ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಗರಿಗೆದರಿದ್ದು, ದಲಿತರನ್ನೇ ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ `ದಲಿತ ಮುಖ್ಯಮಂತ್ರಿ ಹೋರಾಟ’ಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ನವೆಂಬರ್ ತಿಂಗಳ ೨೧ರ ನಂತರ ಎರಡೂವರೆ ವರ್ಷಗಳ ಆಡಳಿತ ಮತ್ತು ೨೦೨೮ರ ಚುನಾವಣೆಯ ನಂತರ ಮುಖ್ಯಮಂತ್ರಿ ಆಯ್ಕೆ ಊಹಾಪೋಹಗಳು ನಾಡಿನ ಜನತೆಯಲ್ಲಿ ಸಾರ್ವಜನಿಕ ಚರ್ಚೆ ಹುಟ್ಟಿದೆ. ಇದು ನವೆಂಬರ್ ಕ್ರಾಂತಿ ಎನ್ನಲಾಗಿದ್ದು, ಇದು ದಲಿತ ಕ್ರಾಂತಿಯಾಗಲಿದೆ ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರ ವಿರೋಧದ ಹೇಳಿಕೆಗಳು ರಾಜಕೀಯ ಬಿರುಗಾಳಿ ಎಬ್ಬಿಸುತ್ತಿವೆ. ಸಚಿವ ಎಂ.ಬಿ.ಪಾಟೀಲರು ರಾಜಕೀಯ ಸನ್ಯಾಸಿಯಲ್ಲ ಎಂಬ ಎಂದೇಳಿ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ ಎಂದರು.
ಈ ಹಿಂದೆ ದಲಿತ ಸಂಘಟನೆಗಳು ದಲಿತ ಮುಖ್ಯಮಂತ್ರಿ ಹೋರಾಟ ಆರಂಭಿಸಿದ ಫಲವಾಗಿ ಬಿಜೆಪಿ, ಕಾಂಗ್ರೆಸ್ ಆಡಳಿತದಲ್ಲಿ ಇಬ್ಬರನ್ನು ದಲಿತ ಉಪಮುಖ್ಯಮಂತ್ರಿ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥ ಆಡಳಿತ ನಡೆಸಿದ್ದು, ಅವರೇ ಮುಂದಿನ ಅವಧಿಗೂ ಮುಂದುವರೆದರೆ ಯಾವುದೇ ತಕರಾರಿಲ್ಲ. ಬದಲಾವಣೆ ಮಾಡುವುದೇ ಆದಲ್ಲಿ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೋಳಿ, ಡಾ.ಹೆಚ್.ಸಿ.ಮಹದೇವಪ್ಪ ಅವರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದರು.
ದಲಿತರು ಸಿಎಂ ಆದರೆ ದುರ್ಬಳಕೆ ಮಾಡಿಕೊಂಡ ಎಸ್ಸಿಪಿ/ಟಿಎಸ್ಪಿ ಹಿಂಬಾಕಿ ಹಣ ಸಮೇತ ಹಿಂಪಡೆಯುವ ಕೆಲಸವನ್ನು ಒತ್ತಾಯದ ಮೇರೆಗೆ ದಲಿತ ಮುಖ್ಯಮಂತ್ರಿಯಿಂದ ಮಾಡಿಸಿಕೊಳ್ಳಲಾಗುವುದು ಎಂದು ಸಮರ್ಥಿಸಿಕೊಂಡರು.
ಗೋಷ್ಠಿಯಲ್ಲಿ ದಸಂಸ ರಾಜ್ಯಾಧ್ಯಕ್ಷ ಅಶ್ವಥ್, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ, ಕರಾದಸಂಸದ ಎಂ.ವಿ.ಕೃಷ್ಣ, ಸಮತಾ ಸೈನಿಕ ದಳದ ಕೃಷ್ಣಮೂರ್ತಿ, ಸಂವಿಧಾನ ಸೇನೆಯ ನರಸಿಂಹಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್, ರಾಜ್ಯಾಧ್ಯಕ್ಷ ಹೆಚ್.ಜಿ.ಗಂಗರಾಜು, ರಾಷ್ಟ್ರೀಯ ಭೀಮ ಪಡೆಯ ಮಂಡ್ಯ ಕೋಶಾಧ್ಯಕ್ಷ ಎಸ್.ಪಿ.ನಾರಾಯಣಸ್ವಾಮಿ, ಶೋಷಿತ ಸಮುದಾಯಗಳ ವೇದಿಕೆಯ ಸಿದ್ದರಾಜು ಇದ್ದರು.




