ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಿ, ತಪ್ಪತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು, ಅಲ್ಲದೇ ಸೌಜನ್ಯ ಪ್ರಕರಣದ ಮರು ತನಿಖೆ ಸಾಧ್ಯವಿಲ್ಲ ಎಂದು ಹೇಳಿರುವ ಗೃಹ ಸಚಿವ ಡಾ.ಪರಮೇಶ್ವರ್ ರಾಜೀನಾಮೆಗೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಂಘಟನೆ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಕಾಲ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು. ಸೌಜನ್ಯ ಪ್ರಕರಣದ ಮರುತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಗೃಹ ಸಚಿವ ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ 2001 ರಿಂದ 2011ರವರೆಗೆ ಪೋಲಿಸ್ ಇಲಾಖೆಯ ಮಾಹಿತಿಯಂತೆ 452 ಅಸಹಜ ಸಾವು ಪ್ರಕರಣ ನಡೆದಿದೆ, ಇಷ್ಟೊಂದು ಅಸಹಜ ಸಾವು ಸಂಭವಿಸಿದರೂ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ದೊಡ್ಡ ಪ್ರಮಾದವಾಗಿದೆ, ಈ ಪ್ರಕರಣಗಳ ಹಿಂದಿರುವ ಕೊಲೆಗಾರರನ್ನು ಪತ್ತೆ ಹಚ್ಚಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಯಿತು. ಸಿಓಡಿ, ಸಿಐಡಿ,ಸಿಬಿಐ ತನಿಖೆ ನಡೆದು ಅಮಾಯಕ ಸಂತೋಷ್ ರಾವ್ ನನ್ನ ಆರೋಪಿ ಎಂದು ಬಿಂಬಿಸಿದವು, ಆದರೆ ಸಿಬಿಐ ನ್ಯಾಯಾಲಯ ಆತನನ್ನು ನೀರ್ದೋಷಿ ಎಂದು ಬಿಡುಗಡೆ ಮಾಡಿದೆ. ನಿಜವಾದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಕೂಡ ವಿಫಲವಾಗಿದೆ ಎಂದು ದೂರಿದರು.
ಸೌಜನ್ಯ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ಸರ್ಕಾರಿ ಅಭಿಯೋಜಕರ ಒಳಗೊಂಡ ವಿಶೇಷ ತನಿಖಾ ದಳ ರಚಿಸಬೇಕು, ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು, ಗೃಹ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಿ ತನಿಖೆ ನಡೆಸಬೇಕು, ನ್ಯಾಯಾಧೀಶ ವರ್ಮಾ ಆಯೋಗದ ಶಿಫಾರಸು ಜಾರಿ ಮಾಡಬೇಕೆಂದರು.
1987ರಲ್ಲಿ ಪದ್ಮಲತಾ ಮತ್ತು ಆನೆ ಮಾವುತ ನಾರಾಯಣ ಹಾಗೂ ಆಕೆಯ ತಂಗಿ ಯಮುನ ಜೋಡಿ ಕೊಲೆ ಪ್ರಕರಣ ಸೇರಿದಂತೆ ಇಲ್ಲಿವರೆಗೆ ನಡೆದಿರುವ ಎಲ್ಲಾ ಅಸಹಜ ಸಾವು, ಕೊಲೆ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜನವಾದಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಸುಶೀಲಾ, ಶೋಭಾ,ಮಂಜುಳ, ರಾಣಿ, ಪ್ರೇಮಮ್ಮ, ಸುವರ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.




