Friday, September 20, 2024

ಪ್ರಾಯೋಗಿಕ ಆವೃತ್ತಿ

ಶರಣರ ಹೆಜ್ಜೆಗಳಲ್ಲಿ ‘ನೆರೇಟಿವಿಟಿ’ಯ ಪಾಠ…

✍️ ಗಿರೀಶ್ ತಾಳಿಕಟ್ಟೆ

‘ಬಿಜೆಪಿಯವರು ಏನೇ ಮಾಡಿದರೂ, ಅದನ್ನು ವಿರೋಧಿಸುವುದು ನಿಮಗೊಂಥರಾ ಗೀಳಾಗಿ ಹೋಗಿದೆಯಲ್ವಾ? ಇಷ್ಟು ದಿನ ಸಮಾನತೆ ಬೇಕು ಅಂತಿದ್ದೋರು ನೀವೇ, ಈಗ ಬಿಜೆಪಿಯವರು ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವೆವು ಎಂದು ಹೊರಟಾಗ ಅದನ್ನು ವಿರೋಧಿಸುತ್ತಿರೋರೂ ನೀವೇ! ನಿಮ್ಮ ಸಮಸ್ಯೆ ಏನು ಅಂತಲೇ ನನಗೆ ಅರ್ಥವಾಗುತ್ತಿಲ್ಲ’ ಗೆಳೆಯ ಹೀಗೆ ಆರೋಪಿಸಿದಾಗ, ಕ್ಷಣಕಾಲ ನಾನು ಕೂಡಾ ತಬ್ಬಿಬ್ಬಾದೆ. ಅರೆ, ಎಂಥಾ ಗಂಭೀರ ಚರ್ಚೆಯನ್ನು ಅಷ್ಟೆ ಸಿಂಪಲ್ ನೆರೇಟಿವ್‌ನಿಂದ ಒಡೆದು ಹಾಕುತ್ತಿದ್ದಾರಲ್ವಾ?

ಜನ ತಮ್ಮದೇ ಸಂಕಟ, ತಮ್ಮದೇ ಸಂದಿಗ್ಧತೆಗಳಲ್ಲಿ ಸಿಲುಕಿ ಹಾಕಿಕೊಂಡಿರುತ್ತಾರೆ. ಅವರಿಗೆ ಆ ಕ್ಷಣದ ಬದುಕಷ್ಟೇ ಮುಖ್ಯ. ಅದರ ನಡುವೆ ರಾಜಕಾರಣದ ಬಗ್ಗೆಯೋ, ಸಮಾಜದ ಬಗ್ಗೆಯೋ ವ್ಯವಹರಿಸುವಷ್ಟು ಅತ್ಯಲ್ಪ ಸಮಯಾವಕಾಶ ಸಿಕ್ಕಾಗ ಸುದೀರ್ಘ ಮುನ್ನೋಟ ಅಥವಾ ದೂರಕಾಲಿಕ ಪರಿಣಾಮಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಮುಂದಾಗುವುದಿಲ್ಲ. ತುಂಬಾ ಸುಪರ್‌ಫೀಶಿಯಲ್ ನೆರೆಟೀವ್ ಧಾಟಿಗಳನ್ನು ತಮ್ಮ ಧ್ವನಿಯಾಗಿಸಿಕೊಳ್ಳುತ್ತಾರೆ. ಅಂತಹ ನೆರೆಟೀವ್ ಕೂಡಾ ಅವರ ಸ್ವಂತಿಕೆಯಾಗಿರುವುದಿಲ್ಲ. ಅವರ ಯೋಚನೆಯ ತರಂಗಕ್ಕೆ ತಕ್ಕಂತೆ, ತಮ್ಮ ಗೂಢ ಉದ್ದೇಶಗಳನ್ನು ತುರುಕಿದ ಈ ಬಗೆಯ ನೆರೇಟಿವ್‌ಗಳನ್ನು ವ್ಯವಸ್ಥಿತವಾಗಿ ಹುಟ್ಟು ಹಾಕಲಾಗುತ್ತಿದೆ. ಅದನ್ನು ನಾವು ಐಟಿ ಸೆಲ್ ಹೆಸರಿನಿಂದ ಕರೆಯಬಹುದು, ಗೋದಿ ಮೀಡಿಯಾ ಅಂತ ಮೂದಲಿಸಬಹುದು, ‘ಪೇಯ್ಡ್ ಭಕ್ತಗಣ’ ಅಂತ ಬೇಕಾದರೂ ಉಡಾಫೆಯಾಗಿ ನೋಡಬಹುದು, ಅಥವಾ ವಾಟ್ಸಾಪ್‌ ಯೂನಿವರ್ಸಿಟಿ ಅಂತ ಲೇವಡಿ ಮಾಡಬಹುದು. ಆದರೆ ಅವೆಲ್ಲ ತುಂಬಾ ಪರಿಣಾಮಕಾರಿಯಾಗಿ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆ.

