Thursday, November 19, 2026

ಪ್ರಾಯೋಗಿಕ ಆವೃತ್ತಿ

ಭೂತಾನ್ ದೇಶವೂ….ಮುಂದುವರೆದ ಪಯಣವೂ……

✍️ ಚೇತನ್ ಕಾಗೇಪುರ

ಆಕೆಯ ಪರಿಚಯವಾದದ್ದೇ ನಾವು ನಾಲ್ಕೂ ಜನ ಸ್ನೇಹಿತರು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಕಾರಣ ನಾವು ಭೂತಾನ್ ಪ್ರವಾಸ ಸಿದ್ಧತೆ ನಡೆಸುವಾಗ ಅದೆಷ್ಟು ಅಂಜಿಕೆಯಿಂದ ಪೂರ್ವತಯಾರಿ ನಡೆಸಿದ್ದೆವು, ನಾವು ಪ್ರಯಾಣಕ್ಕೆ ಸಿದ್ಧಗೊಳಿಸಿದ್ದ ಕಾರು ಸ್ನೇಹಿತ ದಿನೇಶನ ವೇಗನ್ ಆರ್(WAGON R),ಅದರಲ್ಲಿ ಹೆಚ್ಚು ಲಗೇಜ್ ಆಗಬಾರದು ಸಾಕಷ್ಟು ಕಡಿಮೆಯಾದ, ತುಂಬಾ ಅಗತ್ಯವಿದ್ದ ವಸ್ತುಗಳ ಪಟ್ಟಿ ಮಾಡಿ ಎಲ್ಲರೂ ವಾಟ್ಸಾಪ್ ಗ್ರೂಪಿನಲ್ಲಿ ಚರ್ಚಿಸುತ್ತಾ ಹೀಗೆ ಹಲವು ದಿನಗಳ ತಯಾರಿ ಅದಾಗಿತ್ತು. ಆದರೂ ನಮ್ಮ ಕಾರು ಡಿಕ್ಕಿ ತುಂಬಾ ಸಾಮಾನುಗಳನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿತ್ತು. ನಾನಂತೂ ಹೊರಡುವ ಮೊದಲು ಕಾರಿನ ಟೈರ್ ಗಳನ್ನು ಒಂದೂ ಬಿಡದಂತೆ ಮುಟ್ಟಿ, ಗುದ್ದಿ, ಕಾಲಿನಿಂದ ಒದ್ದು ಪರೀಕ್ಷಿಸಿದ್ದೆ, ನನ್ನ ಪ್ರಕಾರ ಚಕ್ರ ಸರಿಯಿದ್ದರೆ ನಾವು ಸೇಫ್ ಆಗಿ ಇರುತ್ತೇವೆ, ಉಳಿದಂತೆ ಏನಾದರೂ ತಾಂತ್ರಿಕ ದೋಷ ಬಂದರೆ ಕಾರು ಹೇಗೂ ನಿಲ್ಲುತ್ತದೆ, ಆದರೆ ಒಂದು ವೇಳೆ ಟೈರ್ ಸರಿಯಿಲ್ಲದೆ ಸಿಡಿದರೆ ಏನು ಗತಿ ಎಂದು. ಆದರಿಲ್ಲಿ ಒಬ್ಬಳೇ ಯುವತಿ ಸುತ್ತುತ್ತಿದ್ದಾಳೆ, ಅದೂ ಸಾರ್ವಜನಿಕ ಸಾರಿಗೆಯಲ್ಲಿ, ತನ್ನ ಎಲ್ಲಾ ಲಗೇಜುಗಳನ್ನು ತನ್ನ ಹಿಂದೆ ಚಕ್ರಗಳ ಸೂಟ್ಕೇಸಿನಲ್ಲಿ ಎಳೆದುಕೊಂಡು, ಅಬ್ಬಾ ಯೆಂದುಕೊಂಡೆವು.

