Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಕಾರ್ಯಾರಂಭ | ಪ್ರತಿನಿತ್ಯ 3,000 ಟನ್ ಕಬ್ಬು ನುರಿಸುವ ಕಾರ್ಯ – ಸಚಿವ ಶಿವಾನಂದ ಎಸ್. ಪಾಟೀಲ್

ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಪ್ರತಿ ದಿನ 3 ಸಾವಿರ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್ ಪಾಟೀಲ್ ಅವರು ತಿಳಿಸಿದರು.

ಮಂಡ್ಯನಗರದ ಮೈಷುಗರ್ ಕಾರ್ಖಾನೆಯ 2023-24 ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಕೆಲವು ದಿನ ಟರ್ಬೈನ್ ಸಮಸ್ಯೆಯಿಂದ ತಡವಾಗಿದೆ. ಇಂದು, ನಾಳೆ 1500 ರಿಂದ 2000 ಟನ್ ಕಬ್ಬು  ನುರಿಸಲಾಗುವುದು. ತದನಂತರ  ಮೂರು ಸಾವಿರ ಟನ್ ನಿಂದ ಐದು ಸಾವಿರ ಟನ್ ವರೆಗೂ ಕಬ್ಬು ನುರಿಯುವ ಕೆಲಸ ನಡೆಯಲಿದೆ ಎಂದರು.

ರೈತರಿಗೆ ಎಫ್ ಆರ್ ಪಿ ಪ್ರಕಾರ ದರ ನೀಡಿ ಕಬ್ಬು ಖರೀದಿಸಲಾಗುವುದು. ಕಳೆದ ಬಾರಿ ಕಡಿಮೆ ರಿಕವರಿ ಇದ್ದರೂ ರೈತರಿಗೆ 2800 ರೂ. ನೀಡಲಾಗಿದೆ. ಪ್ರಸಕ್ತ ಹಂಗಾಮಿನಲ್ಲಿ 3 ಲಕ್ಷ ಟನ್  ಕಬ್ಬು ನುರಿಸುವ ಗುರಿ ಇದೆ. ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವಂತೆ ಮನವಿ ಮಾಡಿದರು.

ಜಾಹೀರಾತು

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಸರ್ಕಾರದ ಬೆಂಬಲದಿಂದ ಕಾರ್ಖಾನೆ ಪ್ರಾರಂಭವಾಗಿದೆ. ಕಬ್ಬು ಅರೆಯುವ ಕಾರ್ಯ ಹೆಚ್ಚು ನಡೆಯುತ್ತದೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ಉನ್ನತ ಮಟ್ಟದಲ್ಲಿ ನಡೆಯಲಿದೆ ಎಂದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಕಬ್ಬು ಅರೆಯುವಿಕೆ ಪ್ರಾರಂಭವಾಗಿರುವುದಕ್ಕೆ ನನ್ನ ಸ್ವಾಗತವಿದೆ , ಮೈಷುಗರ್ ನಲ್ಲಿ ಕೆಲವು ಸಮಸ್ಯೆ ಮತ್ತು ಗೊಂದಲವಿದೆ. ಅವುಗಳನ್ನ ಸರಿಪಡಿಸಿಕೊಂಡು ಹೋದ್ರೆ ಮುಂದೆ ಯಾವುದೇ ಸಮಸ್ಯೆ ಬರಲ್ಲ. 40 ಕೋಟಿ ಕರೆಂಟ್ ಬಿಲ್ ಬಾಕಿಯ ಬಗ್ಗೆ ಕೇಂದ್ರದ ಇಂಧನ ಸಚಿವರಿಗೆ ಪತ್ರ ಬರೆದು ಮನ್ನ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕರಾದ ಗಣಿಗ ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಕಾರ್ಖಾನೆ ತಾಂತ್ರಿಕ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಸಾಹೇಬ್ ಸೇರಿದಂತೆ ರೈತ ನಾಯಕರು ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!