Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದು ಕಾಲದ ಜೋಡೆತ್ತುಗಳು…ಈಗ ಪರಸ್ಪರ ಗುದ್ದಾಡುವ ಎತ್ತುಗಳು…!

ಕಳೆದ ಐದು ವರ್ಷಗಳ ಹಿಂದೆ ಕೈ ಕೈ ಹಿಡಿದುಕೊಂಡು, ಜೋಡೆತ್ತುಗಳ ರೀತಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್, ಇದೀಗ ಪರಸ್ಪರ ಗುದ್ದಾಡುವ ಎತ್ತುಗಳಾಗಿ ಬದಲಾಗಿದ್ದಾರೆ. ಹಾವು-ಮುಂಗುಸಿಯಂತೆ ಕಚ್ಚಾಡುತ್ತಿರುವ ಇವರಿಬ್ಬರ ಜಟಾಪಟಿ ರಾಜ್ಯದ ಜನರಿಗೆ ಭರಪೂರ ಮನರಂಜನೆ ನೀಡುತ್ತಿದೆ.

2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆದ್ದು ಸ್ವತಂತ್ರವಾಗಿ ಅಧಿಕಾರ ರಚಿಸಿದ ನಂತರ ಸಿಟ್ಟಿಗೆದ್ದಿರುವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ವಿರುದ್ಧ ಒಂದು ಕೈ ತೋಳೇರಿಸಿ ನಿಂತು, ಡಿಕೆಶಿ ವಿರುದ್ಧ ಭ್ರಷ್ಟಾಚಾರ, ನೈಸ್ ಲೂಟಿ, ಬಿಬಿಎಂಪಿ ವರ್ಗಾವಣೆ ದಂಧೆ, ಗುತ್ತಿಗೆದಾರರಿಂದ ಕಮಿಷನ್ ಕೇಳಿದ್ದಾರೆ ಎನ್ನುವ ಆರೋಪಗಳನ್ನು ಮಾಡುತ್ತಾ ಒಂದು ಕಾಲದ ಜೋಡೆತ್ತಿನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಾ ಲೂಟಿ ಮಾಡುತ್ತಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಇಲಾಖೆಯಲ್ಲಿ ವರ್ಗಾವಣೆ ದಂಧೆ, ಅಧಿಕಾರಿಗಳಿಂದ ಲಂಚ ಸ್ವೀಕಾರ, ಭ್ರಷ್ಟಾಚಾರ ಎಂದೆಲ್ಲಾ ಆರೋಪಿಸುವ ಮೂಲಕ ಸರ್ಕಾರದ ವಿರುದ್ಧ ತೊಡೆ ತಟ್ಟುವ ಕಾರ್ಯ ಆರಂಭಿಸಿದ ಕುಮಾರಸ್ವಾಮಿ, ಈಗ ಅವರ ಒಂದು ಕಾಲದ ಜೋಡೆತ್ತು ಡಿ.ಕೆ.ಶಿವಕುಮಾರ್ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಮೊದಲಿಗೆ ಡಿ.ಕೆ‌.ಶಿವಕುಮಾರ್ ಅವರು, ಹೆಚ್.ಡಿ. ಕುಮಾರಸ್ವಾಮಿ ಸಿಂಗಾಪುರಕ್ಕೆ ಪ್ರವಾಸ ಕೈಗೊಂಡಿದ್ದು, ಅಲ್ಲಿ ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ನಾನು ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದೇನೆ. 19 ಸ್ಥಾನ ಹೊಂದಿರುವ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಎಷ್ಟು ಭೀತಿ ಇದೆ ನೋಡಿ ಎಂದು ತಿರುಗೇಡು ನೀಡಿದ್ದರು. ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರು ಡಿಕೆಶಿ ವಿರುದ್ಧ ನಿತ್ಯ ಒಂದಲ್ಲಾ ಒಂದು ಆರೋಪ ಮಾಡುತ್ತಾ, ಒಂದಾನೊಂದು ಕಾಲದ ಜೋಡೆತ್ತಿನ ವಿರುದ್ದ ಮಾತಿನಲ್ಲಿಯೇ ಕುಟುಕಲಾರಂಭಿಸಿದರು.

ನೈಸ್ ರಸ್ತೆ ಲೂಟಿಯಲ್ಲಿ ಡಿ.ಕೆ.ಬ್ರದರ್ಸ್ ಪಾಲು ಪಡೆದಿದ್ದಾರೆ. 2004ರಲ್ಲಿ ಡಿ.ಕೆ.ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದು ರಾಮನಗರ ಜಿಲ್ಲೆಯನ್ನು ಉದ್ದಾರ ಮಾಡಲು ಅಲ್ಲ. ನೈಸ್ ರಸ್ತೆ ಹೆಸರಿನಲ್ಲಿ ರೈತರ ಭೂಮಿ ಕೊಳ್ಳೆ ಹೊಡೆಯಲು ಎಂದು ಕಿಡಿಕಾರಿದ್ದಾರೆ. ಅಲ್ಲದೆ ಸಂಸದರಾಗುವುದಕ್ಕೂ ಮುಂಚೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರು ಮಂತ್ರಿಯಾಗಿದ್ದು ರೈತರ ಭೂಮಿ ಕೊಳ್ಳೆ ಹೊಡೆಯುವುದಕ್ಕೆ ಎಂದು ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ, ಇನ್ನೊಂದೆರಡು ದಿನಗಳಲ್ಲಿ ನೈಸ್ ಅಕ್ರಮಗಳನ್ನು ದಾಖಲೆ ಸಮೇತ ಬಯಲು ಮಾಡುವುದಾಗಿ ತಿಳಿಸಿದ್ದರು.

