ಕೆಆರ್’ಎಸ್ ನಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ವಕೀಲರು ಮಂಡ್ಯದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ಜಿಲ್ಲಾ ವಕೀಲರ ಸಂಘದ ಆವರಣದಿಂದ ಮೆರವಣಿಗೆ ಹೊರಟ ವಕೀಲರು, ಸಂಜಯ ವೃತ್ತದಲ್ಲಿ ಪ್ರತಿಭಟಿಸಿ, ನಂತರ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಭಾಗಿಯಾದರು.
ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ, ರೈತರ ಹಿತ ಕಾಪಾಡದೇ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದೆ, ಜಲಾಶಯಗಳನ್ನ ಬರಿದು ಮಾಡಿದ್ದರೂ ನೀರು ಹರಿಸುತ್ತಿದೆ, ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯಲು ನೀರು ಸಿಗದಂತಹ ಸಂಕಷ್ಟ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಸೆ.21ಕ್ಕೆ ವಿಚಾರಣೆಯನ್ನು ಮುಂದೂಡಿದೆ, ಅಲ್ಲಿಯವರೆಗೆ ನೀರು ಬಿಡಲು ನೀರು ಎಲ್ಲಿದೆ, ಜಲಾಶಯಗಳಿಂದ ಬಿಡುಗಡೆ ಮಾಡಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕೆ ಎಲ್ ಮರಿಸ್ವಾಮಿ, ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಮಹದೇವ್, ಖಜಾಂಚಿ ಮಹೇಶ್ ಮತ್ತಿತರು ಭಾಗವಹಿಸಿದ್ದರು.




