Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಅಕ್ಕಿಗಿರಣಿ ಮಾಲೀಕರಿಗೆ ಬಾಕಿ ಇರುವ ₹ 25 ಕೋಟಿ ಪಾವತಿಸಲು ಆಗ್ರಹ

ಭತ್ತವನ್ನು ಹಲ್ಲಿಂಗ್‌ ಮಾಡಿ ಸರ್ಕಾರಕ್ಕೆ ಸರಬರಾಜು ಮಾಡಿರುವ ಹಲ್ಲಿಂಗ್ ಶುಲ್ಕದ ಬಾಕಿ ₹25 ಕೋಟಿ ರೂಪಾಯಿಗಳನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಲ್ಲಿರುವ 11 ಜಿಲ್ಲೆಗಳ ಸುಮಾರು 2 ಸಾವಿರ ಅಕ್ಕಿಗಿರಣಿ ಮಾಲೀಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಂಡ್ಯ ಜಿಲ್ಲಾ ಅಕ್ಕಿಗಿರಣಿ ‌ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ಆಗ್ರಹಿಸಿದರು.

ಕೆ.ಆರ್.ಪೇಟೆ ಪಟ್ಟಣದ ಶ್ರೀಲಕ್ಷ್ಮೀ ರೈಸ್ ಮಿಲ್ ಆವರಣದಲ್ಲಿ ನಡೆದ ತಾಲ್ಲೂಕು ಅಕ್ಕಿಗಿರಣಿ ಮಾಲೀಕರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಕಿಗಿರಣಿಗಳು ರೈತರಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಅಕ್ಕಿಗಿರಣಿಯ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ರೈತರಿಗೆ ಸೇವಾಭಾವನೆಯಿಂದ  ಭತ್ತ ಹಲ್ಲಿಂಗ್ ಮಾಡಿಕೊಡುವ ಮೂಲಕ ರೈತರಿಗೆ ಹಾಗೂ ಸಾರ್ವಜನಿಕರಿಗೆ  ಅನುಕೂಲ ಮಾಡಿಕೊಡುತ್ತಿದ್ದೇವೆ. ಹಾಗಾಗಿ ಅಕ್ಕಿಗಿರಣಿ ಉದ್ಯಮವನ್ನು  ಕೃಷಿ ಆಧಾರಿತ ಉದ್ಯಮ ಎಂದು ಪರಿಗಣಿಸಿ  ರೈಸ್ ಮಿಲ್ ಗಳಿಗೆ ವಿದ್ಯುತ್ ಬಿಲ್ ನಲ್ಲಿ ಕನಿಷ್ಠ ನಿಗಧಿತ ಶುಲ್ಕವು ಹೆಚ್ಚು ಇರುತ್ತದೆ. ಈ  ದರವನ್ನು ಶೇ.50ರಷ್ಟು ಇಳಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಾಹೀರಾತು

ರೈಸ್ ಮಿಲ್ ಗಳನ್ನು ಎಪಿಎಂಸಿ ಕಾಯಿದೆಯಿಂದ ಅಕ್ಕಿಗಿರಣಿಗಳನ್ನು ಹೊರಗಿಡಬೇಕು. ಎಂ.ಎಸ್.ಪಿ ಪದ್ದತಿಯಲ್ಲಿ  ರೈಸ್ ಮಿಲ್ ಮಾಲೀಕರ ಮೂಲಕ ಕಳೆದೆರಡು ಸಾಲಿನಲ್ಲಿ 23 ಲಕ್ಷ ಟನ್ ಭತ್ತ ಖರೀದಿ‌ಸಿ,  ಹಲ್ಲಿಂಗ್ ಮಾಡಿ ನಂತರ ಅಕ್ಕಿಯನ್ನು ಸರ್ಕಾರಕ್ಕೆ ನೀಡಲಾಗಿತ್ತು. ಆದರೆ ಅಧಿಕಾರಿಗಳ ಚಿತಾವಣೆಯಿಂದ ರೈಸ್ ಮಿಲ್ ಗಳಿಗೆ ಹೊಣೆ ನೀಡದೇ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಅಧಿಕಾರಿಗಳೇ ಖರೀದಿ ಮಾಡಿದ್ದು  ಕೇವಲ 2 ಲಕ್ಷ ಟನ್ ಭತ್ತವನ್ನು ಮಾತ್ರ. ಭತ್ತ ಕಟಾವು ಸಮಯವು ನಮ್ಮ ರೈಸ್ ಮಿಲ್ ಮಾಲೀಕರಿಗೆ ತಿಳಿದಿರುವ ಕಾರಣ ರೈತರಿಂದ ಸಕಾಲದಲ್ಲಿ ಖರೀದಿ‌ ಮಾಡಿ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆಗೆ ಸಾಕಾಗುವಷ್ಟು‌ ಅಕ್ಕಿಯನ್ನು ಕೇವಲ 34 ರೂಗಳಿಗೆ ಕೊಡಲು ನಮ್ಮ ಕರ್ನಾಟಕ ರಾಜ್ಯ ಅಕ್ಕಿಗಿರಣಿ‌ ಮಾಲೀಕರ ಸಂಘ ಸಿದ್ದವಿದೆ ಎಂದರು.