ಕರ್ನಾಟಕದ ಇತ್ತೀಚಿನ ಚುನಾವಣೆಯ ಫಲಿತಾಂಶವನ್ನೆ ನಾವು ವಿಶ್ಲೇಷಿಸಿದಾಗ, ಸಮಾಜವನ್ನು ಜಾತಿ-ಧರ್ಮಗಳ ಆಧಾರದಲ್ಲಿ ವಿಘಟಿಸುವ ಶಕ್ತಿಗಳಿಗೆ ಕೊಂಚ ಹಿನ್ನಡೆಯಾಗಿರುವುದು ಸತ್ಯವಾದರೂ, ವಾಸ್ತವದಲ್ಲಿ ‘ಜನರ ಈ ಕ್ಷಣದ ಬದುಕಿನ ತುಡಿತ’ ಮತ್ತು ’ಸುಪರ್‌ಫೀಶಿಯಲ್ ನೆರೇಟಿವ್ ಧಾಟಿ’ಗಳ ನಡುವಿನ ಸಂಘರ್ಷದಲ್ಲಿ ಮೊದಲನೆಯದ್ದು ಮೇಲುಗೈ ಸಾಧಿಸಿದೆಯಷ್ಟೆ. ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಆಯ್ಕೆಯ ಒಂದು ಗುಣಾತ್ಮಕ ಫಲಿತಾಂಶವಂತೂ ಇದಲ್ಲ. ಈ ಥರಹದ ‘ಸೋಲು’ ಗೆಲುವಾಗಿ ರೂಪಾಂತರವಾಗಲು, ಅಥವಾ ಗೆಲುವು ಸೋಲಾಗಿ ಪರ್ಯವಸನಗೊಳ್ಳಲು ಹೆಚ್ಚೇನು ಶ್ರಮ ಬೇಕಿಲ್ಲ ಹಾಗೂ ಅದಕ್ಕೆ ಸುದೀರ್ಘ ಕಾಲದ ಅಗತ್ಯವೂ ಇಲ್ಲ. ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯ ಹೊತ್ತಿಗೆ ಆ ಕೆಲಸವನ್ನು ಸಾಧಿಸುವುದಕ್ಕಾಗಿಯೇ ಬಲಪಂಥೀಯ ಪಾಳೆಯದಿಂದ ಜನರನ್ನು ಸುಲಭವಾಗಿ ಆಕರ್ಷಿಸಬಲ್ಲ ‘ಸುಪರ್‌ಫೀಶಿಯಲ್ ನೆರೇಟಿವ್’ಗಳನ್ನು ಪುಂಖಾನುಪುಂಖವಾಗಿ ಸೃಷ್ಟಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ; ಜನ ಸೋಮಾರಿಗಳಾಗುತ್ತಾರೆ; ಉಚಿತ ಬಸ್ಸಿಗಾಗಿ ಹೆಂಗಸರು ಬಜಾರಿಯರಾಗುತ್ತಾರೆ ಎಂಬಿತ್ಯಾದಿ ನೆರೇಟಿವ್‌ಗಳನ್ನು ಮುಖ್ಯವಾಹಿನಿ ಮೀಡಿಯಾಗಳ ಮೂಲಕವೇ ಜನರ ತಲೆಯೊಳಗೆ ತುಂಬಲಾಗುತ್ತಿದೆ. ನನ್ನ ಗೆಳೆಯ ಸಮಾನ ನಾಗರಿಕ ಸಂಹಿತೆಯ ಕುರಿತಂತೆ ಜಾತ್ಯತೀತರು, ಪ್ರಗತಿಪರರ ಮೇಲೆ ನಡೆಸಿದ ದಾಳಿ ಕೂಡಾ ಅಂತದ್ದೇ ಒಂದು ನೆರೇಟಿವ್.

