✍️ ಹರೀಶ್ ಗಂಗಾಧರ್
ನೊವಾಕ್ ಜೊಕೊವಿಕ್ ಬಾಲ್ಯದಲ್ಲಿ ತನ್ನ ಕೋಣೆಯಲ್ಲಿ ಕೈ ಸಿಗುತ್ತಿದ್ದ ವಸ್ತುಗಳಿಂದ ಹೇಗೋ ವಿಂಬಲ್ಡನ್ ಟ್ರೋಫಿ ತರಹದ ಒಂದು ಕಪ್ ಮಾಡಿ ಕನ್ನಡಿ ಮುಂದೆ ನಿಂತು “ನಾನು ನೊವಾಕ್ ಜೊಕೊವಿಕ್, ವಿಂಬಲ್ಡನ್ ಚಾಂಪಿಯನ್” ಎಂದು ಹೇಳಿಕೊಂಡು ಬೀಗುತ್ತಿದ್ದನಂತೆ. ಆ ಕ್ಷಣ ಆ ಮುಗ್ಧ ಕಲ್ಪನೆಗಳೆಲ್ಲ, ಕನಸುಗಳೆಲ್ಲಾ ವಾಸ್ತವಕ್ಕೆ ತೀರಾ ಹತ್ತಿರವಾದಂತೆ ಜೊಕೊವಿಕ್ ಗೆ ಭಾಸವಾಗುತ್ತಿತ್ತಂತೆ.
ಹುಡುಗನಾಗಿದ್ದಾಗ ಆತ ಹಗಲು ರಾತ್ರಿಯನ್ನದೆ ಕನಸು ಕಾಣುತ್ತಿದ್ದನಂತೆ. ವಿಂಬಲ್ಡನ್ ಹಚ್ಚ ಹಸಿರು ಟೆನಿಸ್ ಕೋರ್ಟ್ನಲ್ಲಿ ಕಪ್ ಹಿಡಿದು ನಿಂತದನ್ನು ಕಲ್ಪಿಸಿಕೊಳ್ಳುತ್ತಿದ್ದನಂತೆ. ಕಪ್ ಗೆದ್ದ ಆ ರೋಚಕ ಕ್ಷಣವೂ ಅವನ ಕಣ್ಮುಂದೆ ಹಾದು ಹೋಗುತಿತ್ತಂತೆ. ಆತನಿಗೆ ತನ್ನ ಕನಸುಗಳಲ್ಲಿ ಸಂಪೂರ್ಣ ನಂಬಿಕೆ ಇತ್ತಂತೆ. ದೃಶ್ಯೀಕರಿಸುವುದು, ಕಲ್ಪಿಸಿಕೊಳ್ಳುವುದು ಮನುಷ್ಯರಿಗಿರುವ ಬಹು ದೊಡ್ಡ ಶಕ್ತಿ. ಮಕ್ಕಳು ಕನಸು ಕಂಡರೆ, ಉತ್ತಮ ಭವಿಷ್ಯ ಕಲ್ಪಿಸಿಕೊಂಡರೆ ಅದಕ್ಕಿಂತ ಶುದ್ದ ಪ್ರೀತಿ ಮತ್ತು ಪ್ರೇರಣೆ ಮತ್ತೊಂದಿಲ್ಲ.
ಪೋಷಕರು, ಶಿಕ್ಷಕರು, ಮನೆಯವರು ದೊಡ್ಡ ದೊಡ್ಡ ಕನಸು ಕಾಣುವ ಮಕ್ಕಳಿಗೆ ಹೆಗಲು ಕೊಟ್ಟು ನಿಲ್ಲಿ. ಬರೀ ಓದು ಬರಹಗಳಲ್ಲಿ ಅವರನ್ನ ಮುಳುಗಿಸಿಬಿಡಬೇಡಿ. ಅವರು ಇಷ್ಟ ಪಡುವ ಕ್ಷೇತ್ರದಲ್ಲೇ ಮುಂದುವರೆಯಲು ಉತ್ತೇಜನ ನೀಡಿ. ಮಾನಸಿಕ ಸ್ಥೈರ್ಯ ಕುಗ್ಗಿಸುವ ಮಾತುಗಳನಾಡಿ ಅವರ ಆತ್ಮ ಗೌರವ ನಾಶಮಾಡಬೇಡಿ. ಮಕ್ಕಳು ಕಾಣುವ ಕನಸುಗಳಿಗೆ ಮನ್ನಣೆ ನೀಡಿ ಏಕೆಂದರೆ ಮಕ್ಕಳ ಕನಸುಗಳಿಗೆ ಆದ್ಯತೆ ನೀಡುವ ಸಮಾಜ ಅತ್ಯಂತ ಸ್ವಸ್ತ ಸಮಾಜವಾಗುತ್ತದೆ.