ಹೆಚ್ಡಿಕೆ ಹೇಳಿಕೆಗೆ ಪ್ರತಿಯಾಗಿ ತಿರುಗೇಟು ನೀಡಿದ ಡಿಕೆಶಿ, ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೂ ನಮ್ಮಲ್ಲಿ ಸಾಕ್ಷ್ಯದ ಗುಡ್ಡೆಗಳಿವೆ. ಅವೆಲ್ಲ ಕಣ್ಣಿಗೆ ಕಾಣುತ್ತಿವೆ ಎಂದಿದ್ದರು. ಇದಕ್ಕೆ ಸಿಟ್ಟಿಗೆದ್ದ ಕುಮಾರಸ್ವಾಮಿ ಬೆಟ್ಟ ಗುಡ್ಡ ಹೊಡೆದು ಚೀನಾಕ್ಕೆ ಸಾಗಿಸಿರುವ ಬಗ್ಗೆ ಕರಗಿರುವ ಬೆಟ್ಟ ಗುಡ್ಡಗಳ ಸಾಕ್ಷಿ ಇದೆ ಎಂದು ಟಾಂಗ್ ನೀಡಿದ್ದರು.

ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನೈಸ್ ಅಕ್ರಮ ದಾಖಲೆಗಳನ್ನು ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡದಂತೆ ತಡೆದಿರುವವರು ಯಾರು? ಅವರು ಬಿಚ್ಚೋದು ಬಿಚ್ಚಲಿ, ಬಿಚ್ಚಿಡುವುದಕ್ಕೆ ಎಲ್ಲರಿಗೂ ಅವಕಾಶವಿದೆ. ಅವರು ಬಿಚ್ಚಿ ಬಿಚ್ಚಿ ಬಯಲು ಮಾಡಲಿ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಹೆಚ್‍.ಡಿ. ಕುಮಾರಸ್ವಾಮಿ ಬಿಬಿಎಂಪಿ ಗುತ್ತಿಗೆದಾರರೇ ಡಿಕೆಶಿ ವಿರುದ್ಧ ಕಮಿಷನ್ ಆರೋಪ ಮಾಡಿದ ನಂತರ ಅವರ ಬಾಯನ್ನು ಮುಚ್ಚಿಸಲಾಗಿದೆ. ಇದರ ಹಿಂದಿರುವ ವ್ಯಕ್ತಿ ಯಾರೆಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದ್ದರು.

ನೈಸ್ ಹಗರಣದ ಬಗ್ಗೆ ನನಗೇನೂ ಭಯ ಇಲ್ಲ ಎಂಬ ಡಿಕೆಶಿ ಮಾತಿಗೆ ಕೆರಳಿದ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬವನ್ನು ಬಿಟ್ಟು ಯಾರನ್ನು ಬೇಕಾದರೂ ಖರೀದಿಸುವ ಶಕ್ತಿ ಇದೆ. ದೆಹಲಿಯ ಬಿಜೆಪಿ ನಾಯಕರನ್ನು ಖರೀದಿ ಮಾಡಿದ್ದರೂ ಅಚ್ಚರಿ ಇಲ್ಲ. ಅವರು ಲೂಟಿ ಹೊಡೆಯುವುದನ್ನು ನಿಲ್ಲಿಸಿದರೆ, ಆಗ ನಾನು ಡಿಕೆಶಿಯನ್ನು ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದೆಲ್ಲಾ ವಾಗ್ದಾಳಿ ನಡೆಸಿದ್ದರು.

ಹೀಗೆ ಪ್ರತಿದಿನ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪಗಳ ಸರಮಾಲೆಯನ್ನೇ ಸುರಿಸುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಜನರಿಗೆ ಬಿಟ್ಟಿ ಮನರಂಜನೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಕೈ ಕೈ ಹಿಡಿದು ಮೇಲಕ್ಕೆತ್ತಿ ನಮ್ಮದು ಜೋಡೆತ್ತುಗಳ ಜೋಡಿ ಎಂದು ರಾಜ್ಯದ ಜನರಿಗೆ ತೋರಿಸಿದ್ದ ಹೆಚ್ಡಿಕೆ-ಡಿಕೆಶಿ ಈಗ ನಾವಿಬ್ಬರೂ ಪರಸ್ಪರ ಗುದ್ದಾಡುವ ಎತ್ತುಗಳು ಎಂದು ತೋರಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ನಿಲ್ಲುವುದೋ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡಲಾರಂಭಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!