Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ಚಾಂಷುಗರ್ ಎದುರು ಪ್ರತಿಭಟನೆ

ಟನ್ ಕಬ್ಬಿಗೆ ಐದು ಸಾವಿರ ಬೆಲೆ ನಿಗಧಿಪಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೆಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಪ್ರಾಂತ ರೈತ ಸಂಘದ ಸದಸ್ಯರು ಹಾಗೂ ರೈತರು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಕೆ.ಎಂ.ದೊಡ್ಡಿಯ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಚೇರಿ ಮುಂದೆ ಧರಣಿ ನಡೆಸಿ, ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಭರತ್ ರಾಜ್ ಮಾತನಾಡಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಬಳಿ ಟನ್ ಕಬ್ಬಿಗೆ 5000 ರೂಪಾಯಿ ಬೆಲೆ ನಿಗಧಿಪಡಿಸಬೇಕು ಹಾಗೂ 2022-23ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‌ಗೆ 100 ರೂ.ಗಳ ಬಾಕಿ ಹಣ ಶೀಘ್ರ ನೀಡಬೇಕೆಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬಿತ್ತನೆ ಕಬ್ಬು, ಆಳಿನ ಕೂಲಿ, ಉಳುಮೆ ವೆಚ್ಚ ಸೇರಿದಂತೆ ಕಬ್ಬು ಬೆಳೆಯಲು ದುಬಾರಿ ಖರ್ಚು ಬರುತ್ತಿದೆ. ಗುಜರಾತ್‌ನಲ್ಲಿ ಟನ್ ಕಬ್ಬಿಗೆ 4400 ರೂಪಾಯಿ, ಪಂಜಾಬ್‌ನಲ್ಲಿ 3800 ರೂಪಾಯಿ, ಉತ್ತರ ಪ್ರದೇಶದಲ್ಲಿ 3500 ರೂಪಾಯಿಗಳು ಹಾಗೂ ಕರ್ನಾಟಕದ ರೇಣುಕಾ ಶುಗರ್ 3660 ರೂ.ಗಳು ಸೇರಿದಂತೆ ಬೆಳಗಾವಿಯ ಹಲವು ಕಾರ್ಖಾನೆಗಳೇ 3500 ರೂಪಾಯಿಗಳಿಗಿಂತ ಹೆಚ್ಚಾಗಿ ನೀಡುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠದ ಆದೇಶದಂತೆ ಎಸ್.ಎ.ಪಿ. ನಿಗಧಿಪಡಿಸಲು ಅವಕಾಶ ನೀಡಿದೆ. ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಟನ್ ಕಬ್ಬಿಗೆ 500 ರೂ.ಗಳ ಹೆಚ್ಚುವರಿ ಮೊತ್ತ ಘೋಷಣೆಯೊಂದಿಗೆ ಪ್ರತಿ ಟನ್ ಕಬ್ಬಿಗೆ 5000 ರೂ ಬೆಲೆ ನಿಗಧಿಪಡಿಸಬೇಕೆಂದು ಆಗ್ರಹಿಸಿದರು.

ಜಾಹೀರಾತು

ಮಂಡ್ಯ ಉಪವಿಭಾಗಧಿಕಾರಿ ಶಿವಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ಪ್ರತಿಭಟನೆಯಲ್ಲಿ ಸಲ್ಲಿಸಿರುವ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಕಬ್ಬಿನ ಹಣವನ್ನು ಕಟಾವು ಆದ 45 ದಿನಗಳಲ್ಲಿ ಹಣ ನೀಡಲಾಗುತ್ತದೆ ಎಂದು ಕರ್ಖಾನೆ ಅಧಿಕಾರಿಗಳು ಹೇಳುತ್ತಿದ್ದಾರೆ, ಎಷ್ಟು ದಿನದೊಳಗೆ ಹಣ ಕೊಡಬಹುದು ಎನ್ನುವುದನ್ನು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಣಿ ಮಾತನಾಡಿ, ಕಬ್ಬಿಗೆ ಸರ್ಕಾರ ನಿಗಧಿಪಡಿಸಿರುವ ದರವನ್ನು ಈಗಗಲೇ ನೀಡಲಾಗುತ್ತಿದೆ, ಹಿಂದೆ ಕಬ್ಬು ಕಡಿದ 6 ತಿಂಗಳಿಗೆ ನೀಡಲಾಗುತ್ತಿತ್ತು, ಪ್ರಸ್ತುತದಲ್ಲಿ 30ರಿಂದ 45 ದಿನಗಳಲ್ಲಿ ಹಣವನ್ನು ನೀಡಲಾಗುತ್ತಿದೆ, 100 ಬಾಕಿ ಹಣ ನೀಡುವ ಸಂಬಂಧ ಕೋರ್ಟ್ ನಲ್ಲಿ ಕೇಸು ನಡೆಯುತ್ತಿರುವುದರಿಂದ ಅಂತಿಮ ತೀರ್ಪು ಬಂದ ನಂತರ ಕೊಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನಾ ಸ್ಥಳಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್‌ಕುಮಾರ್, ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿ, ಕೃಷಿ ಇಲಾಖೆ ಸಹಾಯ ನಿರ್ಧೇಶಕ ಪರಮೇಶ್,ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಂದ್ ಆಗಮಿಸಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿ ಮನವೊಲಿಸಿದರು.

ಇದೆ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವಲಿಂಗಯ್ಯ, ರೈತ ಮುಖಂಡ ಚಂದ್ರಶೇಖರಯ್ಯ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಳ್ಳೇಗೌಡ, ಕಾರ್ಯದರ್ಶಿ ಸತೀಶ್, ನಾಗೇಂದ್ರ, ಮರಿಲಿಂಗೇಗೌಡ,ಚಂದ್ರಶೇಖರ್, ಶಿವರಾಮು,  ರಘು ವೆಂಕಟೇಗೌಡ, ಮರಲಿಂಗೇಗೌಡ, ರಾಮಲಿಂಗೇಗೌಡ, ತಿಮ್ಮೇಗೌಡ, ಕೃಷ್ಣೇಗೌಡ, ಲತಾ, ನಾಗರಾಜು ಸೇರಿದಂತೆ ನೂರಾರು ರೈತ ಮಹಿಳೆಯರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!