Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಲ್ಲ ನಾಗರಕ್ಕೆ ಹಾಲೆರೆದರೆ ಪುಣ್ಯ ಲಭಿಸದು; ಡಾ.ಚನ್ನಬಸವಾನಂದ ಸ್ವಾಮೀಜಿ

ಕಲ್ಲ ನಾಗರ ವಿಗ್ರಹಕ್ಕಾಗಲಿ, ಹುತ್ತಕ್ಕಾಗಲಿ ಹಾಲನ್ನೆರೆದು ನಾಗಪಂಚಮಿ ಮಾಡಿದರೆ ಪುಣ್ಯ ಲಭಿಸುವುದಿಲ್ಲ. ಹಸಿದ ಹೊಟ್ಟೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಹಸುಕಂದಮ್ಮಗಳಿಗೆ ಹಾಲು ಹಣ್ಣು ನೀಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಕೂಡಲಸಂಗಮದ ಶ್ರೀಚನ್ನಬಸವೇಶ್ವರ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಮಂಡ್ಯ ನಗರದ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯಲ್ಲಿ ಬಸವ ಫೌಂಡೇಶನ್ ಹಾಗೂ ಲಿಂಗಾಯತ ಮಹಾಸಭಾ ಟ್ರಸ್ಟ್ ಆಯೋಜಿಸಿದ್ದ ‘ಬಸವ ಪಂಚಮಿ’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಲು, ಹಣ್ಣು ವಿತರಿಸಿ ಅವರು ಮಾತನಾಡಿದರು.

ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದ ದಿನವನ್ನು ಮರೆಮಾಚಲು ಕೆಲವು ವೈದಿಕ ಸಂಪ್ರದಾಯಸ್ಥರು ನಾಗಪಂಚಮಿಯನ್ನು ಮುನ್ನೆಲೆಗೆ ತಂದು ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ. ಕಲ್ಲನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ ಎಂದು ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರು ಮೌಢ್ಯತೆಯ ವಿರುದ್ಧ ತಮ್ಮ ವಚನದಲ್ಲಿ ಜನಜಾಗೃತಿ ಮೂಡಿಸಿದ್ದಾರೆ ಎಂದರು.

ಧಾರ್ಮಿಕತೆಯ ಹೆಸರಲ್ಲಿ ಶೋಷಣೆ ಮಾಡುವುದು ನಿಲ್ಲಬೇಕು. ಮರವನ್ನು ಸುತ್ತುವುದು, ನೀರಲ್ಲಿ ಮುಳುಗುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಮುಡಿಕೊಟ್ಟು ಪಾಪ ಕಳೆಯಿತೆಂದು ಭ್ರಮಿಸುವುದು ಮೂಢನಂಬಿಕೆಯ ಪರಮಾವಧಿ. ಕಾಯಕ-ದಾಸೋಹ ತತ್ವವನ್ನು ಅರಿತು ಸರ್ವರನ್ನೂ ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಹಸನಾಗುತ್ತದೆ. ಸತ್ಯದ ಹಾದಿಯಲ್ಲಿ ಜೀವನ ನಡೆಸಬೇಕೆಂದು ಕರೆ ನೀಡಿದರು.

ಹಾವು ಹಾಲನ್ನು ಕುಡಿಯುವುದಿಲ್ಲವೆಂಬ ಸತ್ಯವನ್ನು ಮಕ್ಕಳಿಗೆ ಶಿಕ್ಷಕರೂ ಹೇಳದಿರುವುದು ದುರಂತದ ಸಂಗತಿ. ಪಠ್ಯದ ವಿಷಯದಿಂದಾಚೆಗೆ ಮಕ್ಕಳಿಗೆ ಪ್ರಾಪಂಚಿಕ ಜ್ಞಾನವನ್ನು ತಿಳಿಸಬೇಕಾದ ಅನಿವಾರ್‍ಯತೆ ಎದುರಾಗಿದೆ. ನಾಗರ ಪಂಚಮಿಯ ದಿನದಂದು ವೃದ್ಧರಿಗೆ, ರೋಗಿಗಳಿಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ಹಾಲನ್ನು ನೀಡಬೇಕೆಂದ ಅವರು, ಪಂಚಮಿ ಹೆಸರಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡಲಾಗುತ್ತಿದೆ. ಆಹಾರವನ್ನು ಮೌಢ್ಯದ ಹೆಸರಲ್ಲಿ ಚೆಲ್ಲುತ್ತಿರುವುದು ದುರಂತವೇ ಸರಿ ಎಂದು ವಿಷಾದಿಸಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಶರಣಧರ್ಮದಲ್ಲಿ ಮೌಢ್ಯತೆಯ ಆಚರಣೆಗೆ ಅವಕಾಶವಿಲ್ಲ. ಆದರೆ, ಇಂದಿನ ದಿನಮಾನದಲ್ಲಿ ಬಸವಭಕ್ತರೆ ಮೌಢ್ಯತೆಯ ಆಚರಣೆಗೆ ಒಳಗಾಗಿರುವುದು ಶೋಚನೀಯ. ಸರ್ವರನ್ನೂ ಸಮಭಾವದಿಂದ ಕಂಡು ಶರಣತತ್ವದ ಅರಿವು ಮೂಡಿಸಬೇಕಾದ ಮಠಾಧಿಪತಿಗಳು ಬಸವಣ್ಣನವರ ವಿಚಾರಧಾರೆಗಳನ್ನು ಮೂಲೆಗುಂಪು ಮಾಡಿ ಹೋಮ, ಯಜ್ಞ, ಬಲಿ, ಮೌಢ್ಯತೆಯನ್ನು ವಿಜೃಂಭಿಸಿದ ಪರಿಣಾಮ ಜನತೆ ಗೊಂದಲದ ಗೂಡಲ್ಲಿ ಸಿಲುಕಿದ್ದಾರೆ ಎಂದರು.

ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್‌ಬೆಟ್ಟಹಳ್ಳಿ, ಬಸವ ಫೌಂಡೇಶನ್ ಅಧ್ಯಕ್ಷ ಅಪರ್ಣ ಶಿವಕುಮಾರ್, ಬಿಡದಿ ರೇಣುಕಪ್ಪ, ಧಾರವಾಡದ ಕಮಲಮ್ಮ, ಈರಮ್ಮ ದಾಳಿಂಬ ಅವರು ಶಾಲಾ ಮಕ್ಕಳಿಗೆ ಹಾಲು ವಿತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