ಈ ವಿಷಯವಾಗಿ ಸರ್ಕಾರಿ ಕಾಲೇಜುಗಳಲ್ಲಿ ಕೆಲ್ಸ ಮಾಡುವ ಪ್ರಾಧ್ಯಾಪಕರ ಮೇಲಿರುವ ಜವಾಬ್ದಾರಿ ಹೆಚ್ಚಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಕಾಲೇಜಿಗೆ ಬರುವ ಕೆಳ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವೆ (self esteem) ಇರುವುದಿಲ್ಲ. ದಶಕಗಳ ಕಾಲ ವ್ಯವಸ್ಥಿತವಾಗಿ ಅವರ ಕನಸುಗಳನ್ನ ಶಾಲೆಗಳಲ್ಲಿ ಮಣ್ಣು ಮಾಡಲಾಗುತ್ತದೆ.

ಜೊಕೊವಿಕ್ ಗೆ ಸರ್ಬಿಯಾದ ಭೀಕರ ಯುದ್ದದ ದಿನಗಳಲ್ಲೂ ತರಬೇತಿ ಕೊಡಿಸಲು ಮರೆಯದ ಅಪ್ಪ ಅಮ್ಮ ನಮ್ಮ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಮನೆಯ ಹೊರೆ, ಅರ್ಥವಿಲ್ಲದ ಪಠ್ಯ ಪುಸ್ತಕಗಳ ಒತ್ತಡ, ಪರೀಕ್ಷೆ, ಆಂತರಿಕ ಮೌಲ್ಯಮಾಪನದ ಭೂತ, ತಂತ್ರಜ್ಞಾನ ಪೋಷಿತ ಕಲಿಕಾ appಗಳಿಗೆ ಒತ್ತಡ ಹೇರಿ ಲಾಗ್ ಇನ್ ಮಾಡಿಸುವುದು etc ವಿದ್ಯಾರ್ಥಿಗಳು ಕನಸು ಕಾಣದಂತೆಯೆ ಮಾಡಿಬಿಡುತ್ತದೆ. (ಇನ್ನು ADHD, Autism, dyslexia, dysgraphia, dyscalculia, dyspraxia ದಂತಹ ಕಲಿಕಾ ನ್ಯೂನತೆಯನ್ನ ಒಪ್ಪಲು ನಮ್ಮ ವ್ಯವಸ್ಥೆ ತಯಾರಿಲ್ಲ.) ಇದು ಸಮಾಜದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಳ್ಳವರು ಕಂಡುಕೊಂಡ ಅಥವಾ ಮಾಡಿಕೊಂಡ ಅರೇಂಜ್ಮೆಂಟ್. ಇಂತಹ ಹುನ್ನಾರಕ್ಕೆ ಆಳುವ ವರ್ಗದ ಮತ್ತು ಬ್ಯುರೋಕ್ರೇಸಿಯ ಸಂಪೂರ್ಣ ಬೆಂಬಲ ಸದಾ ಕಾಲ ಇರುತ್ತದೆ.