ರಾಜ್ಯ ಸರ್ಕಾರದ ಅಧಿಕಾರಿಗಳ ಚಿತಾವಣೆಯಿಂದ ಸರ್ಕಾರವು ಬೇರೆ ರಾಜ್ಯಗಳಿಂದ 34ರೂಗಳಿಗೆ ಖರೀದಿಸಿ,  ಸಾರಿಗೆ ವೆಚ್ಚ ಎರಡೂವರೆ ರೂಪಾಯಿ ಸೇರಿ ಒಟ್ಟು  37ರೂಪಾಯಿಗಳ ವೆಚ್ಚ ಮಾಡಲು ಮುಂದಾಗಿದೆ. ಇದರಿಂದ ಸರ್ಕಾರಕ್ಕೂ ಹೊರೆಯಾಗುತ್ತದೆ. ಇಲ್ಲಿಯೇ ರೈಸ್ ಮಿಲ್ ಮಾಲೀಕರ ಸಂಘದ ಮೂಲಕ ಖರೀದಿ ಪ್ರಕ್ರಿಯೆ ‌ಮಾಡಿದರೆ  ನಮ್ಮ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಕ್ಕಿಗಿರಣಿ ‌ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ವೇಣುಗೋಪಾಲ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ಕ್ವಿಂಟಾಲ್ ಹಲ್ಲಿಂಗ್ ವೆಚ್ಚವನ್ನು ₹150 ರೂಗಳಿಗೆ ಹೆಚ್ಚಿಸಲು ಜಿಲ್ಲಾ ಸಂಘ ಮತ್ತು ತಾಲ್ಲೂಕು ಸಂಘದ ರೈಸ್ ಮಿಲ್ ಮಾಲೀಕರು ಒಮ್ಮತದ ತೀರ್ಮಾನ ಕೈಗೊಂಡರು.

ಸಭೆಯಲ್ಲಿ ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ  ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಖಜಾಂಚಿ ಉದಯಕುಮಾರ್, ಮದ್ದೂರು ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರೇಗೌಡ, ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷ ಆತ್ಮಾನಂದ, ನಿರಂಜನ್, ಶಂಕರಣ್ಣ, ಕಪನೀಗೌಡ,  ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಮಾಕಂರ್ಡೇಯ, ಚಿಕ್ಕಣ್ಣಗೌಡ,  ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಸೂದ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೇಣುಗೋಪಾಲ್, ಉಪಾಧ್ಯಕ್ಷ ವಾಸು, ಕಾರ್ಯದರ್ಶಿ ಶ್ಯಾಂಪ್ರಸಾದ್, ಖಜಾಂಚಿ ದೀಪಕ್, ಗೌರವಾಧ್ಯಕ್ಷ ಕಿಕ್ಕೇರಿ ಶ್ಯಾಮಣ್ಣ, ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ವಿ.ಅರುಣ್ ಕುಮಾರ್, ಕೆ.ಎಸ್. ಹರಪ್ರಸಾದ್, ಉದಯಕುಮಾರ್, ರಮೇಶ್, ಅಮ್ಜದ್  ಸೇರಿದಂತೆ ತಾಲ್ಲೂಕಿನ ಎಲ್ಲಾ ರೈಸ್ ಮಿಲ್ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!