ಖಂಡಿತವಾಗಿಯೂ, ಈ ಬಗೆಯ ನೆರೇಟಿವ್‌ಗಳಿಗೆ ನಾವು ವಸ್ತುನಿಷ್ಠ, ಅಧ್ಯಯನಯುಕ್ತ ವಿಶ್ಲೇಷಣೆಗಳ ಮೂಲಕವೇ ಉತ್ತರಿಸಬೇಕಾಗುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ವಸ್ತುನಿಷ್ಠತೆ ಮತ್ತು ಅಧ್ಯಯನಶೀಲತೆಗಳು, ನಮ್ಮ ಪ್ರತ್ಯುತ್ತರವನ್ನು ತುಂಬಾ ಗಂಭೀರಗೊಳಿಸಿಬಿಟ್ಟರೆ, ಅವು ಜನರ ಮನಸ್ಸಿನಾಳಕ್ಕೆ ಇಳಿಯುವಲ್ಲಿ ಸೋತುಹೋಗುತ್ತವೆ. ನನಗನ್ನಿಸಿದ ಮಟ್ಟಿಗೆ ಈ ಕಾಲದ ಚಿಂತಕ ವಲಯ ಎದುರಿಸುತ್ತಿರುವ ಬಲು ದೊಡ್ಡ ಸಮಸ್ಯೆ ಇದು. ಅವರು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುತ್ತಾರೆ, ಪರಿಣಾಮಗಳ ಬಗ್ಗೆ ಸ್ಪಷ್ಟ ಮುನ್ನೋಟ ಹೊಂದಿರುತ್ತಾರೆ, ಅದನ್ನೆಲ್ಲ ಅಭಿವ್ಯಕ್ತಿಸುವ ವಿದ್ವತ್ತೂ ಅವರಿಗಿದೆ. ಆದರೆ ಇದಿಷ್ಟೂ ಸರಕನ್ನು, ‘ತಮ್ಮದೇ ಸಂಕಟ-ಸಂದಿಗ್ಧತೆಗಳಲ್ಲಿ ಕಳೆದುಹೋಗಿರುವ ಜನರಿಗೆ ತಲುಪಿಸಲು ಬೇಕಾದ ಸರಳ ಭಾಷೆಯನ್ನು ಆ ವಲಯ ಕಳೆದುಕೊಂಡಿದೆ. ಸರಳ ಭಾಷೆಯೆಂದರೆ, ಪದಗಳ ಸರಳೀಕರಣ ಅಥವಾ ಕಡಿಮೆ ಪದಗಳ ಬಳಕೆ ಅಂತಷ್ಟೇ ಅಲ್ಲ; ಅದೊಂದು ನೆರೇಟಿವ್ ಸ್ಟೈಲ್ ಕೂಡಾ ಹೌದು.

