Thursday, July 25, 2024

ಪ್ರಾಯೋಗಿಕ ಆವೃತ್ತಿ

ಗಮನ ಕೇಂದ್ರೀಕರಿಸಿ ಮುನ್ನಡೆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು: ಶೇಖ್ ತನ್ವೀರ್ ಆಸಿಫ್

ಧೈರ್ಯದಿಂದ ಮುನ್ನುಗ್ಗುವುದು, ನಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಿ ಮುನ್ನಡೆದರೆ ಯಶಸ್ಸು ಒಲಿಯುತ್ತದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕ ಆಯೋಜಿಸಿದ್ದ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಐಎಎಸ್, ಐಪಿಎಸ್ ಸೇರಿದಂತೆ ಅನೇಕ ಉನ್ನತ ಹುದ್ದೆಗಳಿಗೇರಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಈ ಪರೀಕ್ಷೆಗಳನ್ನು ಎದುರಿಸಲು ನಮ್ಮಲ್ಲಿ ಗುರಿಯಿರಬೇಕು, ಆ ಗುರಿ ಮುಟ್ಟಲು ಮಾತ್ರ ನಮ್ಮ ಗಮನವಿರಬೇಕು. ಇಲ್ಲಿ ನನಗಿಂತ ಪ್ರತಿಭಾವಂತರು ಬಂದಿದ್ದಾರೆ. ಇವರ ಮುಂದೆ ನಾನು ಪರೀಕ್ಷೆ ಬರೆದು ಯಶಸ್ವಿಯಾಗಬಲ್ಲೆನೆ ಎಂಬ ಅಳುಕು ಮನೋಭಾವ ಇರಲೇಬಾರದು. ಯಾರ ಮನದಲ್ಲಿ ನಂಬಿಕೆ, ಆತ್ಮವಿಶ್ವಾಸ ಮತ್ತು ಸಾಧಿಸುತ್ತೇನೆಂಬ ಧೈರ್ಯವಿರುತ್ತದೋ ಅವರು ಜೀವನದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿನ ಯುವಕರಲ್ಲಿ ತಾಳ್ಮೆ ಎಂಬುದು ಬಹಳ ಕಡಿಮೆ. ಧೈರ್ಯವಿದೆ ಎಂದು ಒರಟು ಒರಟಾಗಿ ವರ್ತಿಸುವುದು ತಪ್ಪಾಗುತ್ತದೆ. ಸವಾಲುಗಳನ್ನು ಎದುರಿಸುವಲ್ಲಿ ಧೈರ್ಯವಿರಬೇಕು. ಗುರಿ ಸಾಧಿಸಬೇಕೆಂದರೆ ತಾಳ್ಮೆ ಹಾಗೂ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ. ಎಲ್ಲ ವೃತ್ತಿಗಳಲ್ಲೂ ಸವಾಲುಗಳಿರುತ್ತವೆ. ಹಾಗಾಗಿ ಐಎಎಸ್, ಐಪಿಎಸ್ ಮಾಡುವುದೇ ಗುರಿಯಲ್ಲ. ನೂರೆಂಟು ವಿಧಗಳ ಹುದ್ದೆಗಳಿವೆ. ನಮ್ಮ ಮನೋಭಾವಕ್ಕೆ ಯಾವುದು ಸರಿ ಎನಿಸುತ್ತೊ ಅದರಲ್ಲಿ ನಾವು ಪ್ರಾವೀಣ್ಯತೆ ಸಾಧಿಸಿದರೆ ಸಮಾಜದಲ್ಲಿ ಗೌರವ ಸಿಗುತ್ತದೆಂದು ತಿಳಿಸಿದರು.

ಹೊರ ರಾಜ್ಯದವರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ ಹಲವು ಮಹನೀಯರಿದ್ದಾರೆ. ಇವರಿಂದಾಗಿ ಮಂಡ್ಯ ಜಿಲ್ಲೆಯ ಸಾಕಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಹೊರ ರಾಜ್ಯದವರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ, ಆದರೆ ನಮ್ಮ ಮಂಡ್ಯದಲ್ಲಿ ಪ್ರತಿಭಾವಂತರಿದ್ದರೂ ಅವರು ಉನ್ನತ ಹುದ್ದೆಗೇರಲು ಸಾಧ್ಯವಾಗಿಲ್ಲ ಎಂದರೆ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ, ನೆರವು ಲಭಿಸುತ್ತಿಲ್ಲ. ಆದ್ದರಿಂದ ಕನ್ನಡ ಸೇನೆ ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲು ಮುಂದಾಗಿದೆ. ನಮ್ಮ ಸೇನೆ ರಾಜ್ಯಾಧ್ಯಕ್ಷರಾದ ಕೆ.ಕುಮಾರ್ ಅವರು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.

ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹೇಮಚಂದ್ರ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಎನ್.ಮುನಿರಾಜೇಗೌಡ, ಕಾರ್ಯಾಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ಎಂ.ಬೆಟ್ಟಹಳ್ಳಿ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!