ಮಂಡ್ಯ ನಗರದಲ್ಲೊಂದು ಅಂತರ್ ಧರ್ಮಿಯ ಪ್ರೇಮ ಪ್ರಕರಣ ನಡೆದಿದೆ. ಹಿಂದೂ ಯುವತಿ ತನುಜ (19) ಹಾಗೂ ಮುಸ್ಲಿಂ ಯುವಕ ಶಾರುಖಾನ್ ನೂರ್ ಅಹಮದ್ ಲಕ್ಷ್ಮೇಕರ (24) ಇಬ್ಬರು ಪ್ರಾಪ್ತರಾಗಿದ್ದು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ತನುಜ ಮಂಡ್ಯ ನಗರದ ಶಂಕರಪುರ (ಶಂಕರ ಮಠ)ನಿವಾಸಿಯಾಗಿದ್ದು, ಯುವಕ ಶಾರುಖಾನ್ ನೂರ್ ಅಹ್ಮದ್ ಲಕ್ಷ್ಮೇ ಕರ ಮಂಡ್ಯನಗರದ ಪೇಟೆ ಬೀದಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಯುವತಿ ಹೋಟೆಲ್ ಪಕ್ಕದಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಾಫಿ, ಟೀ ಕುಡಿಯಲು ಹೋಟೆಲ್ಗೆ ಹೋಗುತ್ತಿದ್ದ ತನುಜಾಳಿಗೂ ಅಲ್ಲಿ ಸಪ್ಲೈಯರ್ ಆಗಿದ್ದ ಶಾರುಖಾನ್ ನೂರ್ ಅಹಮದ್ ನಡುವೆ ಪ್ರೀತಿ ಬೆಳೆದಿದೆ. ಹೀಗೆ ಕೆಲ ದಿನಗಳ ಹಿಂದೆ ತನುಜ ಹಾಗೂ ಶಾರುಖ್ ಖಾನ್ ಇಬ್ಬರೂ ಮಂಡ್ಯ ಬಿಟ್ಟು ತೆರಳಿದ್ದಾರೆ.ಶಾರುಖಾನ್ ತನುಜಾಳನ್ನು ತನ್ನೂರು ಹಳಿಯಾಳಕ್ಕೆ ಕರೆದುಕೊಂಡು ಹೋಗಿದ್ದಾನೆ.
ತನುಜ ಮನೆಯಿಂದ ಕಾಣೆಯಾಗಿರುವುದು ಗೊತ್ತಾದ ಕೂಡಲೇ ಆಕೆಯ ಪೋಷಕರು ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ತನುಜಾ ನಾಪತ್ತೆಯಾದ ಬಗ್ಗೆ ದೂರು ದಾಖಲು ಮಾಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮಂಡ್ಯ ಸೆಂಟ್ರಲ್ ಠಾಣೆಯ ಪೊಲೀಸರು, ಹುಬ್ಬಳ್ಳಿಯಲ್ಲಿ ತನುಜಾ ಹಾಗೂ ಶಾರುಖಾನ್ ಅವರನ್ನು ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ಪತ್ತೆ ಹಚ್ಚಿ ಕರೆತಂದು, ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.
ಯುವತಿ ಹೇಳಿದ್ದೇನು ?
ಈ ಸಂದರ್ಭದಲ್ಲಿ ಯುವತಿ ತಾನು ಶಾರುಖಾನ್ ನೂರ್ ಅಹ್ಮದ್ ಅನ್ನು ಪ್ರೀತಿಸುತ್ತಿದ್ದು, ಆತನನ್ನೇ ವಿವಾಹವಾಗುವುದಾಗಿ ಪೋಷಕರ ಎದುರು ಹೇಳಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಪೋಷಕರಿಗೆ ಶಾರು ಖಾನ್ ಮುಸಲ್ಮಾನ ಎಂಬುದು ತಿಳಿದಿದೆ. ಈ ಸಂದರ್ಭದಲ್ಲಿ ತನುಜಾ ಪೋಷಕರು ಆಕೆಗೆ ನಮ್ಮ ಧರ್ಮವೇ ಬೇರೆ, ಅವರ ಧರ್ಮವೇ ಬೇರೆ ಎಂದು ತಿಳಿ ಹೇಳಿ ಮದುವೆ ಮಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವಕ ಶಾರುಖಾನನಿಗೂ ತಿಳಿಹೇಳಿ ಕಳುಹಿಸಲಾಗಿತ್ತು. ಆದರೆ ಇದಾಗಿ ಒಂದು ವಾರ ಕಳೆಯುವಷ್ಟರಲ್ಲಿಯೇ ಯುವತಿ ತನುಜ ಶಾರುಖಾನ್ ಊರಾದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ತೆರಳಿ ಅಲ್ಲಿ ಆತನನ್ನು ಪತ್ತೆ ಮಾಡಿ ಆತನ ಮನೆ ಸೇರಿದ್ದಾಳೆ.
ಇದೆಲ್ಲ ಆಗಿ 15 ದಿನ ಕಳೆದ ನಂತರ ಆಗಸ್ಟ್ 18ರಂದು ಯುವತಿ ತನುಜ ಕಾಣೆಯಾಗಿದ್ದಾಳೆಂದು ಆಕೆಯ ಪೋಷಕರು ಮತ್ತೆ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸೆಂಟ್ರಲ್ ಠಾಣೆಯ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ಯುವತಿ ತನುಜರನ್ನು ಕರೆ ತರುತ್ತಾರೆ.
