ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗದೆ ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಬಿಟ್ಟಿರುವ ಕ್ರಮ ಖಂಡಿಸಿ ಮಂಡ್ಯನಗರದಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.
ಮಂಡ್ಯನಗರದ ಸರ್ ಎಂ ವಿ ಪ್ರತಿಮೆ ಎದುರು ಉಪವಾಸ ನಡೆಸಿದ ಸಂಘದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವಿಲ್ಲದಿದ್ದರೂ ಸಹ ನೀರು ಬಿಟ್ಟಿದೆ, ಕೂಡಲೇ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದ ಸಂಕಷ್ಟದ ಸಮಯದಲ್ಲಿ ನ್ಯಾಯಾಲಯದ ಮೊರೆ ಹೋಗಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಬೇಕೆಂದು ಆಗ್ರಹಿಸಿದರು.
ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸಿದ್ದರ ಪರಿಣಾಮವಾಗಿ ಕೆ ಆರ್ ಎಸ್ ನಲ್ಲಿ ನೀರು 104 ಅಡಿಗೆ ಕುಸಿದಿದೆ. ಇದೇ ರೀತಿ ಮುಂದುವರೆದರೆ ಇನ್ನೊಂದು ವಾರದಲ್ಲಿ ಅಣೆಕಟ್ಟಿನಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕಡಿಮೆಯಾಗುತ್ತದೆ. ಇದರಿಂದ ಮುಂದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಷ್ಟವಾಗುತ್ತದೆ. ಈಗಾಗಲೇ ಬೆಳೆದ ಬೆಳೆಗಳು ಹಾಳಾಗುವುದೇ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು
ಸತ್ಯಾಗ್ರಹದಲ್ಲಿ ಸಂಘದ ಮುಖಂಡರಾದ ಹಾಡ್ಯ ರಮೇಶ್ ರಾಜು, ಪಣಕನಹಳ್ಳಿ ವೆಂಕಟೇಶ್, ಜೆ,ಕೆ ಬಸವರಾಜ್, ಪುಟ್ಟಮ್ಮ, ದಿವ್ಯ ಮತ್ತಿತರರಿದ್ದರು.




