Tuesday, October 22, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭೆ ಕಲಾಪ | ಅತಿರೇಕದ ವರ್ತನೆ ತೋರಿದ 10 ಮಂದಿ ಬಿಜೆಪಿ ಶಾಸಕರ ಸಸ್ಪೆಂಡ್

ವಿಧಾನಸಭೆ ಕಲಾಪದ ಸಂದರ್ಭ ಅತಿರೇಕದ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.

ಬಿಜೆಪಿ ಶಾಸಕರಾದ ಡಾ.ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್​, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅಮಾನತಾದವರು.

“>

ಗುರುವಾರ ಮತ್ತು ಶುಕ್ರವಾರ 2 ದಿನಗಳ ಕಾಲ ಅಧಿವೇಶನ ಬಾಕಿ ಉಳಿದಿದ್ದು, ಸದನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಅಮಾನತು ಮಾಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.

ಅಮಾನತುಗೊಂಡವರನ್ನು ಸದನದಿಂದ ಹೊರಕಳಿಸಲು ಮಾರ್ಷಲ್ಸ್‌ ಒಳಬಂದಾಗ ಬಿಜೆಪಿಯ ಇತರ ಶಾಸಕರು ಅಮಾನತುಗೊಂಡ ಶಾಸಕರಿಗೆ ತಡೆಗೋಡೆಯಾಗಿ ನಿಂತರು. ಅಮಾನತುಗೊಂಡ ಶಾಸಕರನ್ನು ಮಾರ್ಷಲ್​​ಗಳು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿಯ ಇತರ ಶಾಸಕರು ಪ್ರಯತ್ನಿಸಿದರದರೂ ಅಮಾನತುಗೊಂಡ ಶಾಸಕರನ್ನು ಬಲವಂತದಿಂದ ಹೊರದಬ್ಬುವಲ್ಲಿ ಮಾರ್ಷಲ್​ಗಳು ಯಶಸ್ವಿಯಾದರು.

ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್​ಗೆ ದೂರು ನೀಡಿದ್ದರು. ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ ಆಗ್ರಹಿಸಿದ್ದರು.

ಗದ್ದಲಕ್ಕೆ ಕಾರಣವೇನು ?
ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಪಕ್ಷ ನಾಯಕರ ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕೆ ಸರಕಾರ ಉತ್ತರ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಧರಣಿ ನಡೆಸಿದ್ದರು. ಇದಕ್ಕೆ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಗಣ್ಯರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಿ ಅವರನ್ನು ಬರಮಾಡಿಕೊಳ್ಳಲು ಶಿಷ್ಟಾಚಾರದ ಪ್ರಕಾರ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದರು.

ಇದರಿಂದ ಸಮಾಧಾನಗೊಳ್ಳದ ಬಿಜೆಪಿ ಶಾಸಕರು ಧರಣಿ ಮುಂದುವರಿಸಿದ್ದರು. ಕೆಲ ಹೊತ್ತಿನ ಬಳಿಕ ಉಪಸಭಾಪತಿಯವರು ಸಭಾಂಗಣದಲ್ಲಿ ಕುಳಿತು ಚರ್ಚೆ ಮುಂದುವರಿಸಿದ್ದರು. ಮಧ್ಯಾಹ್ನದ ಊಟಕ್ಕೆ ಸದನವನ್ನು ಮುಂದೂಡದಿರುವುದಕ್ಕೆ ಅಸಮಾಧಾನಗೊಂಡ ಬಿಜೆಪಿ ಮುಖಂಡರು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಸಭಾಧ್ಯಕ್ಷರ ಪೀಠದ ಮೇಲೆ ಎಸೆದಿದ್ದರು.

ಶಾಸಕರನ್ನು ಅಮಾನತು ಮಾಡಿರುವುದನ್ನು ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿದಂತೆ ಇತರ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!