ಈ ಬಗ್ಗೆ ಆಕೆಯನ್ನು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ತನುಜ ನಾನು ಹಾಗೂ ಶಾರುಖಾನ್ ನೂರ್ ಅಹಮದ್ ಪರಸ್ಪರ ಪ್ರೀತಿಸುತ್ತಿದ್ದು, ನಾನೇ ಸ್ವಯಿಚ್ಛೆಯಿಂದ ಆತನನ್ನು ಹುಡುಕಿಕೊಂಡು ಆತನ ಊರಾದ ಹಳಿಯಾಳಕ್ಕೆ ಹೋಗಿದ್ದೆ. ಕಳೆದ ಒಂದು ತಿಂಗಳಿಂದ ಆತನ ಮನೆಯವರ ಜೊತೆಗಿದ್ದೆ. ಆತನ ತಾಯಿ, ಸಹೋದರ, ಸಹೋದರಿ ಎಲ್ಲರೂ ಒಳ್ಳೆಯವರಾಗಿದ್ದು, ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ನಾನು ಬಲವಂತವಾಗಿ ಶಾರುಖಾನ್ ನೂರ್ ಅಹಮದ್ ಜೊತೆ ಹೋಗಿಲ್ಲ. ನಾನು ಆತನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಇರುವ ಉದ್ದೇಶದಿಂದ ಆತನನ್ನು ಹುಡುಕಿಕೊಂಡು ಹೋಗಿದ್ದೇನೆ ಹೊರತು, ನನ್ನ ಮೇಲೆ ಯಾವುದೇ ಒತ್ತಡಗಳಿಲ್ಲ. ಅಲ್ಲದೆ ನನ್ನ ಪೋಷಕರಿಗೆ ಆತನೊಂದಿಗೆ ವಿವಾಹ ಮಾಡಬೇಕೆಂದು ಸೂಚಿಸಿಯೇ ಇಂದು ಠಾಣೆಯಲ್ಲಿ ಹೇಳಿಕೆ ನೀಡಿ ತಾಯಿಯೊಂದಿಗೆ ಹೋಗುತ್ತಿದ್ದೇನೆ ಎಂದು ತನುಜಾ ತಿಳಿಸಿದ್ದಾಳೆ.
ಈ ಪ್ರಕರಣದ ಬಗ್ಗೆ ಸೆಂಟ್ರಲ್ ಠಾಣೆಯ ಎಸ್ಐ ವರ್ಷಾ ಅವರು, ನುಡಿ ಕರ್ನಾಟಕ.ಕಾಂ ಜೊತೆ ಮಾತನಾಡಿ, ಯುವತಿ ತನುಜ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿಕೊಂಡ ನಾವು ಮೊಬೈಲ್ ಲೋಕೇಶನ್ ಆಧಾರದ ಮೇಲೆ ಆಕೆಯನ್ನು ಹಳಿಯಾಳದಲ್ಲಿ ಪತ್ತೆ ಮಾಡಿ, ಕರೆತಂದು ಹೇಳಿಕೆ ಪಡೆದಿದ್ದೇವೆ. ಈ ಸಂದರ್ಭದಲ್ಲಿ ಆಕೆ ತಾನು ಸ್ವಯಿಚ್ಚೆಯಿಂದಲೇ ಪ್ರಿಯಕರನ ಮನೆಗೆ ತೆರಳಿದ್ದೆ ಎಂದು ಹೇಳಿಕೆ ನೀಡಿದ್ದಾಳೆ. ನಾವು ಆಕೆಯನ್ನು ತಾಯಿಯ ಜೊತೆ ಕಳಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಲವ್ ಜಿಹಾದ್ ಎಂದು ಬಿಂಬಿಸಲು ಯತ್ನ ?
ಯುವತಿ ತನುಜಾ ತನ್ನ ಪ್ರಿಯಕರ ಶಾರುಖಾನ್ ನೂರ್ ಅಹಮದ್ ನನ್ನು ಹುಡುಕಿಕೊಂಡು ಆತನ ಊರು ಹಳಿಯಾಳಕ್ಕೆ ಹೋಗಿ 15 ದಿನಗಳಾದ ನಂತರ ಆಕೆಯ ಪೋಷಕರಿಗೆ ಇದೊಂದು ಲವ್ ಜಿಹಾದ್ ಪ್ರಕರಣ ಎಂದು ದೂರು ದಾಖಲಿಸುವಂತೆ ಕೆಲವರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶಾರುಖಾನ್ ನೂರ್ ಅಹಮದ್ ತನ್ನ ಹೆಸರನ್ನು ಹಿಂದೂ ಯುವಕನ ಹೆಸರಿನಲ್ಲಿ ಶರತ್ ಬಿಎಮ್ಎ ಎಂದು ಫೇಸ್ಬುಕ್ನಲ್ಲಿ ಹಾಕಿಕೊಂಡು ಯುವತಿ ತನುಜಾಳನ್ನು ಯಾಮಾರಿಸಿದ್ದಾನೆ. ಪ್ರೀತಿ- ಪ್ರೇಮದ ಹೆಸರಿನಲ್ಲಿ ನಂಬಿಸಿದ್ದಾನೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಯುವತಿ ಪೋಷಕರ ಮೂಲಕ ಕೆಲ ಹಿಂದೂ ಸಂಘಟನೆಗಳ ಮುಖಂಡರು ಪ್ರಯತ್ನ ನಡೆಸಿದ್ದು, ಈ ಬಗ್ಗೆ ಪೋಲಿಸ್ ಅಧಿಕಾರಿಗಳೇ ನಿಷ್ಪಕ್ಷಪಾತ ತನಿಖೆ ನಡೆಸಬೇಕಿದೆ, ಈ ಪ್ರಕರಣ ಅತಿ ಸೂಕ್ಷ್ಮವಾಗಿದ್ದು, ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡದಂತೆ ಸತ್ಯ ಸಂಗತಿಯನ್ನು ಬಯಲು ಮಾಡಬೇಕಿದೆ.




