ಮೇ.10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ಲಕ್ಷಗಟ್ಟಲೆ ಹಣ ಪಡೆದು ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಮನ್ ಮುಲ್ ನಿರ್ದೇಶಕ ಡಾಲು ರವಿ ಮಾಡಿರುವ ಆರೋಪವು ಸಂಪೂರ್ಣ ನಿರಾಧಾರ. ಸುಳ್ಳು ಆರೋಪ ಮಾಡಿ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಡಾಲು ರವಿ ಕೂಡಲೇ ಬಹಿರಂಗ ಕ್ಷಮೆ ಕೋರದಿದ್ದರೆ ಮಾನನಷ್ಠ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಕೋಡಿಮಾರನಹಳ್ಳಿ ದೇವರಾಜು ಡಾಲು ರವಿ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ. ಒಂದು ವೇಳೆ ನಾವು ಏನಾದರೂ ಜೆಡಿಎಸ್ ಅಭ್ಯರ್ಥಿಯಿಂದ ಹಣ ಪಡೆದಿರುವುದು ನಿಜವಾಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿದರೆ ನಾವು ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿರುತ್ತೇವೆ ಎಂದು ಸವಾಲು ಹಾಕಿದರು.
ಜೆಡಿಎಸ್ ಅಭ್ಯರ್ಥಿಯ ಪರವಾಗಿ ಹಣದ ಆಮಿಷವೊಡ್ಡಿ ಕೆ.ಆರ್.ಪೇಟೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರನ್ನು ವಿಧಾನಸಭಾ ಚುನಾವಣೆಯ ಮುಂಚಿತವಾಗಿಯೇ ಬುಕ್ ಮಾಡಿಕೊಂಡಿರುವುದಾಗಿ ಡಾಲು ರವಿ ಮಾತನಾಡಿರುವ ಆಡಿಯೋ ತಾಲ್ಲೂಕಿನಾದ್ಯಂತ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ನಮ್ಮನ್ನು ತೇಜೋವಧೆ ಮಾಡುವ ಹುನ್ನಾರ ನಡೆದಿದೆ. ಸುಳ್ಳು ಆರೋಪ ಮಾಡಿರುವ ಡಾಲು ರವಿ ಅದನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ರಾಜಕೀಯ ಸ್ಥಾನಮಾನ ಪಡೆದುಕೊಂಡ ಡಾಲುರವಿ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ವಿಧಾನಸಭಾ ಚುನಾವಣೆಯ ಸಂದಿಗ್ಧ ಸಮಯದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ನಮ್ಮಗಳ ಮೇಲೆ ರಾಜಕೀಯವಾಗಿ ತಾಲ್ಲೂಕಿನ ಜನತೆಗೆ ತಪ್ಪು ಸಂದೇಶ ನೀಡಲು ಹಣ ಸಂದಾಯ ಆರೋಪ ಮಾಡಿರುವ ರವಿ ತಮ್ಮ ಆರೋಪವನ್ನು ಸಾಬೀತು ಮಾಡಿದರೆ ಸಾರ್ವಜನಿಕವಾಗಿ ಪ್ರವಾಸಿ ಮಂದಿರ ವೃತ್ತದಲ್ಲಿ ಆರೂ ಜನರು ನೇಣಿಗೇರಲು ಸಿದ್ಧರಿದ್ದೇವೆ. ಕೇವಲ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡಿರುವ ರವಿ ಆರೋಪ ಸಾಬೀತುಪಡಿಸಲಾಗದಿದ್ದರೆ ಸಾರ್ವಜನಿಕ ಜೀವನದಿಂದ ನೇಪಥ್ಯಕ್ಕೆ ಸರಿದು ತಾಲ್ಲೂಕನಿಂದ ಜಾಗ ಖಾಲಿ ಮಾಡಬೇಕು ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ ಅಭ್ಯರ್ಥಿ ಬಿ.ಎಲ್.ದೇವರಾಜು ಹಾಗೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕಾಂಗ್ರೆಸ್ ಕಾರ್ಯಕರ್ತರ ಆತ್ಮಾವಲೋಕನಾ ಸಭೆ ಕರೆದು ಮತದಾರ ಬಂಧುಗಳಿಗೆ ಕೃತಜ್ಞತೆ ಸಮರ್ಪಣೆ ಮಾಡುವ ಜೊತೆಗೆ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಕ್ಷೇತ್ರದ ಶಾಸಕರಾದ ಮಂಜು ಅವರೂ ಕೂಡ ಡಾಲು ರವಿ ಕಾಂಗ್ರೆಸ್ ಮುಖಂಡರಿಗೆ ಹಣ ನೀಡಿಕೆ ಮಾಡಿರುವ ಬಗ್ಗೆ ಆರೋಪ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯ ಮಾಡಿದರು.
ರಾಜಕಾರಣದಲ್ಲಿ ಈಗಿನ್ನೂ ಅಂಬೆಗಾಲಿಡುತ್ತಿರುವ ಡಾಲು ರವಿ ಬೇರೆಯವರ ಮೇಲೆ ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಡಾಲು ರವಿ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವ ಜೊತೆಗೆ ಸುಳ್ಳು ಆರೋಪ ಮಾಡಿರುವ ಆತನಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಗುಡುಗಿದರು. ಕಾಂಗ್ರೆಸ್ ನಾಯಕರು ರಾಜಕಾರಣದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಮ್ಮಗಳ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಕೆಟ್ಟಮನಸ್ಸಿನಿಂದ ರವಿ ಆಲೋಚಿಸಿ ಇಂತಹ ಆರೋಪ ಮಾಡಿದ್ದಾರೆ.
ರವಿ ಬೇಷರತ್ ಕ್ಷಮೆಯಾಚಿಸಿ ತಪ್ಪೊಪ್ಪಿಕೊಳ್ಳದಿದ್ದರೆ ಉಗ್ರವಾದ ಹೋರಾಟ ರೂಪಿಸಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ವಿಜಯ್ ರಾಮೇಗೌಡ, ನಾಗೇಂದ್ರಕುಮಾರ್, ಕೋಡಿಮಾರನಹಳ್ಳಿ ದೇವರಾಜು, ಕೃಷ್ಣಮೂರ್ತಿ ಹಾಗೂ ಸುರೇಶ್ ಎಚ್ಚರಿಕೆ ನೀಡಿದರು.




