Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಿಕ್ಕೇರಿ ಗ್ರಾಮದ ವೀರ ಯೋಧ : ದೇಶಕ್ಕಾಗಿ ಪ್ರಾಣ ತ್ಯಾಗ

ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದ ವೀರ ಯೋಧರೊಬ್ಬರು ಜಮ್ಮು-ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೇನೆಯ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಅನಾರೋಗ್ಯದಿಂದ ಶುಕ್ರವಾರ ಬೆಳಗಿನ ಜಾವ 4.35ಗಂಟೆ ಸಮಯದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ವರದಿಯಾಗಿದೆ.

ಕಿಕ್ಕೇರಿ ಗ್ರಾಮದ ಕಿಕ್ಕೇರಮ್ಮನ ದೇವಾಲಯದ ಹಿಂಭಾಗದಲ್ಲಿ ವಾಸವಿರುವ, ಗ್ರಾಮ ಪಂಚಾಯಿತಿ ಸದಸ್ಯರೂ ಆದ ಪ್ರಕಾಶ್ ಮತ್ತು ಭಾರತೀ ಪ್ರಕಾಶ್ ದಂಪತಿಗಳ ಪುತ್ರರಾಗಿರುವ ಜನಾರ್ಧನ್ ಗೌಡ(30) ಮೃತ ಯೋಧರಾಗಿದ್ದಾರೆ.

2014ರಲ್ಲಿ ಭಾರತೀಯ ಸೇನೆಗೆ ಯೋಧನಾಗಿ ಆಯ್ಕೆಯಾಗಿದ್ದ ಜನಾರ್ಧನ್ ಗೌಡ ಜಮ್ಮು-ಕಾಶ್ಮೀರದ ಶ್ರೀನಗರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಳೆದ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ ಹಲವು ದಿನಗಳಿಂದ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಜನಾರ್ಧನ್ ಗೌಡ ಅವರಿಗೆ ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಡದ ಕಮಾಂಡರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರವನ್ನು ಸಹೋದರ ಮಹೇಂದ್ರ ಅವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಚಂಡಿಗಡ ಆಸ್ಪತ್ರೆಗೆ ಹೋಗಿದ್ದು ಸಹೋದರನ ಆರೈಕೆಯಲ್ಲಿ ನಿರತರಾಗಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಧ ಜನಾರ್ಧನ್ ಗೌಡ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮೃತ ಯೋಧನ ಪೋಷಕರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದಾಗ ಯೋಧ ಜನಾರ್ದನ್ ಗೌಡ ದೇಶಕ್ಕಾಗಿ ಹುತಾತ್ಮರಾಗಿರುವ ಬಗ್ಗೆ ಮಾಹಿತಿ ಧೃಡಪಟ್ಟಿರುತ್ತದೆ.

ಕಳೆದ 9ವರ್ಷಗಳಿಂದ ಜಮ್ಮು- ಕಾಶ್ಮೀಯದ ಭಾರತ- ಪಾಕಿಸ್ತಾನ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೀರಯೋಧ ಜನಾರ್ಧನ್ ಗೌಡ ಕಳೆದ 3ತಿಂಗಳ ಹಿಂದಷ್ಟೇ ಹುಟ್ಟೂರು ಕಿಕ್ಕೇರಿ ಗ್ರಾಮಕ್ಕೆ ಬೇಟಿ ನೀಡಿ ಸೇವೆ ವಾಪಸ್ಸಾಗಿದ್ದರು. ಗೆಳೆಯರು ಈತನಿಗೆ ಪ್ರೀತಿಯಿಂದ ಜಾನು ಎಂದು ಕರೆಯುತ್ತಿದ್ದರು. 2019ರಲ್ಲಿ ರಂಜಿತಾ ಅವರೊಂದಿಗೆ ವಿವಾಹವಾಗಿದ್ದು ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗು ಇರುತ್ತದೆ.

