Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಾವರಿ ಕಾಯಿದೆಗೆ ತಿದ್ದುಪಡಿ ತಂದರೂ ಪರಿಣಾಮಕಾರಿ ಜಾರಿಯಾಗಿಲ್ಲ- ಮಂಗಲ ಯೋಗೀಶ್

ಸಹಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಲಿ ಎಂಬ ಆಶಯದೊಂದಿಗೆ ನೀರಾವರಿ ಕಾಯಿದೆಗೆ ತಿದ್ದುಪಡಿ ತಂದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಲದ ನಿರ್ದೇಶಕ ಮಂಗಲ ಎಂ.ಯೋಗೀಶ್ ವಿಷಾದಿಸಿದರು.

ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ನಡೆದ ನೀರು ಬಳಕೆದಾರರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರಿನ ಕರ ವಸೂಲಿಗಳು, ಭೂಗಂದಾಯವನ್ನು ಕಂದಾಯ ಇಲಾಖೆಯು ನೀರಿನ ಕಂದಾಯವನ್ನು ನೀರು ಬಳಕೆದಾರರ ಸಹಕಾರ ಸಂಘಗಳು ಸಂಗ್ರಹ ಮಾಡಲು ಸರ್ಕಾರ ಆದೇಶಿಸಿದ್ದರೂ ಇದು ಜಾರಿಯಾಗಿಲ್ಲದಿರುವುದು ರೈತರ ನಿರ್ಲಕ್ಷತನವನ್ನು ತೋರಿಸುತ್ತದೆ ಎಂದು ಹೇಳಿದರು.

ಜನರು ಪ್ರಜಾಸತ್ತಾತ್ಮಕವಾಗಿ ಸಹಕಾರ ಸಂಘಗಳಲ್ಲಿ ಆಡಳಿತ ನಡೆಸುವಂತಾಗಲು ಕಾಯಿದೆಗಳ ಬಗ್ಗೆ ನಿಯಮಗಳ ಬಗ್ಗೆ ಪಾಲನೆಗಳ ಬಗ್ಗೆ ಅರಿವನ್ನು ಹೊಂದಬೇಕಾದದ್ದು ತೀರಾ ಅವಶ್ಯವಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳು ಕೃಷಿ, ಸಹಕಾರ ಮತ್ತು ತಾಂತ್ರಿಕತೆಯನ್ನು ಒಳಗೊಂಡಿದೆ. ದೂರದೃಷ್ಠಿಯ ಕೊರತೆಯಿಂದಾಗಿ ಸಮರ್ಪಕ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳದೆ ರೈತ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸಲು ಹಿಂದುಳಿದಿದ್ದಾನೆ. ಈ ಕಾರಣದಿಂದಾಗಿ ಸಹಕಾರ ಸಂಘಗಳ ಬಲವರ್ಧನೆ ತೀರಾ ಅವಶ್ಯಕ ಎನಿಸಿದೆ ಎಂದರು.

ಕೇಂದ್ರ ಸರ್ಕಾರ ಜಲ ಆಯೋಗವನ್ನು ರಚನೆ ಮಾಡಿ ಅಣೆಕಟ್ಟೆ ಮಾತ್ರ ರಾಜ್ಯ ಸರ್ಕಾರದ್ದಾಗಿದ್ದು, ನೀರು ನಿರ್ವಹಣೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಸಮಗ್ರವಾಗಿ ತಿದ್ದುಪಡಿಯಾಗಬೇಕಾಗಿದೆ. ಅವೈಜ್ಞಾನಿಕ ನೀರು ನಿರ್ವಹಣೆಯಿಂದಾಗಿ ವಿ.ಸಿ.ವಿಭಾಗದ ರೈತರು ಪ್ರಸ್ತುತ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಎಂದರು.
ಮುಂಗಾರು-ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದ ರೈತ ಈಗ ಮುಂಗಾರು ಬೆಳೆ ಹೇಗೆ ಎಂಬ ಬಗ್ಗೆ ಚಿಂತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಪದನಿಮಿತ್ತ ನಿರ್ದೇಶಕ ಪ್ರವೀಣ್ ಅವರು ಮಾತನಾಡಿ, ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ವ್ಯಾಪ್ತಿಯ ಹೊಲಗಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸರ್ವಸದಸ್ಯರ ಸಭೆಗೆ ತಿಳಿಸಿದರು. ಮಂಗಲ ಕೆರೆಯ ನೀರು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಭೆಗೆ ಮಾಹಿತಿ ನೀಡಿದರು.

ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಮಹೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿಇಓ ಎಂ.ಬಿ. ಸುರೇಶ್ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. ಉಪಾಧ್ಯಕ್ಷ ನಾಗರಾಜು, ನಿರ್ದೇಶಕರುಗಳಾದ ಎಂ.ಕೆ. ಕೆಂಚೇಗೌಡ, ಎಂ.ಸಿ. ರವಿಕುಮಾರ್, ಎಂ.ಜೆ. ಗಿರೀಶ, ಚಂದ್ರಶೇಖರ್, ರೇಖಾ, ಮಾಜಿ ಪ್ರಧಾನ್ ಕೆ. ಶಂಕರೇಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!