ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ ಎಸ್ ತಿಳಿಸಿದರು.
ಸೋಮವಾರ ನಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಮೂಲಕ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ನೌಕರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.

ಸರ್ಕಾರಿ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳವಾಗಿದೆ. ಎನ್’ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ಕ್ರಮ ವಹಿಸಲಾಗಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿ, ಮಹಿಳಾ ನೌಕರರಿಗೆ 6 ತಿಂಗಳು ಶಿಶುಪಾಲನಾ ರಜೆ, ಮುಂಬಡ್ತಿಗೆ ಸಮಗ್ರ ಬದಲಾವಣೆ, ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟಕ್ಕೆ ಅನುದಾನ ಹೆಚ್ಚಳ, ಹಬ್ಬದ ಮುಂಗಡ ₹ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಛಳ ಹಾಗೂ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ನೌಕರರಿಗೆ ಕಾಲ ಕಾಲಕ್ಕೆ ತುಟ್ಟಿಭತ್ಯೆ ಏರಿಕೆ ಮುಂತಾಗಿ ಹತ್ತು ಹಲವು ಕಾರ್ಯಗಳನ್ನು ಮಾಡಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ನೌಕರರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಂಘಟನೆ ರಾಜ್ಯಾಧ್ಯಕ್ಷ, ಜಿಲ್ಲಾ, ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳ ಅವ್ಯವಸ್ಥಿತ ವ್ಯವಸ್ಥಾಪನೆ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಉಂಟು ಮಾಡಲು ಸುಳ್ಳು ದೂರು ದಾಖಲಿಸಿರುವವರ ವಿರುದ್ದ ಕಾನೂನು ಕ್ರಮ ಕೈಗೊಂಡು, ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯ ಜಿ.ಎನ್.ನಾಗೇಶ್, ಉಪಾಧ್ಯಕ್ಷರಾದ ಈಶ್ವರ್, ಕೃಷ್ಣ, ಪ್ರಸನ್ನ, ಖಜಾಂಚಿ ಕೆ.ಗೋಪಾಲ್ ಹಾಜರಿದ್ದರು.