ಸರಿ ಎಲ್ಲರಿಗೂ ಭೂತಾನ್ ಸುತ್ತಲು ಅಧಿಕೃತ ಪರವಾನಿಗೆ ಸಿಕ್ಕಿತು. ನಾಲ್ಕು ಜನರಿದ್ದ ನಮ್ಮ ತಂಡ ಈಗ ಐದಾಗಿತ್ತು , ಎಲ್ಲರೂ ಒಟ್ಟಿಗೇ ಈಗ ಉಳಿದುಕೊಳ್ಳಲು ರೂಮ್ ಹುಡುಕಲು ಹೊರಟೆವು. ನನ್ನ ಸ್ನೇಹಿತರು ಯಾವಾಗಲೂ ರೂಮ್ ಮಾಡಲು ನನ್ನನ್ನೇ ಮುಂದಕ್ಕೆ ಬಿಡುತ್ತಿದ್ದರು, ಕಾರಣ ನಾನು ಚೆನ್ನಾಗಿ ಚೌಕಾಸಿ ಮಾಡುತ್ತೇನೆಂದು. ಇಲ್ಲೂ ಹಾಗೆಯೇ ಬೇರೆ ದೇಶದಲ್ಲೂ ನನ್ನನ್ನೇ ಮುಂದೆ ಬಿಟ್ಟರು ನಾನು ಭೂತಾನಿನ ಭಾಷೆ ಬರದಿದ್ದರೂ ಲಾಡ್ಜ್ ಮಾಲಿಕೆ ಮಹಿಳೆ ಮತ್ತು ಮಗಳು ಇಬ್ಬರೊಂದಿಗೂ ಒಂದು ಪೆನ್ ತೆಗೆದುಕೊಂಡು ಅವರ ರೇಟ್ಅನ್ನು ಒಂದು ಪುಸ್ತಕದ ಮೇಲೆ ಬರೆಯಲು ಹೇಳಿದೆ ಅದಕ್ಕೆ ಪ್ರತಿಯಾಗಿ ನಾನೊಂದು ರೇಟ್ ಬರೆಯುವುದು, ನನ್ನ ರೇಟ್ ನೋಡಿ ಅಮ್ಮ ಮಗಳು ಇಬ್ಬರೂ ನಗುತ್ತಿದ್ದರು, ಅಷ್ಟು ಕಡಿಮೆ ಬೆಲೆಗೆ ನಾನು ರೂಮ್ ಕೇಳುತ್ತಿದ್ದೆ. ಕೊನೆಗೆ ಒಂದು ರೇಟ್ ಅಂತಿಮವಾಗಿ ಎರಡು ರೂಮ್ ಪಡೆದುಕೊಂಡೆವು. ಒಂದು ಸಿಂಗಲ್ ಬೆಡ್ ನದು ಕೀರ್ತನಳಿಗಾಗಿ, ಮತ್ತೊಂದು ಮೂರು ಬೆಡ್ ನದು ನಾವು ನಾಲ್ಕೂ ಜನರಿಗಾಗಿ.

ಇದನ್ನೂ ಓದಿ : ಭೂತಾನ್ ದೇಶವೂ…. ನಮ್ಮ ಪ್ರಯಾಣವೂ…..

ನಮ್ಮ ಲಗೇಜುಗಳನ್ನು ರೂಮಿನಲ್ಲಿಟ್ಟು ಎಲ್ಲರೂ ತಿಮ್ಫು ಸಿಟಿ ಸುತ್ತಲು ಹೊರಟೆವು. ಅಲ್ಲಿಯ ಉಷ್ಣಾಂಶ ಯಾವಾಗಲೂ ಸುಮಾರು 3℃-5℃ ಅಶುಪಾಸಿನಲ್ಲೇ ಇರುತ್ತದೆಯಾದ್ದರಿಂದ ನಾವು ಮೈತುಂಬ ಜಾಕೆಟ್, ತಲೆಗೆ ಮಂಕಿ ಟೋಪಿ, ಕತ್ತಿನ ಸುತ್ತಲೂ ಮೊಪ್ಲರ್, ಅಂಗೈಗೆ ದಪ್ಪ ಉಲ್ಲನ್ ನ ಗ್ಲೋಸ್ ಹಾಕಿಕೊಂಡು ಸುತ್ತಿದೆವು.ಆದರೂ ಚಳಿಗೆ ದೇಹ ನಡುಗುತ್ತಿತ್ತು. ಆ ನಗರ ನಮ್ಮ ನಗರಗಳಂತೆ ಗಿಜಿಗುಡುವುದಿಲ್ಲ, ಕಡಿಮೆ ಜನ ಸಂಖ್ಯೆ ಹೊಂದಿದೆ, ಎಲ್ಲರೂ ಅಷ್ಟೇ ಶಿಸ್ತುಬದ್ದಿನಿಂದ , ಸೌಜನ್ಯದಿಂದ ನಡೆದುಕೊಳ್ಳುತ್ತಾರೆ ಎನಿಸಿತು.