ಹೇಗಿರಬೇಕು ಆ ಶೈಲಿ? ಈ ಪ್ರಶ್ನೆಗೆ ನಾವು ಹೊಸದಾಗಿ ಉತ್ತರ ಕಂಡುಕೊಳ್ಳುವ ಅಗತ್ಯವಿಲ್ಲ. ಇಲ್ಲಿಗೆ ಎಂಟು ಶತಮಾನಗಳ ಹಿಂದೆ, ಇದೇ ಕನ್ನಡದ ನೆಲದಲ್ಲಿ ನಡೆದ ಶರಣರ ವಚನಕ್ರಾಂತಿ, ಈ ನಿಟ್ಟಿನಲ್ಲಿ ನಮಗೆ ಇವತ್ತಿಗೂ ಪಾಠವಾಗುತ್ತದೆ. ಅವರ ತಿಳಿವಳಿಕೆ, ವಿಚಾರದ ಅಧ್ಯಯನ, ಮುನ್ನೋಟ ಮತ್ತು ಸೈದ್ದಾಂತಿಕ ಬದ್ಧತೆ ಇವತ್ತಿನ ನಮ್ಮೆಲ್ಲರಿಗಿಂತಲೂ ಉನ್ನತವಾಗಿತ್ತು. ನಾವು ಇವತ್ತು ಕಣ್ಣಾರೆ ಕಾಣುತ್ತಿರುವ ಆಧುನಿಕ ಜಗತ್ತಿನ ಸಂಸತ್ತಿನ ಪರಿಕಲ್ಪನೆಯನ್ನು ಅವರು ಅಂದೇ ಆಚರಣೆಗೆ ತಂದಿದ್ದಂತವರು; ಶ್ರಮವನ್ನು ತಮ್ಮ ಸೈದ್ಧಾಂತಿಕ ನೆಲೆಗಟ್ಟಾಗಿ ರೂಪಿಸಿಕೊಂಡ ಕಮ್ಯುನಿಷ್ಟ್ ಸಿದ್ದಾಂತಗಳು ಮೈದಳೆಯುವುದಕ್ಕು ನೂರಾರು ವರ್ಷಗಳ ಹಿಂದೆಯೇ ‘ಕಾಯಕ’ವನ್ನು ಕೈಲಾಸದ ಸ್ಥಾನಕ್ಕೆ ಎತ್ತರಿಸಿ, ಸಮಾನತೆಗೆ ಭಾಷ್ಯ ಬರೆದವರು. ಆದರೆ ತಮ್ಮ ಅಷ್ಟೂ ಆಳ ವಿದ್ವತ್ತನ್ನು ಅವರು ಜನರಿಗೆ ತಲುಪಿಸಲು ಬಳಸಿಕೊಂಡದ್ದು ‘ವಚನ’ ಎಂಬ ಸರಳ ಸಂವಹನ ರೂಪವನ್ನು. ತಮ್ಮ ಆ ತಿಳಿವಳಿಕೆಯನ್ನು ‘ಪ್ರವಚನ’ಗಳ ಮೂಲಕ ಜನರಿಗೆ ದಾಟಿಸಲು ಮುಂದಾಗಿದ್ದರೆ, ಶರಣ ಕ್ರಾಂತಿ ಇಷ್ಟು ಯಶಸ್ಸು ಕಾಣುತ್ತಿತ್ತೋ ಇಲ್ಲವೋ? ಅಥವಾ ಎಂಟು ಶತಮಾನಗಳ ನಂತರವೂ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತಿತ್ತೋ ಇಲ್ಲವೋ? ಗೊತ್ತಿಲ್ಲ. ‘ಜ್ಞಾನ’ ಮತ್ತು ‘ವಿಚಾರ’ ಇವೆರೆಡೂ ಸಾಮಾನ್ಯ ಜನರಿಗೆ ತಲುಪಬಾರದೆಂಬ ಹುನ್ನಾರದ ಭಾಗವಾಗಿಯೇ, ಬಹುಸಂಖ್ಯೆಯ ಜನರಾಡುವ ಭಾಷೆಯಲ್ಲದ ಭಾಷೆಯ ಮೂಲಕ ಅವುಗಳನ್ನು ಸೀಮಿತಗೊಳಿಸಿದ್ದ ಕಾಲದಲ್ಲಿ ಆಧ್ಯಾತ್ಮ ಮತ್ತು ಅನುಭಾವಗಳನ್ನು ಜನಭಾಷೆಯ ಮೂಲಕ ಪಸರಿಸಲು ಶರಣರು ಮುಂದಾದದ್ದೇ, ಆ ವಚನ ಕ್ರಾಂತಿಗೆ ಬಹುದೊಡ್ಡ ವಿಸ್ತಾರವನ್ನೂ, ಮನ್ನಣೆಯನ್ನೂ ತಂದುಕೊಟ್ಟಿತು.