Education can spoil a child ಎಂಬ ಸಾಧ್ಯತೆಯನ್ನ ನಾವೆಂದೂ ಒಪ್ಪಲಾರೇವು. ಬೀಟಲ್ಸ್ ತಂಡದ ಜಾನ್ ಲೆನನ್, ಮಾಸ್ಕ್ ಖ್ಯಾತಿಯ ಜಿಮ್ ಕ್ಯಾರಿ, ಸರಿಗಟ್ಟಲಾಗದ ಒಲಂಪಿಕ್ ಸಾಧನೆ ಮಾಡಿದ ಮೈಕಲ್ ಫೆಲ್ಪ್ಸ್, ಸಂಗೀತ ಮಾಂತ್ರಿಕ ಮೊಜಾರ್ಟ್, ಬ್ಯಾಸ್ಕೆಟ್ ಬಾಲ್ ದಿಗ್ಗಜ ಮೈಕಲ್ ಜೋರ್ಡಾನ್, ವಿಜ್ಞಾನಿ ಗ್ರಹಾಂ ಬೆಲ್, ಎಡಿಸನ್, ಐನ್ ಸ್ಟೈನ್, ಬರಹಗಾರರಾದ ಬರ್ನಾರ್ಡ್ ಷಾ, ಅಗತ ಕ್ರಿಸ್ಟಿ, ಮಕ್ಕಳ ಮ್ಯಾಜಿಕ್ ಲೋಕ ಸೃಷ್ಟಿಸಿದ ವಾಲ್ಟ್ ಡಿಸ್ನಿ ಸ್ಕೂಲಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡದಿದ್ದುದು ಅವರ free spirit ಉಳಿಸಿತು ಎಂದರೆ ತಪ್ಪಾಗಲಾರದು.
ಅದೆಲ್ಲಾ ಪಕ್ಕಾಕಿಟ್ಟು ಸದ್ಯಕ್ಕೆ ಪ್ರಾಧ್ಯಾಪಕರನ್ನಷ್ಟೇ ನೋಡುವುದಾದರೆ, ಚಾಕ್ ಅಂಡ್ talk ಪದ್ಧತಿ ಬಳಸಿ ಶಿಸ್ತಿನಿಂದ ಪಠ್ಯವನ್ನ ಮಾತ್ರ ಬೋಧಿಸಿ, ಬೋಧಿಸುವಾಗ ತರಲೆ ಮಾಡುವ ವಿದ್ಯಾರ್ಥಿಗಳನ್ನ ಶಿಕ್ಷಿಸಿ “ಶ್ರೇಷ್ಠ ಶಿಕ್ಷಕ”ನೆಂದು ಕರೆಸಿಕೊಳ್ಳುವ ಪ್ರಾಧ್ಯಾಪಕರುಗಳು ಒಂದೆಡೆಯಾದರೆ, ತರಗತಿಗೇ ಹೋಗದೆ ಬರಿಯ ಕ್ಯಾಂಪಸ್ ಬೀಟ್ ಹೊಡೆಯುತ್ತಾ ವಿದ್ಯಾರ್ಥಿಗಳಲ್ಲಿ ನಡುಕ ಹುಟ್ಟಿಸುವ ಪ್ರಾಧ್ಯಾಪಕರು ಹಲವರಿದ್ದಾರೆ. ಮತ್ತೊಂದೆಡೆ ಮಕ್ಕಳ ಜೊತೆಗೆ ಒಡನಾಟವನ್ನೆ ಇಟ್ಟುಕೊಳ್ಳಬೇಡಿ, ಆದಷ್ಟು ದೂರವಿಟ್ಟು ತಮ್ಮ ಕರ್ತವ್ಯ ಮುಗಿಸಿಕೊಳ್ಳಿ ಎಂದು ಫ್ರೀ ಸಲಹೆ ನೀಡುವವರೂ ಇದ್ದಾರೆ. ಇವರೆಲ್ಲರಿಗಿಂತ ಅಪಾಯಕಾರಿ ಮಕ್ಕಳ ಗುಂಪು ಕಟ್ಟಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರು, ನಾನು ಸೀನಿಯರ್ ಎಂದು ತಮ್ಮ ತೂಕ ಎಲ್ಲೆಡೆ ಎಸೆಯುವವರು ಮತ್ತು ಗಾಸಿಪ್ ಮಾಡುವವರು.