ನಾನು, ಹೇಮಂತ್, ಮತ್ತು ಕೀರ್ತನ ಒಟ್ಟಿಗೆ ಸುತ್ತುತ್ತಿದ್ದೆವು. ಯೋಗೇಶ್ ಮತ್ತು ದಿನೇಶ ಇಬ್ಬರೂ ರಾತ್ರಿಗೆ ಊಟ ಪರ್ಸಲ್ ಅನ್ನು ರೂಮಿಗೆ ತರಲೆಂದು ಹೋಗಿದ್ದರು.ಅವರು ಕರೆ ಮಾಡುವ ವರೆಗೆ ನಾವು ಸಿಟಿಯ ಮಧ್ಯವಿರುವ ಕ್ಲಾಕ್ ಟವರ್ ಮೈದಾನದ ಲೈಟ್ ಬೆಳಕಿನಲ್ಲಿ ಸುತ್ತಾಡುತ್ತಿದ್ದೆವು. ಅಪರಿಚಿತ ಉರು, ಅಪರಿಚಿತ ದೇಶ, ಜನಗಳ ನಡುವೆ ಸುತ್ತುವುದು ನಿಜಕ್ಕೂ ಒಂದುರೀತಿ ಹೊಸ ಅನುಭವ ಕೊಡುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು ಅದರ ಸುಖ.

nudikarnatka.com
ಸಾಂಪ್ರದಾಯಿಕ ಉಡುಗೆ ಮಾರಾಟ ಮಳಿಗೆ, ಹಾಗಾಗಿ ಎಲ್ಲಾ ಮಳಿಗೆಗಳು ಬಿದಿರಿನ ಅಚ್ಛೆಯಿಂದ ಮಾಡಲ್ಪಟ್ಟಿವೆ.

ಆ ನಗರದಲ್ಲಿರುವುದು ಕೇವಲ ಎರಡೇ ವಾಣಿಜ್ಯ ಬೀದಿಗಳು, ಅಲ್ಲಿ ಕೆಲವು ಸಣ್ಣ ಸಣ್ಣ ಹೋಟೆಲ್ಗಳು ಕಂಡವು , ಹೆಚ್ಚು ಕಾಣಿಸಿದ್ದು ಬಟ್ಟೆ ಅಂಗಡಿಗಳು, ಎಲ್ಲಾ ಬಟ್ಟೆ ಅಂಗಡಿಗಳಲ್ಲೂ ಉತ್ತಮ ಜಾಕೆಟ್ ಗಳನ್ನು ಹ್ಯಾಂಗರ್ ಗಳಿಗೆ ನೇತುಹಾಕಿರುತ್ತಿದ್ದರು. ಇಲ್ಲಿಯ ವಿಶೇಷತೆ ಎಂದರೆ ಬಹುಪಾಲು ಅಂಗಡಿಗಳು, ಹೋಟೆಲ್ ಗಳು, ಲಾಡ್ಜ್ ಗಳನ್ನು ನಿರ್ವಹಿಸುತ್ತಿದ್ದವರು ಮಹಿಳೆಯರು. ನಮ್ಮ ದೇಶದಲ್ಲಿ ಮಹಿಳೆಯರನ್ನು ಹೊರಗಿನ ಕೆಲಸಗಳಿಗೆ ಬಿಡದೆ ಮಾಡಿ, ಮೈಲಿಗೆ, ಸಂಪ್ರದಾಯಗಳ ಹೆಸರಿನಲ್ಲಿ ಕೂಡಿಹಾಕಲಾಗಿದೆ. ಇತ್ತೀಚೆಗಷ್ಟೇ ಒಂದಷ್ಟು ಜನ ಮಹಿಳೆಯರು ಕಾರ್ಪೊರೇಟ್ ಕಂಪನಿಗಳಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ ಅಷ್ಟೇ. ಅದನ್ನು ಹೊರತು ಪಡಿಸಿ ಅಂಗಡಿ, ಹೋಟೆಲ್, ಲಾಡ್ಜ್ ಗಳಂತ ಉದ್ಯಮ ನಡೆಸುತ್ತಿರುವವರು ವಿರಳಾತಿವಿರಳ.

nudikarnataka.com
ಹೋಟೆಲ್ ಒಂದರಲ್ಲಿ ನೇತುಹಾಕಿದ್ದ ಭೂತಾನ್ ಆಳ್ವಿಕೆನಡೆಸಿದ ರಾಜರುಗಳ ಫೋಟೋ.

