ಟಾಸ್ಕ್ ವರ್ಕ್ ದಿನಗೂಲಿ ನೌಕರರನ್ನು ನೀರಾವರಿ ಇಲಾಖೆಯ ಕೈಪಿಡಿಯಂತೆ ಹುದ್ದೆವಾರು ವೇತನ ನೀಡುವುದು ಮತ್ತು ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸದಸ್ಯ ಪಂಪಾಪತಿ ರಾಟಿ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರಸಭೆ, ಪುರಸಭೆಗಳಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಸಿದಂತೆ ಈ ಕಾರ್ಮಿಕರಿಗೂ ಸಹ ನೇರವಾಗಿ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜನಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ನೀರಾವರಿ ಕೈಪಿಡಿಯಲ್ಲಿರುವ ಹುದ್ದೆಗಳಿಗೆ ಅನುಗುಣವಾಗಿ ಕಾರ್ಮಿಕರನ್ನು ನೇಮಿಸಿಕೊಂಡು ಗುತ್ತಿಗೆದಾರರ ಮೂಲಕ ವೇತನವನ್ನು ಪಾವತಿಸಲಾಗುತ್ತಿದೆ ಆದರೆ, ಈ ಕೆಲಸ ಅವಶ್ಯಕತೆಯಾಗಿದ್ದು, ಗುತ್ತಿಗೆ ಕಾರ್ಮಿಕರ ನಿಯಂತ್ರತಣ ಹಾಗೂ ರದ್ಧತಿ ಕಾಯ್ದೆಯಂತೆ ಯಾವುದೇ ಅವಶ್ಯಕ ಹುದ್ದೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿ ಕೊಳ್ಳಬಾರದು. ಈ ಕೆಲಸಕ್ಕೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಗುತ್ತಿಗೆದಾರನೂ ಕಾಯ್ದೆಯಂತೆ ನೆಪ ಮಾತ್ರದ ಗುತ್ತಿಗೆದಾರನಾಗಿರುತ್ತಾನೆ. ಇಲಾಖೆಯ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರು ಇಎಸ್ಐ, ಪಿಫ್ ಹಣವನ್ನು ವರ್ಗಾಯಿಸಿಲ್ಲ, ಕಾರ್ಮಿಕರ ಖಾತೆ ಸಂಖ್ಯೆಗಳಿಗೆ ವರ್ಗಾಯಿಸಲು ಅನುಮತಿ ನೀಡುವವರೆಗೂ ಮೂಲ ಮಾಲೀಕರು ಅವರಿಗೆ ಯಾವುದೇ ದಾಖಲಾತಿ ಇಎಂಡಿ ಹಣ ಮತ್ತು ಇನ್ನಿತರೆ ಹಣವನ್ನು ನೀಡಬಾರದು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಕಾರ್ಮಿಕ ಕಾಯ್ದೆಯಂತೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರಿಗೆ ವಾರದ ರಜೆ, ರಾಷ್ಟ್ರೀಯ ರಜಾ ದಿನಗಳು ಹಾಗೂ ರಜಾ ದಿನಗಳಲ್ಲಿ ಮತ್ತು ಹೆಚ್ಚಿನ ಅವಧಿ ಕೆಲಸ ನಿರ್ವಹಿಸಿದ್ದಲ್ಲಿ ಹೆಚ್ಚುವರಿ ವೇತವನ್ನು ಕಡ್ಡಾಯವಾಗಿ ನೀಡಬೇಕು. ಗುತ್ತಿಗೆ ಕಾರ್ಮಿಕ ಕಾಯ್ದೆಯಂತೆ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಹಾಗೂ ವೇತನ ಪಾವತಿಸುವ ರಶೀದಿಯನ್ನು ನೀಡಬೇಕು ಮತ್ತು ವೇತನ ಪಾವತಿ ಕಾಯ್ದೆಯಂತೆ 7ನೇ ತಾರೀಖಿನೊಳಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಮುಖಂಡರಾದ ಶಿವಲಿಂಗಯ್ಯ, ಮಹೇಶ, ಶ್ರೀನಿವಾಸ್ ಇತರರು ಗೋಷ್ಠಿಯಲ್ಲಿದ್ದರು.