ಮೃತ ದೇಹವನ್ನು ಸೇನೆಯ ವಿಮಾನದ ಮೂಲಕ ಶನಿವಾರ ಬೆಳಿಗ್ಗೆ 8ಗಂಟೆಗೆ ಚಂಡಿಗಡದಿಂದ ಬೆಂಗಳೂರಿಗೆ ಏರ್ ಲಿಪ್ಟ್ ಮಾಡಲಾಗುತ್ತದೆ. ಬೆಂಗಳೂರಿನಿಂದ 11ಗಂಟೆಗೆ ಆರ್ಮಿ ಆಂಬುಲೆನ್ಸ್ ಮೂಲಕ ಹೊರಟು ಮಧ್ಯಾಹ್ನ ಸುಮಾರು 2.30ರಿಂದ 3ಗಂಟೆಯ ವೇಳೆಗೆ ಕಿಕ್ಕೇರಿಗೆ ಯೋಧನ ಮೃತ ದೇಹವನ್ನು ತರಲಾಗುತ್ತದೆ.
ಕಿಕ್ಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ದೇಶಾಭಿಮಾನಿಗಳಿಗೆ ಮೃತ ದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ನಂತರ ತಾಲ್ಲೂಕು ಆಡಳಿತ ಹಾಗೂ ಸೇನೆ, ಪೋಲಿಸ್ ಇಲಾಖೆಯ ಸರ್ಕಾರಿ ಗೌರವದೊಂದಿಗೆ ಕುಟುಂಬದವರು‌ ನಿರ್ಧರಿಸುವ ಸ್ಥಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ತಾಲ್ಲೂಕು ಕಚೇರಿಯ ಮೂಲಗಳು ತಿಳಿಸಿವೆ.

ಮೃತ ಯೋಧ ಜನಾರ್ಧನ್ ಗೌಡ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕರಾದ ಎಚ್.ಟಿ.ಮಂಜು, ಸಿ.ಎನ್.ಬಾಲಕೃಷ್ಣ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು, ಕೆ.ಎಸ್.ಪ್ರಭಾಕರ್, ಕಿಕ್ಕೇರಿ ಸುರೇಶ್, ಚೋಳೇನಹಳ್ಳಿ ಪುಟ್ಡಸ್ವಾಮೀಗೌಡ, ಬಿ.ಎಂ.ಕಿರಣ್, ಡಾಲು ರವಿ, ವಿಜಯ್ ರಾಮೇಗೌಡ, ಆರ್.ಟಿ.ಓ‌ಮಲ್ಲಿಕಾರ್ಜುನ್, ಎಸ್.ಅಂಬರೀಶ್ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಯೋಧ ಜನಾರ್ಧನ್ ಗೌಡ ಅವರ ಅಕಾಲಿಕ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ಆತ್ಮೀಯ ಸ್ಮೇಹಿತರಾದ ಎಲ್.ಎಸ್.ಧರ್ಮಪ್ಪ ಅವರು ಜಾನು ಅವರು ಊರಿಗೆ ಬಂದಾಗ ಯಾವಾಗಲೂ ದೇಶದ ಬಗ್ಗೆಯೇ ಚಿಂತಿಸುತ್ತಿದ್ದರು.

ರಜೆಯನ್ನು ವ್ಯರ್ಥ ಮಾಡದೇ ಕರ್ತವ್ಯಕ್ಕೆ ಬೇಗ ಹೋಗುವ ಬಗ್ಗೆ ಮಾತನಾಡುತ್ತಿದ್ದರು. ದೇಶಾಭಿಮಾನ ಹೊಂದಿದ್ದ ಜನಾರ್ಧನ್ ಗೌಡ ಅವರು ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿ , ಗುಣಮುಖರಾಗದೇ ಭಾರತಾಂಭೆಯ ಪಾದಕ್ಕೆ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ. ಗುಣಮುಖರಾಗಿ ಕರ್ತವ್ಯಕ್ಕೆ ಮರಳುವ ಮಹಾದಾಸೆಯನ್ನು ಹೊಂದಿದ್ದ ನಮ್ಮ ಪ್ರೀತಿಯ ಜಾನು ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿರುವುದು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿಗೆ ಹೆಮ್ಮೆಯ ವಿಚಾರವಾದರೂ, ಆತನ ಅಗಲಿಕೆ ಅತ್ಯಂತ ನೋವುತರುತ್ತಿದೆ.
ಎಲ್.ಎಸ್.ಧರ್ಮಪ್ಪ, ಶಿಕ್ಷಕರು, ಕೆ.ಆರ್.ಪೇಟೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!