Thursday, November 19, 2026

ಪ್ರಾಯೋಗಿಕ ಆವೃತ್ತಿ

ದೇಶದ ಸಂಸ್ಕೃತಿಯಲ್ಲಿ ಭರತನಾಟ್ಯವು ವಿಶೇಷ ಕಲೆ – ಡಿ.ಸಿ. ತಮ್ಮಣ್ಣ

ಭಾರತ ದೇಶದ ಸಂಸ್ಕೃತಿಗಳಲ್ಲಿ ಒಂದಾಗಿರುವ ಭರತನಾಟ್ಯ ಗಂಡು ಕಲೆಯಾಗಿದ್ದು, ಇದು ಮಹಾಪುರುಷರಿಂದ ಮತ್ತು ಋಷಿಮುನಿಗಳಿಂದ ಸಂಗೀತದ ರೂಪಕವಾಗಿ ಉದ್ಭವವಾದದ್ದು ಎಂದು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.

ಮಂಡ್ಯನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ 28ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಗುರುದೇವೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ನಾಟ್ಯವು ಮೇಲ್ನೋಟಕ್ಕೆ ಮೈ ಕುಣಿಸುವಂತೆ ಕಂಡರೂ ಅಷ್ಟೇ ಅದರ ಉದ್ದೇಶವಲ್ಲ. ಭರತಮುನಿಗಳು ತಂದ ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ ಎಂದರು.

ಭರತನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಇಂದು ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಂಡ ಜೀವನದ ಮೂಲೋದ್ದೇಶವಾದ ಪರಮಾತ್ಮ ಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

`ಗುರುದೇವ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರು, ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಯುವಜನತೆ ಪಠ್ಯ ಹೊರತುಪಡಿಸಿ ಬೇರಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದರಿಂದ ಹೆಚ್ಚು ದುಶ್ಚಟಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಪಠ್ಯದ ಜತೆಗೆ ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸಿದರೆ ದುಶ್ಚಟಗಳಿಂದ ದೂರವಿದ್ದು, ಓದಿನಲ್ಲೂ ಮುಂದಿರುತ್ತಾರೆ ಎಂದು ತಿಳಿ ಹೇಳಿದರು.
ಒಂದು ಕಾಲದಲ್ಲಿ ಮಂಡ್ಯ ನಗರದಲ್ಲಿ ಭರತನಾಟ್ಯ ಕಲಿಯಲೆಂದೇ ಬೆಂಗಳೂರು, ಮೈಸೂರು ನಗರಗಳಿಗೆ ಹೋಗಬೇಕಾಗಿತ್ತು. ಆದರೆ, ಚೇತನಾ ರಾಧಾಕೃಷ್ಣ ದಂಪತಿ ಮಂಡ್ಯ ನಗರದಲ್ಲಿ ಅಕಾಡೆಮಿ ತೆರೆದು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಕಾವೇರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಅಕಾಡೆಮಿಯ ನಿರ್ದೇಶಕಿ ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭ ಕಿರಿಯ ಹಾಗೂ ಹಿರಿಯ ಕಲಾವಿದರು ಪ್ರದರ್ಶಿಸಿದ ವಿವಿಧ ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡವು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