Friday, September 20, 2024

ಪ್ರಾಯೋಗಿಕ ಆವೃತ್ತಿ

ನೂತನ ಶಾಸಕರಿಗೆ ಅನುದಾನ ತರುವ ಸಾಮರ್ಥ್ಯವಿಲ್ಲ – ರವೀಂದ್ರ ಶ್ರೀಕಂಠಯ್ಯ

ಚುನಾವಣೆಯಲ್ಲಿ ಜಿಲ್ಲೆಯಿಂದ ಗೆದ್ದು ಬಂದಿರುವ ಕಾಂಗ್ರೆಸ್ ಶಾಸಕರಿಗೆ ಅಭಿವೃದ್ದಿಗೆ ಅಗತ್ಯವಾದ ಅನುದಾನ ತರುವ ಸಾಮರ್ಥ್ಯವಿಲ್ಲ, ಅವರಿಗೆ ಅಭಿವೃದ್ದಿಯ ಬಗ್ಗೆ ಗಮನವಿಲ್ಲ ಹಾಗೂ ಮತದಾರ ಋಣ ತೀರಿಸುವ ಯೋಗ್ಯತೆ ಮತ್ತು ತಾಕತ್ತು ಇಲ್ಲವೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಇಂದಿನ ಶಾಸಕರ ಬಗ್ಗೆ ಅಪಾರ ಭರವಸೆ ಇಟ್ಟು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಆದರೆ ತಮ್ಮದೇ ಸರ್ಕಾರದ ಪ್ರಥಮ ಬಜೆಟ್ ನಲ್ಲಿ ಯಾವೊಂದು ಯೋಜನೆ ಪ್ರಕಟಿಸದೇ, ವಿಶೇಷ ಅನುದಾನ ತರದೇ, ಮತದಾರರ ನಂಬಿಕೆಗೆ ದ್ರೋಹವೆಸಗಿದ್ದಾರೆಂದು ಅತೃಪ್ತಿ ಹೊರ ಹಾಕಿದರು.

ಮಂಡ್ಯ ಜಿಲ್ಲೆಯಿಂದ ಘಟಾನುಘಟಿ ನಾಯಕರು ಆಯ್ಕೆಯಾಗಿದ್ದಾರೆ. ಅವರಿಂದ ಹತ್ತಾರು ಅಭಿವೃದ್ದಿ ಸಾಧ್ಯವೆಂದು ನಿರೀಕ್ಷಿಸಿದ ಯಾವೊಂದು ನಿರೀಕ್ಷೆಗಳು ನಿಜವಾಗಿಲ್ಲ, ಟ್ರಾಮಾ ಕೇರ್ ಸೆಂಟರ್ ಸಹ ಮೈಸೂರು ಜಿಲ್ಲೆಗೆ ಹಸ್ತಾಂತರವಾಗಿದ್ದು, ಈ ಬಗ್ಗೆ ಮೌನ ತಾಳಿರುವ ಶಾಸಕರಿಗೆ ನಾಚಿಕೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ನೂತನ ಸರ್ಕಾರದ ಧೋರಣೆ ಜಿಲ್ಲೆಯ ಜನರಿಗೆ ಅರ್ಥವಾಗಿದ್ದು, ಈ ಅನ್ಯಾಯದ ವಿರುದ್ದ ಬೀದಿಗಿಳಿಯುವಂತೆ ಜನ ನಮ್ಮನ್ನು ಹುರಿದುಂಬಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಕಾರ್ಯಗತವಾಗುತ್ತಿರುವ ಯೋಜಗೆಗಳಿಗೆ ತಡೆಯೊಡ್ಡುವುದು ಸಮಂಜಸವೇ ಎಂದು ಹರಿಹಾಯ್ದರು.

ಮಾಜಿ ಶಾಸಕ ಕೆ.ಸುರೇಶ್ ಗೌಡ ಮಾತನಾಡಿ, ಕೆಎಸ್ಆರ್’ಟಿಸಿ ಜಗದೀಶ್ ಆತ್ಮಹತ್ಯೆ ಪ್ರಯತ್ನ ಪ್ರಕರಣದಲ್ಲಿ ನಾನು ಮತ್ತು ನನ್ನ ಕುಟುಂಬ ಸದಸ್ಯರ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿರುವ ಸಚಿವರ ಜಾಣ ನಡೆಯ ಅರ್ಥಹೀನವಾಗಿದ್ದು, ಸದರಿ ಚಾಲಕನ ವರ್ಗಾವಣೆ ವಿವಾರವಾಗಿ ಪತ್ರ ನೀಡಿದ್ದ ಸಚಿವರು ಪ್ರಕರಣದ ನಂತರ ಪತ್ರ ವಾಪಸ್ ಪಡೆದಿದ್ದಾರೆ, ಇದು ಇವರ ಧೋರಣೆಯನ್ನು ಬಹಿರಂಗಗೊಳಿಸುತ್ತದೆ ಎಂದರು.

ನಮ್ಮ ಅಧಿಕಾರಾವಧಿಯಲ್ಲಿ ಮಂಜೂರಾಗಿ ಪ್ರಗತಿಯಲ್ಲಿರುವ ಕದಬಹಳ್ಳಿ ಏತ ನೀರಾವರಿ, ಎಲೆಕೊಪ್ಪ ಕೆರೆ ಅಭಿವೃದ್ದಿ, ಭೂ ಸಮುದ್ರ ಸೇತುವೆ ಕಾಮಗಾರಿ ಹಾಗೂ ಬಹುನಿರೀಕ್ಷಿತ ಜಲಧಾರೆ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆ ಏನು ? ಕೇಳಿರುವ ಹಣ ಎಷ್ಟು ಪರ್ಸೆಂಟ್ ? ಎಂದು ಪ್ರಶ್ನಿಸಿದರು

ಸಚಿವರ ಸಹೋದರನ ಪುತ್ರ ನಡೆಸುತ್ತಿರುವ ಗಣಿಗಾರಿಕೆಯಿಂದ ಸರ್ಕಾರ ಎಷ್ಟು ರಾಜಧನ ಪಾವತಿಸಲಾಗಿದೆ ಹಾಗೂ ಸ್ವ ಗ್ರಾಮದ ರೈತರ ಜಮೀನು ಸರ್ವೆಗೆ ಮುಂದಾಗಿರುವ ಕ್ರಮ ಸರಿಯಲ್ಲ, ತಾಲ್ಲೂಕಿನಲ್ಲಿ ಸಚಿವರ ಕುಟುಂಬಸ್ಥರೇ ಕ್ಯಾಬಿನೆಟ್ ರಚಿಸಿಕೊಂಡಿದ್ದು, ಡಿಸಿಎಂ, ಹೋಮ್ ಹೆಸರಿನಲ್ಲಿ ವಸೂಲಿಗಿಳಿದಿರುವುದು ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಗುತ್ತಿಗೆ ನೌಕರರನ್ನು ತೆಗೆದು ಹಾಕುವ ಕೆಲಸಕ್ಕೆ ಜನಪ್ರತಿನಿಧಿಗಳು ಮುಂದಾಗಿದ್ದಾರೆ, ಇಂತಹ ದುರ್ನಡತೆ ವಿರುದ್ಧ ಹೋರಾಟ ಮಾಡುವ ದಿನಗಳು ದೂರವಿಲ್ಲ, ಕೆ.ಆರ್.ಎಸ್. ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಮಾಡಿರುವ ತಪ್ಪೇನು ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಗೋ‍ಷ್ಠಿಯಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!