Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 3 ದಿನಗಳ ತರಬೇತಿ ಶಿಬಿರ

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಡ್ಯ ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಮೈಸೂರು ವಿಭಾಗದ 3 ದಿನಗಳ ತರಬೇತಿ ಶಿಬಿರವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆ.17ರಿಂದ 19ರವರೆಗೆ ಮಂಡ್ಯ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಗೂ ಎಸ್.ಬಿ.ಸಮುದಾಯಭವನದಲ್ಲಿ ಏರ್ಪಡಿಸಲಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಹಾಸನ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಮುಂತಾದ ಪ್ರತಿ ಜಿಲ್ಲೆಗಳಿಂದ ವಿದ್ಯಾರ್ಥಿಗಳಿಂದ 5 ಶಿಕ್ಷಕರು ಮತ್ತು ಒಟ್ಟು 160 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆಂದರು.

ಆ.18 ಶಿಬಿರದ ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿರವರು ನೆರೆವೇರಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಜೂನಿಯರ್ ರೆಡ್‌ ಕ್ರಾಸ್‌ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದು, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸಭಾಪತಿಗಳಾದ ವಿಜಯ್‌ ಕುಮಾರ ಪಾಟೀಲ್, ಶಾವಂತಗೇರಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜಾಹೀರಾತು

ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್‌ನ್ನು ಶಾಸಕ ಪಿ.ರವಿಕುಮಾರ್ ಗೌಡ (ಗಣಿಗ) ವಿತರಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು ಮತ್ತು ಜಿಲ್ಲೆಯ ವಿಧಾನ ಸಭಾ ಹಾಗೂ ವಿಧಾನ ಪರಿಷತ್‌ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ, ರಕ್ತದಾನದ ಮಹತ್ವ, ಪರಿಸರ ಸಂರಕ್ಷಣೆ, ನಾಗರೀಕ ಜವಾಬ್ದಾರಿಗಳು, ನೈತಿಕತೆಯ ವಿಷಯಗಳು, ಎಚ್.ಐ.ವಿ,ಏಡ್ಸ್, ಮಾದಕ ವ್ಯಸನದ ದುಷ್ಪರಿಣಾಮವನ್ನು ತಡೆಗಟ್ಟುವಿಕೆ ಬಗ್ಗೆ ಹಾಗೂ ರಸ್ತೆ ಸುರಕ್ಷತೆ ಮತ್ತು ನಿಯಮಗಳು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳಲ್ಲಿ ಪ್ರಕೃತಿದತ್ತವಾಗಿ ಆಗುವಂತಹ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ದಿನನಿತ್ಯದ ಬದುಕಿನಲ್ಲಿ ಎದುರಾಗುವ ತುರ್ತು ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಕೌಶಲಗಳನ್ನು ನೀಡುವ ಉದ್ದೇಶದಿಂದ ಜೂನಿಯರ್ ರೆಡ್‌ ಕ್ರಾಸ್ ಘಟಕಗಳನ್ನು ಎಲ್ಲಾ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕೃಷಿಕ್ ಲಯನ್ಸ್ ಸಂಸ್ಥೆಯ ಕೆ.ಟಿ.ಹನುಮಂತು, ಮುಖಂಡರಾದ ಕಾರಸವಾಡಿ ಮಹದೇವು, ಜವರೇಗೌಡ, ಷಡಕ್ಷರಿ, ಮಂಗಲ ಯೋಗೇಶ್ ಹಾಗೂ ರಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!