ಅಷ್ಟರಲ್ಲಿ ದಿನೇಶ್ ಮತ್ತು ಯೋಗಿ ಊಟವನ್ನು ರೂಮಿನಲ್ಲಿ ತಂದಿಟ್ಟು ಬಂದು ನಮ್ಮನ್ನು ಸೇರಿಕೊಂಡರು. ಪುನಃ ನಾನು ಹೇಮಂತ್ ಬೇರೆ ಏನಾದರೂ ತಿಂಡಿ ತಿನ್ನಲು ಹುಡುಕಿಕೊಂಡು ಹೊರಟೆವು, ಅಲ್ಲಿಯೇ ಹತ್ತಿರವಿದ್ದ ಒಂದು ಚಿಕ್ಕ ಹೋಟೆಲ್ ಒಳಗೆ ಹೋಗಿ ಇಂಗ್ಲಿಷ್ನಲ್ಲಿ ವಿಚಾರಿಸಿ ಆರ್ಡರ್ ಕೊಟ್ಟು ಕುಳಿತೆವು, ಆಗ ಹೋಟೆಲ್ ಮಾಲಿಕೆ ನಮ್ಮೊಂದಿಗೆ ಒಂದಷ್ಟು ಹರಟಿದಳು. ನೋಡಲು ಆಕೆ ತುಂಬಾ ಸುಂದರವಾಗಿದ್ದಳು.

ಆಕೆ ಹೇಮಂತನನ್ನು ನೀನೇಕೆ ಟೋಪಿ ಅಥವಾ ಮೊಪ್ಲರ್ ಹಾಕಿಲ್ಲ ಎಂದಳು, ಅದಕ್ಕೆ ಹೇಮಂತ ಹೇಳಿದ ನಾನು ಈ ಚಳಿಯನ್ನು ಎಂಜಾಯ್ ಮಾಡಬೇಕು ಅದಕ್ಕಾಗಿ ಹೀಗೆ ಸುತ್ತುತ್ತಿದ್ದೇನೆ ಎಂದ. ನಗುತ್ತಾ ಹೋಟೆಲ್ ಮಾಲಿಕೆ ಹೇಳಿದಳು ಹಾಗಾದರೆ ನಿನಗೆ ಖಂಡಿತ tonosillitis ಆಗುತ್ತದೆ ಜೋಪಾನ ಎಂದಳು. ತಕ್ಷಣಕ್ಕೆ ಅದು ಹೇಮಂತನಿಗೆ ಅರ್ಥವಾಗಲಿಲ್ಲ, ಫಾರ್ಮಸಿ ಓದಿದ್ದ ನಾನು ಕಾಲೇಜಿನಲ್ಲಿ ಓದುವಾಗ ಆ ಪದ ಕೇಳಿದ್ದೆನಾದ್ದರಿಂದ ಅದನ್ನು ಬಿಡಿಸಿ ಹೇಳಿದೆ, ತಕ್ಷಣ ಹೇಮಂತ ತನ್ನ ಕತ್ತು, ತಲೆ , ಕಿವಿಯ ಸುತ್ತಲೂ ಟೋಪಿ ಮತ್ತು ಮಪ್ಲರ್ ನಿಂದ ಮುಚ್ಚಿಕೊಂಡ. ಅಲ್ಲಿಂದ ಹೊರಟು ರೂಮಿಗೆ ಬಂದೆವು, ಅಷ್ಟರಲ್ಲಾಗಲೇ ಉಳಿದ ಎಲ್ಲರೂ ರೂಮ್ ಸೇರಿದ್ದರು. ಸಮಯ ಸುಮಾರು ರಾತ್ರಿ 9 ಘಂಟೆಯಾಗಿತ್ತು.

ಎಲ್ಲಾ ಅಂಗಡಿಗಳು ಮುಚ್ಚುತ್ತಿದ್ದವು. ಅಲ್ಲಿ ಸಂಜೆ 5 ಘಂಟೆಗೆಲ್ಲಾ ಕತ್ತಲಾಗಿಬಿಡುತ್ತದೆ ಹಾಗಾಗಿ ರಾತ್ರಿ 8 ಘಂಟೆಗೆಲ್ಲಾ ಎಷ್ಟೋ ಹೊತ್ತು ಆಗಿರುವಂತೆ ಭಾಸವಾಗುತ್ತದೆ. ಅಂದ ಹಾಗೆ ಅಲ್ಲಿನ ಸಮಯ ಭಾರತಕ್ಕಿಂತ ಅರ್ಧ ಘಂಟೆ ಮುಂದೆ ಇರುತ್ತದೆ. ಎಲ್ಲರೂ ಊಟ ಮುಗಿಸಿದೆವು. ನಾನು ಮಲಗಿದೆ ಉಳಿದ ನಾಲ್ಕೂ ಜನರು ಕಾರ್ಡ್ಸ್ ಆಡುವುದರಲ್ಲಿ ಮಗ್ನರಾಗಿದ್ದರು.

ಮುಂದುವರೆಯುವುದು…..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