Friday, September 20, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಬಗ್ಗೆ ಚಿಂತಿಸಿ: ಸಚಿವ ಮಧು ಬಂಗಾರಪ್ಪ

ಸರ್ಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುದಾನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವ ರೀತಿ ಅಧಿಕಾರಿಗಳು ಚಿಂತಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ಕ್ಲಸ್ಟರ್ ಜಿಲ್ಲೆಯಲ್ಲಿ 0-5 ಮಕ್ಕಳು ದಾಖಲಾತಿ ಇರುವ ಶಾಲೆಯಲ್ಲಿ, ಮಕ್ಕಳಿಗೆ ಶಾಲಾ ವಾತಾವರಣ ದೊರಕುವುದು ಕಷ್ಟಕರವಾಗಿರುತ್ತದೆ. ಇಂತಹ ಶಾಲೆಗಳನ್ನು ಗುರುತಿಸಿ ಜನಪ್ರತಿನಿಧಿಗಳು ಹಾಗೂ ಪೋಷಕರೊಂದಿಗೆ ಚರ್ಚಿಸಿ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗೆ ವರ್ಗಾಯಿಸಿದರೆ, ಎರಡು ಶಾಲೆಗೆ ಸೇರಿದಂತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬಹುದು ಹಾಗೂ ಮಕ್ಕಳಿಗೆ ಶಾಲೆಗೆ ಹೋಗಿ ಬರಲು ವೆಚ್ಚದ ವ್ಯವಸ್ಥೆ ಸಹ ಮಾಡಲಾಗುವುದು. ಈ ಬಗ್ಗೆ ಚಿಂತಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಷರತ್ತು ಹಾಗೂ ನಿಯಮಗಳನ್ನು ಕಳುಹಿಸಿಕೊಡಲಾಗುವುದು ಎಂದರು.

ಸರ್ವೆ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳು ಹಾಗೂ SATS ಅಂಕಿ ಅಂಶಗಳ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯಿಂದ ಹೊರಕ್ಕೆ ಹೋದ ಮಕ್ಕಳು ಯಾವ ಶಾಲೆಯಲ್ಲಿ ದಾಖಲಾತಿ ಪಡೆದುಕೊಂಡಿದ್ದರೆ ಎಂದು ಮಾಹಿತಿ ಪಡೆದುಕೊಂಡು 15 ದಿನದೊಳಗಾಗಿ ವರದಿ ನೀಡಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂದರು.

ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿದ್ದು, ಅದರೆ ಬಳಕೆಗೆ ಯೋಗ್ಯವಾಗಿಲ್ಲ ಇದರಿಂದ ಮಕ್ಕಳ ದಾಖಲಾತಿಯ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು‌ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರು ತಿಳಿಸಿದಾಗ, ಸಚಿವರು ಜಿಲ್ಲೆಯಲ್ಲಿರುವ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಣ್ಣ ಪುಟ್ಟ ದುರಸ್ತಿ ಕೆಲಸಗಳಿದ್ದಲ್ಲಿ ಸರಿಪಡಿಸಿ ಎಂದು ಸೂಚನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ,ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು. ಶಿಕ್ಷಕರು ಸಹ ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಿ ಮುಂದೆ ತರಲು ಹೆಚ್ಚು ಶ್ರಮಿಸಬೇಕು ಎಂದರು.

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಶಾಲೆಗಳಿಗೆ ಮೂಲಭೂತ ಸೌಕರ್ಯ ಕೊರತೆ ಇರುವ ಶಾಲೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದರು.

ವಿಶೇಷ ರೂಪರೇಷೆ ಸಿದ್ಧಪಡಿಸಬೇಕು

ವಿಧಾನ ಪರಿಷತ್ ಶಾಸಕ ಮರಿತಿಬ್ಬೇಗೌಡ ಮಾತನಾಡಿ, ಶಾಲೆಗೆ ದಾಖಲಾಗಿ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಸರ್ಕಾರ ವಿಶೇಷವಾದ ರೂಪರೇಷೆಗಳನ್ನು ಸಿದ್ಧಪಡಿಸಬೇಕು.
ಕೆಲವು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೆಲವು ಕಡೆ ಸೌಲಭ್ಯ ಇದ್ದರೂ ಅದರ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಕಡೆ ಅಡುಗೆ ಕೆಲಸ, ಶೌಚಾಲಯ ಸ್ವಚ್ಛಗೊಳಿಸುವುದನ್ನು ಶಿಕ್ಷಕರೇ ಮಾಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವುಗಳನ್ನು ಸರಿಪಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ.ಬಿ ಕಾವೇರಿ, ವಿಧಾನ ಪರಿಷತ್ ಶಾಸಕ ಮಧು ಜಿ. ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!