ಶೋಷಿತರು ಸಹಾ ತಮ್ಮ ಮೇಲಿನ ಶೋಷಣೆಯನ್ನು ಸಹಜವೆಂಬಂತೆ ಸ್ವೀಕರಿಸಿದ್ದ ಪರಿಸ್ಥಿತಿಯ ನಡುವೆ; ಶೋಷಕರು, ದೇವರು ಮತ್ತು ಧರ್ಮ ಎಂಬ ಅಸ್ತ್ರಗಳನ್ನು ತಮ್ಮ ಶೋಷಣೆಯ ದಾಳವಾಗಿಸಿಕೊಂಡಿದ್ದ ಸಂದರ್ಭದಲ್ಲಿ, ಆ ಪ್ರತಿಕೂಲಗಳನ್ನೆ ಶರಣರು ತಮ್ಮ ಸಂವಹನದ ಮಾಧ್ಯಮವಾಗಿಸಿಕೊಂಡರು. ಉದಾಹರಣೆಗೆ ದೇವರನ್ನು ನಿರಾಕರಣೆ ಮಾಡುವುದರ ಬದಲು, ಗರ್ಭಗುಡಿಯಿಂದಾಚೆಗೆ ತಂದು ಜನರ ಅಂಗೈಗಳಲ್ಲೇ ಪ್ರತಿಷ್ಟಾಪಿಸಿ, ದೇವರು ಮತ್ತು ಮನುಷ್ಯರ ನಡುವಿನ ಮಧ್ಯವರ್ತಿಗಳ ತಂತನ್ನು ತುಂಡರಿಸಿದರು. ಶೋಷಕರನ್ನು ಅಸಹಾಯಕಗೊಳಿಸಿ, ಶೋಷಿತರಲ್ಲಿದ್ದ ಕೀಳರಿಮೆಯ ಜಾಗದಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುವಲ್ಲಿ ಈ ನಡೆ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಅದೇ ರೀತಿ, ‘ದಯವೇ ಧರ್ಮದ ಮೂಲವಯ್ಯ’ ಎಂದ ಬಸವಣ್ಣನವರು ಧರ್ಮಾಚರಣೆಯ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ದೌರ್ಜನ್ಯ ಮತ್ತು ಮೌಢ್ಯಗಳನ್ನು ಪ್ರಶ್ನೆಗೊಳಪಡಿಸಿದರು.

ಶರಣರು ಹೇಳಿದ ವಿಚಾರಗಳು ಎಷ್ಟು ಉದಾತ್ತವಾಗಿದ್ದವೋ, ಅವರು ಬಳಸಿದ ಮಾಧ್ಯಮ ಮತ್ತು ಭಾಷೆ ಅಷ್ಟೇ ಸರಳವಾಗಿದ್ದವು. ಶರಣರ ಈ ಪ್ರಯೋಗ ಒಂದನ್ನಂತೂ ಸಾಬೀತು ಮಾಡುತ್ತದೆ. ನಾವು ಹೇಳುವ ವಿಚಾರ ಎಷ್ಟೇ ಗಂಭೀರದ್ದಾಗಿದ್ದರೂ, ಸಂಕೀರ್ಣತೆಯನ್ನು ಒಳಗೊಂಡಿದ್ದರೂ ಅದನ್ನು ಸರಳವಾಗಿ, ಜನರ ಮನಸಿಗೆ ತಾಕುವಂತೆ, ಹಾಗೆ ತಾಕಿದ್ದನ್ನು ಅವರು ಅಷ್ಟೇ ಸರಳವಾಗಿ ಬೇರೊಬ್ಬರಿಗೆ ದಾಟಿಸುವಂತೆ ಅಭಿವ್ಯಕ್ತಿಸಲು ಸಾಧ್ಯ ಎಂಬುದನ್ನು ಶರಣರು ಹನ್ನೆರಡನೇ ಶತಮಾನದಲ್ಲೇ ಅರ್ಥ ಮಾಡಿಸಿದ್ದಾರೆ. ವಿಚಾರದ ವಿಸ್ತರಣೆಯಲ್ಲಿ ನಾವು ಹೇಳುವುದಷ್ಟೇ ಮುಖ್ಯವಲ್ಲ; ಅಥವಾ ಜನರು ಕೇಳಿಸಿಕೊಳ್ಳುವುದಷ್ಟೇ ಮುಖ್ಯವಲ್ಲ. ತಾವು ಕೇಳಿಸಿಕೊಂಡಿದ್ದನ್ನು ಜನರು ಬೇರೆಯವರ ಮುಂದೆ ಹೇಳುವಷ್ಟು ಸರಳವಾಗಿ ಅವರಿಗೆ ಅರ್ಥವಾಗಬೇಕಾಗುತ್ತದೆ. ಅದನ್ನೇ ನಾನು ನೆರೇಟಿವ್ ಸ್ಟೈಲ್ ಅಂತ ಕರೆದದ್ದು.

