Wednesday, October 23, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ | ಗೋವುಗಳನ್ನು ಅಕ್ರಮ ಸಾಗಾಟ ಮಾಡಿ ಸಿಕ್ಕಿ ಬಿದ್ದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ದನ-ಕರುಗಳನ್ನು ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಕ್ರಿಯ ಬಿಜೆಪಿ ಕಾರ್ಯಕರ್ತರೆನ್ನಲಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ, ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಹಿರೇಬೆಳಗುಳಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಮತ್ತು 2 ಗಂಡು ಕರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಧರ್ಮಸ್ಥಳ ಠಾಣೆಯ ಎಸ್‌ಐ ಅನಿಲ್ ಕುಮಾರ್ ನೇತೃತ್ವದ ತಂಡವು ಜು.12ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಖಚಿತ ಮಾಹಿತಿಯ ಹಿನ್ನೆಲೆ ವಾಹನಗಳನ್ನು ತಪಾಸಣೆ ಮಾಡುತ್ತಿತ್ತು. ರಾತ್ರಿ 8:45ರ ಸುಮಾರಿಗೆ ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಎರಡು ಪಿಕಪ್ ಸೇರಿದಂತೆ ಮೂರು ವಾಹನಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಆ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದಾಗ ಅದರಲ್ಲಿ ಆರು ದನಗಳು, ಎರಡು ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದಿತ್ತು.

ಈ ವೇಳೆ ಪೊಲೀಸರು ವಾಹನದಲ್ಲಿದ್ದವರನ್ನು ವಿಚಾರಿಸಿದಾಗ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ಸಹಿತ ಜಾನುವಾರುಗಳನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಜಾನುವಾರುಗಳ ಅಂದಾಜು ಮೌಲ್ಯ 65 ಸಾವಿರ ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 7 ಲಕ್ಷ ರೂ. ಸೇರಿದಂತೆ ಒಟ್ಟು ರೂ 7.65 ಲಕ್ಷ ಮೌಲ್ಯದ ಸೊತ್ತುಗಳ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!