ಸ್ವಾತಂತ್ರ್ಯ ದಿನದಂದು ಹಿರಿಯರ ತ್ಯಾಗ ಬಲಿದಾನವನ್ನು ಸ್ಮರಣೆ ಮಾಡಿಕೊಂಡು ದೇಶದ ಸಮಗ್ರ ಪ್ರಗತಿಗಾಗಿ ದುಡಿಯಲು ಸಂಕಲ್ಪ ಮಾಡಿ, ಎಲ್ಲರೂ ಹೆಜ್ಜೆ ಹಾಕಬೇಕು ಎಂದು ತಹಶೀಲ್ದಾರ್ ನಿಸರ್ಗಪ್ರಿಯ ಕರೆ ನೀಡಿದರು .
ಕೆ ಆರ್ ಪೇಟೆ ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಸರ್ವ ಶ್ರೇಷ್ಠ ಸಾಧನೆ ಮಾಡಿ ಮುನ್ನಡೆಯುತ್ತಿರುವ ಭಾರತ ದೇಶವು ಬಲಿಷ್ಠವಾದ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಮಹನೀಯರು ಬ್ರಿಟಿಷರ ವಿರುದ್ಧ ನಿರಂತರ ಹೋರಾಟವನ್ನು ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಲ್ಲದೆ ದೇಶದ ಸಮಗ್ರವಾದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಎಚ್ ಟಿ ಮಂಜು ಸ್ವಾತಂತ್ರ್ಯೋತ್ಸವ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾತಂತ್ರ ದಿನೋತ್ಸವದಲ್ಲಿ ಭಾಗವಹಿಸಿದ್ದ ವಿವಿಧಶಾಲಾ ವಿದ್ಯಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿದರು..
ನಮ್ಮ ಹಿರಿಯರ ತ್ಯಾಗ ಬಲಿದಾನದ ಮೂಲಕ ದೊರಕಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ದೇಶದ ಮುನ್ನಡೆಗಾಗಿ ನಾವು ನಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗುವುದು ಅನಿವಾರ್ಯವಾಗಿದೆ. ಸರ್ವರಿಗೂ ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕು, ಮಹಿಳಾ ದೌರ್ಜನ್ಯ ನಿಲ್ಲಬೇಕು, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಿ ಮಹನೀಯರ ಕನಸುಗಳನ್ನು ನನಸು ಮಾಡಲು ದಿಟ್ಟ ಹೆಜ್ಜೆ ಇಡಬೇಕು ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಮಹಾದೇವಿ ನಂಜುಂಡ, ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ, ಪೋಲಿಸ್ ಇನ್ಸ್ಪೆಕ್ಟರ್ ಗಳಾದ ಎಂ.ಕೆ.ದೀಪಕ್, ಜಗದೀಶ್, ಸುನಿಲ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿ ರಾಮು, ಜೆಡಿಎಸ್ ಮುಖಂಡ ಅಗ್ರಹಾರ ಬಾಚಹಳ್ಳಿ ನಾಗೇಶ್, ತೆರನೇನಹಳ್ಳಿ ಬಲದೇವ್, ವಾಟಾಳ್ ನಾಗರಾಜು, ಪುರಸಭೆ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ, ಗಿರೀಶ್, ಇಂದ್ರಾಣಿ, ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಉಪಸ್ಥಿತರಿದ್ದರು.