ಹಾಗಂತ ಗಂಭೀರ ಧಾಟಿಯ ಬರಹಗಳು, ಭಾಷಣ, ಸಂವಾದಗಳು ಈ ಕಾಲಘಟ್ಟದಲ್ಲಿ ತಮ್ಮ ವ್ಯಾಲಿಡಿಟಿಯನ್ನು ಕಳೆದುಕೊಂಡಿವೆ ಅಂತ ನಾನು ಹೇಳುತ್ತಿಲ್ಲ. ಯಾಕೆಂದರೆ ನಾನು ಹೇಳಿದ ಸರಳ-ಜನಪ್ರಿಯ ಧಾಟಿಯ ನೆರೇಟಿವ್ ಸ್ಟೈಲ್ ಕಟ್ಟಲು ಈ ಬಗೆಯ ಆಧ್ಯಯನ ಮತ್ತು ವಸ್ತುನಿಷ್ಠತೆಯೇ ಮೂಲಾಧಾರ. ಆದರೆ ನಾವು ಅದಕ್ಕಷ್ಟೇ ಸೀಮಿತಗೊಂಡು, ಆ ಸತ್ಯದ ಸರಕನ್ನು ಜನಪ್ರಿಯಗೊಳಿಸುವ ಪಾಪ್ಯುಲರ್ ನೆರೇಟಿವ್ ಸ್ಟೈಲ್ ರೂಪಿಸುವಲ್ಲಿ ಬಹಳಷ್ಟು ಹಿಂದೆ ಬಿದ್ದಿದ್ದೇವೆ ಅನ್ನಿಸುತ್ತೆ. ಹೌದು, ಮಿಥ್ಯದ ಸುಪರ್‌ಫೀಶಿಯಲ್ ನೆರೇಟಿವ್ ಕಟ್ಟುವವರಿಗೆ ಇಂತಹ ಸವಾಲುಗಳು ಇರುವುದಿಲ್ಲ. ಸತ್ಯವನ್ನು ಹೇಳುವ ನಮಗೆ ಆ ಕೆಲಸ ಸುಲಭವಲ್ಲದೇ ಇರಬಹುದು. ಆದರೆ, ಅಸಾಧ್ಯವಲ್ಲ ಎಂಬುದನ್ನು ಶರಣರ ವಚನಕ್ರಾಂತಿಯನ್ನು ನೋಡಿ ಅರ್ಥ ಮಾಡಿಕೊಳ್ಳೋಣ; ಅದರಿಂದ ಸ್ಫೂರ್ತಿಯ ಪಡೆದು ಹೊಸ ಸಂವಹನ ಸಾಧ್ಯತೆಗಳ ಅನ್ವೇಷಣೆಗಿಳಿಯೋಣ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!