನ ಭೂಮಿ ಒದಗಿಸಿ, ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ನಿವಾಸಿಗಳು ಸೋಮವಾರದಿಂದ ನಿರಂತರ ಧರಣಿ ಕೈಗೊಂಡಿದ್ದಾರೆ.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ನೂರಾರು ಸಂಖ್ಯೆಯ ಸ್ಥಳೀಯ ನಿವಾಸಿಗಳು ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರಲ್ಲದೆ ಕೂಡಲೇ ಸ್ಮಶಾನಕ್ಕೆ ಮೀಸಲಿಟ್ಟಿದ್ದ ನಿವೇಶನವನ್ನು ಖಾತೆ ಮಾಡಿ ಕೊಡುವಂತೆ ಆಗ್ರಹಿಸಿದರು.
ಸ್ಮಶಾನ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆ ಖಾತೆ ಮಾಡಿಕೊಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ವೆಂದು ಪಟ್ಟು ಹಿಡಿದು ತಾಲೂಕು ಕಚೇರಿಯ ಬಳಿ ಅಡುಗೆ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ತಾಲೂಕಿನ ಗೆಜ್ಜಲಗೆರೆ ಕಾಲೋನಿಯ ನಿವಾಸಿಗಳು ಸ್ಮಶಾನವಿಲ್ಲದೆ ಅಂತ್ಯ ಸಂಸ್ಕಾರದ ವೇಳೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ತಾಲೂಕು ಆಡಳಿತ ಕೆಲ ಅಧಿಕಾರಿಗಳು ಭೂಗಳ್ಳರ ಜೊತೆ ಸೇರಿಕೊಂಡು ಸಾರ್ವಜನಿಕ ಸ್ಮಶಾನವನ್ನು ಅಕ್ರಮವಾಗಿ ಬೇರೆಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.
ಸ್ಮಶಾನಕ್ಕೆ ಮೀಸಲಿಟ್ಟಿರುವ ಸಾರ್ವಜನಿಕ ಸ್ಮಶಾನದ ನಿವೇಶನವನ್ನು ಖಾತೆ ಮಾಡಿ ಕೊಡುವಂತೆ ಆಗ್ರಹಿಸಿದರಲ್ಲದೆ ಈ ನಿವೇಶನವು ಸರ್ವೇ ನಂ 203 ರ ಗೋಮಾಳ ಹೆಸರಿನಲ್ಲಿದ್ದ ನಿವೇಶನವನ್ನು ಏಕಾಏಕಿ 421 ಸರ್ವೆ ನಂಬರ್ ಗೆ ಕೂರಿಸಿ ಪೋಡಿ ಮಾಡಿ ಹದ್ದುಬಸ್ತು ಗುರುತಿಸಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆಂದು ದೂರಿದರು. ಈ ಸಂಬಂಧ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ಗಮನಕ್ಕೂ ತಂದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ಕೂಡಲೇ ಸ್ಮಶಾನ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸಿಲ್ದಾರ್ ಟಿ ಎನ್ ನರಸಿಂಹಮೂರ್ತಿ ಈ ನಿವೇಶನವೂ ಈಗಾಗಲೇ ಹದ್ದುಬಸ್ತು ಮತ್ತು ಪೋಡಿ ಗುರುತಿಸಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿದ್ದು ಈ ಸಂಬಂಧ ಉಪ ವಿಭಾಗಾಧಿಕಾರಿ ಮತ್ತು ಭೂ ಇಲಾಖೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು ಖಾತೆ ರದ್ದುಪಡಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು, ತಹಸಿಲ್ದಾರ್ ಮಾತಿಗೆ ಸೊಪ್ಪು ಹಾಕದ ಪ್ರತಿಭಟನನಿರತರು ನಿವೇಶನವನ್ನು ಸ್ಮಶಾನಕ್ಕೆ ಖಾತೆ ಮಾಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲವೆಂದು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.
ಪ್ರತಿಭಟನೆ ವೇಳೆ ಸ್ಥಳೀಯ ನಿವಾಸಿಗಳಾದ ಮಂಜುನಾಥ್, ಸಿದ್ದೇಗೌಡ, ಪ್ರಸನ್ನ ,ಸೋಮು, ಬಾಬು, ಜಯ ವೀರೇಗೌಡ, ಶಿವಲಿಂಗಯ್ಯ, ಮೀನಾ, ಸುಮತಿ, ರೇಖಾ, ಶಕುಂತಲಾ, ಲಕ್ಷ್ಮಿ, ಮಂಗಳ, ದೇವಮ್ಮ ನೇತೃತ್ವ ವಹಿಸಿದ್ದರು.




