ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಮಧು ಜಿ.ಮಾದೇಗೌಡರು ಹೊಸ ಇತಿಹಾಸ ಸೃಷ್ಠಿಸಿದ್ದು,ಅವರ ಗೆಲುವು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಪ್ರತಿಫಲ ಎಂದು ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಕಾಂಗ್ರೆಸ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಿಹಿ ಹಂಚಿ ಅವರು ಮಾತನಾಡಿದರು. ಇದುವರೆಗೆ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಮ್ಮೆಯೂ ಜಯಗಳಿಸಿರಲಿಲ್ಲ.ಈ ಬಾರಿ ಜಿ.ಮಾದೇಗೌಡರು ಪುತ್ರ ಮಧು ಅವರು ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿ.ಮಾದೇಗೌಡರು ಜಿಲ್ಲೆಗೆ ಸಲ್ಲಿಸಿದ ಸೇವೆ,ಕಾವೇರಿ ವಿಚಾರ,ರೈತರು, ಜನಸಾಮಾನ್ಯರ ಯಾವುದೇ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಬೀದಿಗಿಳಿದು ಹೋರಾಟ ಮಾಡುವ ಮನೋಭಾವ ಅವರದು. ಅದರಂತೆಯೇ ಅವರ ಪುತ್ರ ಮಧು ಜಿ.ಮಾದೇಗೌಡರೂ ಸಹ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿದ ಪದವೀಧರ ಮತದಾರರು ಮಧು ಅವರನ್ನು ಗೆಲ್ಲಿಸಿ ಕಾಂಗ್ರೆಸ್‌ಗೆ ಬೆನ್ನುತಟ್ಟಿದ್ದಾರೆಂದು ಹೇಳಿದರು.
ಈ ಗೆಲುವು ಕಾಂಗ್ರೆಸ್‌ನ ಸಾಮೂಹಿಕ ಪರಿಶ್ರಮದ ಹಾಗೂ ಎಲ್ಲ ನಾಯಕರ ಒಗ್ಗಟ್ಟಿನ ಪ್ರಚಾರದಿಂದಾದ ಗೆಲುವು ಎಂದು ಬಣ್ಣಿಸಿದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಮಕೃಷ್ಣೇಗೌಡ, ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಚಂದ್ರಣ್ಣ, ಜಾನೆ ಗೌಡ್ರು,ಸಾಸಲು ಈರಪ್ಪ, ಶಿವಲಿಂಗೇಗೌಡ, ಲಿಂಗರಾಜು, ಶಿವಲಿಂಗೇಗೌಡ, ಸೊಳ್ಳೇಪುರ ಜೈರಾಮ್, ತಾರಾನಾಥ್ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರಿದ್ದರು.