ಇದೆಲ್ಲದರಿಂದ ದೂರ ನಡೆದು ಪ್ರಾಧ್ಯಾಪಕರು ಮಕ್ಕಳಲ್ಲಿ ಆತ್ಮಗೌರವ ಮೂಡಿಸಬೇಕಿದೆ, ಕನಸು ಕಾಣುವಂತೆ ಪ್ರೇರೇಪಿಸುಬೇಕಿದೆ. ಪ್ರಾಧ್ಯಾಪಕರೇ ನಿಮ್ಮ ಸಣ್ಣತನ, ಇಲಾಖಾ ರಾಜಕೀಯ, ಸಂಬಳ, ಬಾಕಿ ಹಣ, TA/DA ಗಳ ಬಲೆಯಿಂದ, ಅಹಂಕಾರ, ಮೂರ್ಖತನ ಮತ್ತು ಮೇಲಿರಿಮೆಯ ದಂತ ಗೋಪುರಗಳಿಂದ ಒಮ್ಮೆ ಕೆಳಗಿಳಿದು ಮಕ್ಕಳ ಮಾತು ಕೇಳಿ, “ಕಾಲೇಜು ದಿನಗಳಲ್ಲಿ ನಾನು ಕೂಡ ನಿನ್ನ ಹಾಗೆ ತರಲೆ ಆಗಿದ್ದೆ ಕಣೋ, ಆದ್ರೆ ಕನಸು ಕಾಣುವುದನ್ನ, ಶ್ರಮ ಪಡುವುದನ್ನ ಮರೆಯಲಿಲ್ಲ” ಎಂದೇಳಿ. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು I Believe you. You can achieve ಎಂದೇಳಿ… ಒಂದು ಪವಾಡವೆ ಆಗಿ ಹೋಗುತ್ತದೆ…

ನಿಮ್ಮ ವಯಸ್ಸು 35 ಅಲ್ವ ಎಂದು ಸಂದರ್ಶಕಿ ಒಮ್ಮೆ ಜೊಕೊವಿಕ್ ಅವರನ್ನ ಕೇಳಿದ್ದಳು… ಅದಕ್ಕೆ what do you mean? 35 ಅನ್ನೋದು ಈಗಿನ ಹೊಸ 25 ಎಂದಿದ್ದ!
ಇವತ್ತು ಆಡಿದ್ದು ನೋಡಿದ್ರೆ ಅವ್ನಿಗೆ 36 ಅನ್ನಿಸಲ್ಲ… ಆತನಿಗೆ ಈಗ 16ರ ಹದಿಹರೆಯ ಅನ್ಸುತ್ತೆ… ಫ್ರೆಂಚ್ ಓಪನ್ ಚಾಂಪಿಯನ್ ಗೆ ಇದು ಗ್ರ್ಯಾಂಡ್ ಸ್ಲಾಮ್ ಸಂಖ್ಯೆ 23…Number 23: ಜರ್ಸಿ ರೆಡಿ ಇಟ್ಟಿದ್ದ ಅಂದ್ರೆ ಇವನ ಆತ್ಮ ವಿಶ್ವಾಸ ಹೇಗಿದೆ ನೋಡಿ !
— Novak Djokovic (@DjokerNole) June 11, 2023
ಫೆಡರರ್ ಮತ್ತು ನಡಾಲ್ ಅಳುತ್ತಿದ್ದ ಟೆನಿಸ್ ಕ್ರೀಡೆಯಲ್ಲಿ ನುಸುಳಿ ಅವರಿಬ್ಬರನ್ನೂ ಹಿಂದಿಕ್ಕಿ ಈತ ತನ್ನ ಸುತ್ತ ಸೃಷ್ಟಿಸಿಕೊಂಡ ಪ್ರಭಾವಳಿ ಬಹಳಷ್ಟು ವರುಷ ಹೊಳೆಯಲಿದೆ… ಈಗ ಈತನೇ GOAT- Greatest of All Time.




